ಈ ಕಾರಿಗೆ ಪೆಟ್ರೋಲ್‌, ಡೀಸೆಲ್‌ ಬೇಡವೇ ಬೇಡ, ಚಾರ್ಜೂ ಹಾಕಂಗಿಲ್ಲ! ಮಾರುತಿ ಸುಜುಕಿ, ಟೊಯೊಟಾದಿಂದ ಅದ್ಭುತ ಪ್ರಯೋಗ!

ಈ ವಿಶೇಷ ಕಾರಿಗೆ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಅಗತ್ಯವೇ ಇಲ್ಲ. ಹಾಗೆ ನೋಡಿದರೆ ಚಾರ್ಜಿಂಗೂ ಹಾಕಬೇಕಿಲ್ಲ. ಕಾರಿನಲ್ಲಿ ಕುಳೀತು ನೀವು ಎಷ್ಟು ದೂರ ಸಾಗಿದರೂ ಸಾಗುತ್ತಲೇ ಇರುತ್ತದೆ ಈ ಕಾರು!

ಈ ಕಾರಿಗೆ ಪೆಟ್ರೋಲ್‌, ಡೀಸೆಲ್‌ ಬೇಡವೇ ಬೇಡ, ಚಾರ್ಜೂ ಹಾಕಂಗಿಲ್ಲ! ಮಾರುತಿ ಸುಜುಕಿ, ಟೊಯೊಟಾದಿಂದ ಅದ್ಭುತ ಪ್ರಯೋಗ!
Linkup
ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಎಲೆಕ್ಟ್ರಿಕ್ ವಾಹನಗಳು ಸಂಚಲನ ಸೃಷ್ಟಿಸಿವೆ. ಈಗಾಗಲೇ ಬಹುತೇಕ ಕಂಪೆನಿಗಳು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. ಆದರೆ, ಪ್ರಸ್ತುತ ರಸ್ತೆಗಿಳಿದಿರುವ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಹೀಗಾಗಿ ಎಲೆಕ್ಟ್ರಿಕ್‌ ವಾಹನಗಳ ಬೆಳವಣಿಗೆ ಕುಂಟುತ್ತಾ ಸಾಗಿದೆ. ಆದರೆ, ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಕಂಪನಿಗಳು ಚಾರ್ಚಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿವೆ. ಇಂಧನವನ್ನೂ ಹಾಕದೆ, ಚಾರ್ಜಿಂಗೂ ಮಾಡದೆ ಓಡಬಲ್ಲ ಕಾರನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಈ ವಿಶೇಷ ಕಾರಿಗೆ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಅಗತ್ಯವೇ ಇಲ್ಲ. ಹಾಗೆ ನೋಡಿದರೆ ಚಾರ್ಜಿಂಗೂ ಹಾಕಬೇಕಿಲ್ಲ. ಕಾರಿನಲ್ಲಿ ಕುಳಿತು ನೀವು ಎಷ್ಟು ದೂರ ಸಾಗಿದರೂ ಸಾಗುತ್ತಲೇ ಇರುತ್ತದೆ ಈ ಕಾರು! ಇಂತಹದೊಂದು ಅದ್ಭುತ ಪ್ರಯೋಗಕ್ಕೆ ಇಳಿದಿವೆ ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿಗಳು. ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಹಾಗೂ ಇತರ ಕಂಪನಿಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ವಿಷಯದಲ್ಲಿ ಮಾರುತಿ ಸುಜುಕಿ ಕಂಪನಿ ಸ್ವಲ್ಪ ಹಿಂದೆಯೇ ಉಳಿದಿದೆ. ಆದರೆ, ಇದಕ್ಕೂ ಒಂದು ಕಾರಣವಿದೆ ಎಂದಿದೆ ಮಾರುತಿ-ಸುಜುಕಿ. ಈ ಕಂಪೆನಿ ಇದೀಗ ಹೊಸ ಮಾದರಿಯ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು (ಎಚ್‌ಇವಿ) ನಿರ್ಮಿಸುತ್ತಿದೆ. ಈ ಕಾರಿನ ವಿಶೇಷತೆ ಎಂದರೆ ಇದಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಬೇಕಿಲ್ಲ. ಹಾಗೆಯೇ ಹೊರಗಿನಿಂದ ಚಾರ್ಜ್ ಕೂಡ ಮಾಡಬೇಕಿಲ್ಲ. ಮತ್ತೆ ಈ ಕಾರು ಚಲಿಸುವುದಾದರೂ ಹೇಗೆ ಎನ್ನುತ್ತೀರಾ. ಈ ಕಾರು ಓಡುತ್ತಿರುವಾಗಲೇ ತನ್ನಷ್ಟಕ್ಕೆ ತಾನೇ ಚಾರ್ಜ್‌ ಆಗುವ ತಂತ್ರಜ್ಞಾನ ಹೊಂದಿರಲಿದೆ. ಅಂದರೆ ಈ ಕಾರಿನ ಬ್ಯಾಟರಿಗಳು ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ. ಸ್ವಯಂಚಾಲಿತ ಚಾರ್ಜ್‌ ಹೇಗೆ? ವಾಹನ ಓಡಿಸುವಾಗ ಬ್ಯಾಟರಿಗಳು ಆಟೋಮ್ಯಾಟಿಕ್ ಚಾರ್ಜ್ ಆಗಲಿದ್ದು, ಅದರಂತೆ ಇಂಧನ ತುಂಬಿಸದೇ ಅಥವಾ ಚಾರ್ಜ್ ಸ್ಟೇಷನ್ಗೆ ಹೋಗದೇ ಕಾರನ್ನು ಓಡಿಸುತ್ತಲೇ ಇರಬಹುದು. ಇದರಿಂದ ಇಂಧನದ ಖರ್ಚು ಉಳಿಯಲಿದೆ. ಜತೆಗೆ ಇದರಿಂದ ಯಾವುದೇ ಮಾಲಿನ್ಯ ಕೂಡ ಇಲ್ಲದಿರುವುದರಿಂದ ಪರಿಸರ ಸ್ನೇಹಿ ತಂತ್ರಜ್ಞಾನ ಎನಿಸಿದೆ. ಈ ವಾಹನದ ಬೆಲೆ ಎಷ್ಟಿರಲಿದೆ? ಇಂಧನವನ್ನೂ ಹಾಕದೇ, ಚಾರ್ಜನ್ನೂ ಮಾಡದೆ ತನ್ನಷ್ಟಕ್ಕೆ ತಾನೇ ಓಡುವ ಈ ಕಾರಿನ ಬೆಲೆ ರಷ್ಟಿರಬಹದು ಎಂಬ ಪ್ರಶ್ನೆ ಎಲ್ಲರಲ್ಲೂ ಬಂದೇ ಬರುತ್ತದೆ. ವರದಿಗಳ ಪ್ರಕಾರ ಈ ಕಾರು ಸುಮಾರು 13,700 ಡಾಲರ್‌ (ಸುಮಾರು 10 ಲಕ್ಷ ರೂಪಾಯಿ)ಗೆ ಲಭ್ಯವಾಗಬಹುದು ಎನ್ನಲಾಗಿದೆ. ಪ್ರಸ್ತುತ ಭಾರತದ ರಸ್ತೆಗಳಲ್ಲಿ ವ್ಯಾಗನ್‌-ಆರ್‌ ಕಾರಿಗೆ ಈ ಹೊಸ ತಂತ್ರಜ್ಞಾನದ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕೆ 10ರಿಂದ 25 ಕಿ.ವಾ. ಲಿಥಿಯಂ ಅಯಾನ್‌ ಬ್ಯಾಟರಿ ಬಳಸಲಾಗುತ್ತಿದೆ. ಒಂದು ವೇಳೆ ಈ ತಂತ್ರಜ್ಞಾನ ಯಶಸ್ವಿಯಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಏನಿದು ವಿಶೇಷ ತಂತ್ರಜ್ಞಾನ? ಈ ಕಾರುಗಳಲ್ಲಿ, ಎಲೆಕ್ಟ್ರಿಕ್ ಚಾರ್ಜಿಂಗ್ಗಾಗಿ ರಚಿಸಲಾದ ವಿಶೇಷ ಇಂಟರ್ನಲ್ ಕಂಬುಷ್ಟನ್ ಎಂಜಿನ್ (ICE-electrified vehicles)ನೀಡಲಾಗುತ್ತಿದೆ. ಇದು ಬ್ಯಾಟರಿಗಳಿಗೆ ಪವರ್ ನೀಡುವ ಮೂಲಕ ಚಾರ್ಜ್‌ ಆಗುತ್ತದೆ. ಅಂದರೆ, ವಾಹನದ ಚಕ್ರಗಳು ತಿರುಗಿದಂತೆ ಕಾರಿನಲ್ಲಿ ನೀಡಲಾಗಿರುವ ಬ್ಯಾಟರಿಗಳು ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುತ್ತದೆ. ಇದರಿಂದ ಬ್ಯಾಟರಿ ಚಾರ್ಜ್ಗಾಗಿ ಪ್ರತ್ಯೇಕವಾಗಿ ಪಾವತಿಸಬೇಕಾಗಿಲ್ಲ. ಜಪಾನಿನ ಟೊಯೋಟಾ ಕಂಪೆನಿಯ ಜೊತೆಗೂಡಿ ಮಾರುತಿ ಸುಜುಕಿ ಈ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುತ್ತಿದ್ದು, ಮುಂದಿನ ತಿಂಗಳಿನಿಂದ ಕೆಲವು ಎಲೆಕ್ಟ್ರಿಕ್ ವಾಹನಗಳ ಜಂಟಿ ಪರೀಕ್ಷೆ ನಡೆಸಲಿದ್ದೇವೆ ಎಂದು ಮಾರುತಿ ಸುಜುಕಿ ಕಂಪೆನಿಯ ಕಾರ್ಪೊರೇಟ್ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಭಾರತಿ ತಿಳಿಸಿದ್ದಾರೆ. ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೂಲಸೌಕರ್ಯವು ದೇಶದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿಲ್ಲದಿದ್ದರೆ, ಸ್ವಯಂ-ಚಾರ್ಜಿಂಗ್ ತಂತ್ರಜ್ಞಾನವು ಉತ್ತಮ ಆಯ್ಕೆಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾವು ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದೇವೆ ಎಂದು ರಾಹುಲ್ ತಿಳಿಸಿದ್ದಾರೆ.