ಜಾಗತಿಕ ತೆರಿಗೆ ಸುಧಾರಣೆಗೆ ಅಸ್ತು, ಎಂಎನ್‌ಸಿ ಕಂಪನಿಗಳಿಗೆ ಕನಿಷ್ಠ 15% ತೆರಿಗೆ ವಿಧಿಸಲು ಹಾದಿ ಸುಗಮ

ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ನ್ಯಾಯಯುತ ತೆರಿಗೆಯನ್ನು ಅಳವಡಿಸುವ ಉದ್ದೇಶದಿಂದ 136 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದ್ದು, ಜಾಗತಿಕ ಕಾರ್ಪೊರೇಟ್‌ ಕಂಪನಿಗಳಿಗೆ ಕನಿಷ್ಠ ಶೇ. 15 ತೆರಿಗೆ ವಿಧಿಸಲು ಇದರಿಂದ ಅನುಕೂಲವಾಗಲಿದೆ.

ಜಾಗತಿಕ ತೆರಿಗೆ ಸುಧಾರಣೆಗೆ ಅಸ್ತು, ಎಂಎನ್‌ಸಿ ಕಂಪನಿಗಳಿಗೆ ಕನಿಷ್ಠ 15% ತೆರಿಗೆ ವಿಧಿಸಲು ಹಾದಿ ಸುಗಮ
Linkup
ಹೊಸದಿಲ್ಲಿ: ಬಹು ರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ನ್ಯಾಯಯುತ ತೆರಿಗೆಯನ್ನು ಅಳವಡಿಸುವ ಉದ್ದೇಶದಿಂದ 136 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಜಾಗತಿಕ ಕಾರ್ಪೊರೇಟ್‌ ಕಂಪನಿಗಳಿಗೆ ಕನಿಷ್ಠ ಶೇ. 15 ತೆರಿಗೆ ವಿಧಿಸಲು ಇದರಿಂದ ಹಾದಿ ಸುಗಮವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಕನಿಷ್ಠ ಶೇ.15 ತೆರಿಗೆ ವಿಧಿಸುವ ಒಪ್ಪಂದವನ್ನು ಜಿ 20 ರಾಷ್ಟ್ರಗಳು ಅನುಮೋದಿಸಿವೆ ಎಂದು ಅಮೆರಿಕದ ಹಣಕಾಸು ಸಚಿವೆ ಜನೆತ್‌ ಎಲೆನ್‌ ತಿಳಿಸಿದ್ದಾರೆ. ಇದನ್ನು ಚಾರಿತ್ರಿಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಜಿ 20ರಲ್ಲಿ ಭಾರತ, ಅಮೆರಿಕ, ರಷ್ಯಾ, ಚೀನಾ, ಜಪಾನ್‌, ಐರೋಪ್ಯ ಒಕ್ಕೂಟ, ಸೌದಿ ಅರೇಬಿಯಾ ಸೇರಿ ಪ್ರಮುಖ ರಾಷ್ಟ್ರಗಳಿವೆ. ವಿಶ್ವ ಜಿಡಿಪಿಯ ಶೇ. 90 ಪಾಲನ್ನು ಇದು ಹೊಂದಿದೆ. ಎಂಎನ್‌ಸಿಗಳಿಗೆ ಜಾಗತಿಕ ಏಕರೂಪದ ತೆರಿಗೆ ವಿಧಿಸುವ ಪ್ರಸ್ತಾಪ 2017ರಲ್ಲಿ ಮಂಡಿಸಲಾಗಿತ್ತು. ಜಾಗತಿಕ ದಿಗ್ಗಜ ಕಂಪನಿಗಳು ಕಡಿಮೆ ತೆರಿಗೆ ಇರುವ ರಾಷ್ಟ್ರಗಳಲ್ಲಿ ತಮ್ಮ ತೆರಿಗೆ ಬಿಲ್‌ಗಳನ್ನು ಪಾವತಿಸಿ ತೆರಿಗೆ ಉಳಿತಾಯ ಮಾಡುವುದರಲ್ಲಿ ನೈಪುಣ್ಯತೆ ಪಡೆದಿವೆ. ಆದರೆ ಇದರಿಂದ ಹಲವು ರಾಷ್ಟ್ರಗಳಿಗೆ ತೆರಿಗೆ ಸಂಗ್ರಹದಲ್ಲಿ ಭಾರಿ ವ್ಯತ್ಯಯವಾಗುತ್ತದೆ. ಆದ್ದರಿಂದ ಜಾಗತಿಕ ಕನಿಷ್ಠ ತೆರಿಗೆಯನ್ನು ವಿಧಿಸಿದರೆ, ಎಂಎನ್‌ಸಿಗಳು ತಮ್ಮ ತವರು ರಾಷ್ಟ್ರಗಳಲ್ಲಿಯೇ ತೆರಿಗೆ ಪಾವತಿಸುವ ಹಾಗೂ ಕಡಿಮೆ ತೆರಿಗೆ ಇರುವ ರಾಷ್ಟ್ರಗಳಿಗೆ ಸ್ಥಳಾಂತರಿಸುವ ಸಾಧ್ಯತೆ ಇಲ್ಲ ಎಂದು ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ಎಂಎನ್‌ಸಿಗಳು ತೆರಿಗೆದಾರರಿಗೆ ಸ್ವರ್ಗ ಎಂದು ಪರಿಗಣನೆಯಾಗಿರುವ ರಾಷ್ಟ್ರಗಳಿಗೆ ತೆರಿಗೆ ಉತ್ತರದಾಯಿತ್ವವನ್ನು ಸ್ಥಳಾಂತರಗೊಳಿಸುವುದನ್ನು ನಿರುತ್ತೇಜನಗೊಳಿಸುವುದು ಈ ಒಪ್ಪಂದದ ಉದ್ದೇಶ. ಯಾರಿಗೆ ಅನ್ವಯ? ವಾರ್ಷಿಕ 867 ದಶಲಕ್ಷ ಡಾಲರ್‌ಗಿಂತ (ಅಂದಾಜು 6,415 ಕೋಟಿ ರೂ.) ಹೆಚ್ಚು ಆದಾಯ ಇರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಅನ್ವಯವಾಗಲಿದೆ. ಅಂಥ ಕಂಪನಿಗಳು ವಿದೇಶಗಳಲ್ಲಿ ನಡೆಸುವ ವಹಿವಾಟಿನಲ್ಲಿ ಗಳಿಸುವ ತೆರಿಗೆಗೆ ಶೇ. 15ರ ಜಾಗತಿಕ ಕನಿಷ್ಠ ತೆರಿಗೆ ಪಾವತಿಸಬೇಕಾಗುತ್ತದೆ. ಅದಕ್ಕಿಂತ ಕನಿಷ್ಠ ಮಟ್ಟಕ್ಕೆ ತೆರಿಗೆಯನ್ನು ಇಳಿಸುವಂತಿಲ್ಲ. ಕೋವಿಡ್‌ ಬಿಕ್ಕಟ್ಟಿನಿಂದ ಆರ್ಥಿಕ ಸವಾಲು ಎದುರಿಸುತ್ತಿರುವ ರಾಷ್ಟ್ರಗಳಿಗೆ ಹೆಚ್ಚಿನ ತೆರಿಗೆ ಸಂಗ್ರಹಿಸಲು ಅವಕಾಶ ಉಂಟಾಗಲಿದೆ.