ಕೊರೊನಾ: ಕೇಂದ್ರದಿಂದ ಮತ್ತೊಂದು ನೆರವಿನ ಪ್ಯಾಕೇಜ್‌ ಘೋಷಣೆ ಸಾಧ್ಯತೆ

ಕೊರೊನಾ ಬಿಕ್ಕಟ್ಟಿನ ಹೊಡೆತದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಪ್ರವಾಸೋದ್ಯಮ, ಹೋಟೆಲ್‌, ವೈಮಾನಿಕ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಕೇಂದ್ರ ಸರಕಾರ ನೆರವು ಪ್ರಕಟಿಸುವ ಸಾಧ್ಯತೆ ಇದೆ.

ಕೊರೊನಾ: ಕೇಂದ್ರದಿಂದ ಮತ್ತೊಂದು ನೆರವಿನ ಪ್ಯಾಕೇಜ್‌ ಘೋಷಣೆ ಸಾಧ್ಯತೆ
Linkup
ಹೊಸದಿಲ್ಲಿ: ಕೋವಿಡ್‌ 2ನೇ ಅಲೆಯಿಂದ ಸಂಕಷ್ಟಕ್ಕೀಡಾಗಿರುವ ವಲಯಗಳಿಗೆ ಕೇಂದ್ರ ಸರಕಾರ ನೆರವಿನ ಪ್ಯಾಕೇಜ್‌ ಘೋಷಿಸಲು ಯೋಜಿಸಿದೆ. ಕೋವಿಡ್‌ ಹೊಡೆತದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಪ್ರವಾಸೋದ್ಯಮ, ಹೋಟೆಲ್‌, ವೈಮಾನಿಕ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್‌ಎಂಇ) ನೆರವು ಪ್ರಕಟಿಸುವ ಸಾಧ್ಯತೆ ಇದೆ. ಈ ಕುರಿತ ಪ್ರಸ್ತಾವಗಳನ್ನು ಹಣಕಾಸು ಸಚಿವಾಲಯ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ನೆರವಿನ ಪ್ಯಾಕೇಜ್‌ ಕುರಿತ ಚರ್ಚೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಘೋಷಣೆಯ ಕಾಲಮಿತಿ ನಿಗದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕೋವಿಡ್‌-19 ಎರಡನೇ ಅಲೆಯನ್ನು ನಿಯಂತ್ರಿಸಲು ನಾನಾ ರಾಜ್ಯಗಳಲ್ಲಿ ಭಾಗಶಃ ಲಾಕ್‌ಡೌನ್‌, ನಿರ್ಬಂಧಗಳು ಜಾರಿಯಲ್ಲಿವೆ. ಇದರ ಪರಿಣಾಮ ಹಲವು ವಲಯಗಳಿಗೆ ತೀವ್ರ ಹೊಡೆತ ಬಿದ್ದಿದೆ. ಕಳೆದ ಏಪ್ರಿಲ್‌ನಲ್ಲಿ ನಿರುದ್ಯೋಗದ ಪ್ರಮಾಣ ಗಣನೀಯ ಏರಿಕೆಯಾಗಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಸಂಕಷ್ಟದಲ್ಲಿವೆ. ಹೀಗಾಗಿ ಆರ್ಥಿಕತೆಯ ಚೇತರಿಕೆಗೆ ಮತ್ತೊಂದು ಸುತ್ತಿನ ನೆರವಿನ ಪ್ಯಾಕೇಜ್‌ ಘೋಷಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಹಣಕಾಸು ಸಚಿವಾಲಯ ಕಳೆದ ಏಪ್ರಿಲ್‌ನಲ್ಲಿ ಬಂಡವಾಳ ವೆಚ್ಚ ಕುರಿತ ನಿಯಮಗಳನ್ನು ಸಡಿಲಗೊಳಿಸಿತ್ತು. ಕೇಂದ್ರ ಸರಕಾರ ಕಳೆದ ವರ್ಷ 20 ಲಕ್ಷ ಕೋಟಿ ರೂ.ಗಳ ಮೆಗಾ ನೆರವಿನ ಪ್ಯಾಕೇಜ್‌ ಘೋಷಿಸಿತ್ತು. ಅದು ಎಷ್ಟಮಟ್ಟಿಗೆ ಜನರಿಗೆ ತಲುಪಿದೆ ಎಂಬ ಪ್ರಶ್ನೆಗಳ ನಡುವೆಯೇ ಇದೀಗ ಮತ್ತೊಂದು ಪ್ಯಾಕೇಜ್‌ ಘೋಷಣೆಗೆ ಸಿದ್ಧತೆ ನಡೆಯುತ್ತಿದೆ.