ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿ ಆರ್ಭಟ, 831 ಅಂಕ ಏರಿಕೆ ಕಂಡ ಸೆನ್ಸೆಕ್ಸ್‌

ಕಳೆದ ಮೂರು ವಹಿವಾಟುಗಳಲ್ಲಿ ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ಮತ್ತೆ ಏರಿಕೆ ಹಾದಿಗೆ ಮರಳಿದ್ದು, ಬಿಎಸ್‌ಇ ಸೆನ್ಸೆಕ್ಸ್‌ ಸೋಮವಾರ ಬರೋಬ್ಬರಿ 831 ಅಂಕಗಳ ಏರಿಕೆ ಕಂಡಿದೆ.

ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿ ಆರ್ಭಟ, 831 ಅಂಕ ಏರಿಕೆ ಕಂಡ ಸೆನ್ಸೆಕ್ಸ್‌
Linkup
ಮುಂಬಯಿ: ಕಳೆದ ಮೂರು ದಿನಗಳಿಂದ ಸತತವಾಗಿ ಇಳಿಕೆಯ ಹಾದಿಯಲ್ಲಿದ್ದ ಷೇರು ಮಾರುಕಟ್ಟೆ ಮತ್ತೆ ಏರಿಕೆ ಹಾದಿಗೆ ಮರಳಿದೆ. ಐಟಿ ಕಂಪನಿಗಳು ಮತ್ತು ಕೆಲವು ಹಣಕಾಸು ಸಂಸ್ಥೆಗಳ ಷೇರುಗಳ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಬರೋಬ್ಬರಿ 831 ಅಂಕಗಳ ಏರಿಕೆ ಕಂಡ ಬಾಂಬೆ ಷೇರು ವಿನಿಮಯ ಮಾರುಕಟ್ಟೆ () ಸೂಚ್ಯಂಕ ಮತ್ತೆ 60,000 ಅಂಕಗಳು ಗಡಿ ದಾಟಿದೆ. ದಿನದಂತ್ಯಕ್ಕೆ 60,138 ಅಂಕಳಿಗೆ ವಹಿವಾಟು ಕೊನೆಗೊಳಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ 258 ಅಂಕ ಏರಿಕೆ ಕಂಡು 17,930 ಅಂಕಗಳಿಗೆ ದಿನದಂತ್ಯಕ್ಕೆ ಸ್ಥಿರವಾಯಿತು. ಈ ಮೂಲಕ 18000 ಅಂಕಗಳ ಗುರಿ ತಲುಪಲು ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಉಳಿದಿದೆ. ಒಟ್ಟಾರೆ ಮಾರುಕಟ್ಟೆಯೇ ವಾರದ ಮೊದಲ ದಿನ ಏರಿಕೆಯ ಹಾದಿಯಲ್ಲಿತ್ತು. ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕ ಶೇ. 1.8ರಷ್ಟು ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್‌ ಇಂಡೆಕ್ಸ್‌ ಶೇ. 1.1ರಷ್ಟು ಗಳಿಕೆ ದಾಖಲಿಸಿತು. ಬಿಎಸ್‌ಇ ರಿಯಾಲ್ಟಿ ಸೂಚ್ಯಂಕ ಬರೋಬ್ಬರಿ ಶೇ. 3.7ರಷ್ಟು ಏರಿಕೆ ಕಂಡರೆ, ಟೆಲಿಕಾಂ ಮತ್ತು ಮೆಟಲ್‌ ಸೂಚ್ಯಂಕಗಳು ಶೇ. 3.5ರಷ್ಟು ಏರಿಕೆ ಕಂಡವು. ಐಟಿ ಸೂಚ್ಯಂಕ ಮತ್ತು ಬ್ಯಾಂಕ್‌ ಸೂಚ್ಯಂಕ ಕ್ರಮವಾಗಿ ಶೇ. 2.3 ಹಾಗೂ ಶೇ. 1.8ರಷ್ಟು ಏರಿಕೆ ಕಂಡಿತು. ಸೆನ್ಸೆಕ್ಸ್‌ನಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ ಶೇ. 7.5ರಷ್ಟು ಗಳಿಕೆ ದಾಖಲಿಸಿದರೆ, ಭಾರ್ತಿ ಏರ್‌ಟೆಲ್‌ ಶೇ. 4ರಷ್ಟು ಏರಿಕೆ ಕಂಡಿತು. ಎಚ್‌ಸಿಎಲ್‌ ಟೆಕ್ನಾಲಜೀಸ್‌, ಟಾಟಾ ಸ್ಟೀಲ್‌, ಟೆಕ್‌ ಮಹೀಂದ್ರಾ, ಡಾ.ರೆಡ್ಡೀಸ್‌, ಎಸ್‌ಬಿಐ, ಕೋಟಕ್‌ ಬ್ಯಾಂಕ್‌ ಮತ್ತು ಟಿಸಿಎಸ್‌ ಪ್ರಮುಖ ಗಳಿಕೆದಾರ ಕಂಪನಿಗಳಾಗಿ ಗುರುತಿಸಿಕೊಂಡವು. ಎರಡನೇ ತ್ರೈಮಾಸಿಕದಲ್ಲಿ ಶೇ. 31.7ರಷ್ಟು ನಿವ್ವಳ ಲಾಭ ಹೆಚ್ಚಿಸಿಕೊಂಡಿರುವ ಖಾಸಗಿ ರಂಗದ ದೈತ್ಯ ಬ್ಯಾಂಕ್‌ ಎಚ್‌ಡಿಎಫ್‌ಸಿ ಷೇರುಗಳು ಶೇ. 1.7ರಷ್ಟು ಗಳಿಕೆ ದಾಖಲಿಸಿದವು. ಕಂಪನಿಯ ಲಾಭ 3,780.5 ಕೋಟಿ ರೂ.ಗೆ ಏರಿಕೆಯಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ 2,870.1 ಕೋಟಿ ರೂ. ಲಾಭ ಗಳಿಸಿತ್ತು. ಆದರೆ ಹಲವು ಕಂಪನಿಗಳ ಷೇರುಗಳು ಮೌಲ್ಯ ವೃದ್ಧಿಸಿಕೊಂಡಿದ್ದರೂ, ಬಜಾಜ್‌ ಫಿನ್‌ಸರ್ಸ್‌ ಮತ್ತು ಮಹೀಂದ್ರಾ & ಮಹೀಂದ್ರಾ ಕಂಪನಿಯ ಷೇರುಗಳು ಶೇ. 1.5ರಷ್ಟು ನಷ್ಟ ಅನುಭವಿಸಿದವು.ಇನ್ನೊಂದೆಡೆ ಸರಕಾರಿ ಒಡೆತನದ ಸೇಯ್ಲ್‌ (SAIL) ಷೇರು ಮೌಲ್ಯ ಶೇ. 9ರಷ್ಟು ಏರಿಕೆ ಕಂಡಿತು. ನೈಕಾ ಐಪಿಒ ಸಬ್‌ಸ್ಕ್ರಿಪ್ಶನ್‌ಗೆ ಇಂದು ಕೊನೆಯ ದಿನವಾಗಿದ್ದು, ನಿಗದಿತ ಷೇರುಗಳಿಗಿಂತ 33.75 ಪಟ್ಟು ಹೆಚ್ಚಿನ ಹೂಡಿಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಸಿಗಾಚಿ 4.39 ಪಟ್ಟು ಸಬ್‌ಸ್ಕ್ರಿಪ್ಶನ್‌ ಪಡೆದುಕೊಂಡಿದ್ದರೆ, ಪಿಬಿ ಫಿನ್‌ಟೆಕ್‌ (ಪಾಲಿಸಿ ಬಜಾರ್‌) ಶೇ. 19ರಷ್ಟು ಹಾಗೂ ಎಸ್‌ಜೆಎಸ್‌ ಎಂಟರ್‌ಪ್ರೈಸಸ್‌ ಶೇ. 8ರಷ್ಟು ಸಬ್‌ಸ್ಕ್ರಿಪ್ಶನ್‌ ಪಡೆದುಕೊಂಡಿವೆ ಎಂದು ವೆಬ್‌ಸೈಟ್‌ ಮಾಹಿತಿ ನೀಡಿದೆ.