ಬೆಂಗಳೂರು: ಮತ್ತು ಆಭರಣ ಮಾರಾಟಗಾರರು ಇನ್ನು ಮುಂದೆ ಹಾಲ್‌ಮಾರ್ಕ್ ಪರವಾನಗಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಹಾಲ್‌ಮಾರ್ಕ್ ಇರುವ ಆಭರಣಗಳನ್ನೇ ಮಾರಬೇಕು. ಜೂನ್ 15ರ ನಂತರ ಕೇಂದ್ರ ಸರಕಾರ ಇದನ್ನು ಕಡ್ಡಾಯಗೊಳಿಸಲಿದೆ.
ಪರವಾನಗಿ ಪಡೆದ ಎಲ್ಲಾ ಸಣ್ಣ ಪುಟ್ಟ ಆಭರಣ ಮಳಿಗೆಗಳೂ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಲ್ಲಿ ನೋಂದಾಯಿಸಿಕೊಂಡು ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಪ್ರತಿಷ್ಠಿತ ಆಭರಣ ಮಳಿಗೆಯವರು ಈಗಾಗಲೇ ಹಾಲ್‌ಮಾರ್ಕ್ ಪರವಾನಗಿ ಪಡೆದು ಗ್ರಾಹಕರ ನಂಬಿಕೆಗೆ ತಕ್ಕಂತೆ ಆಭರಣಗಳನ್ನು ಮಾರುತ್ತಿದ್ದಾರೆ. ಆದರೆ ಸಣ್ಣ ಪುಟ್ಟ ಮಾರಾಟಗಾರರು ಕಡಿಮೆ ಗುಣಮಟ್ಟದ ಆಭರಣಗಳಿಗೆ ನಕಲಿ ಹಾಲ್‌ಮಾರ್ಕ್ ಹಾಕಿ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಗ್ರಾಹಕರಿಗಾಗುತ್ತಿರುವ ವಂಚನೆ ತಪ್ಪಿಸಿ, ಚಿನ್ನದ ವಹಿವಾಟಿನ ನಿಖರ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಈ ನಿಯಮ ಜಾರಿಗೆ ತರಲಾಗುತ್ತಿದೆ.
ಸದ್ಯ, ರಾಜ್ಯದ ಏಳು ಜಿಲ್ಲೆಗಳಲ್ಲಿ ಮಾತ್ರ ಹಾಲ್‌ಮಾರ್ಕ್ ಕೇಂದ್ರಗಳಿವೆ. ಉಳಿದ ಜಿಲ್ಲೆಯವರು ಹಾಲ್‌ಮಾರ್ಕ್ ಕೇಂದ್ರಗಳಿರುವ ಕಡೆ ತೆರಳಿ ಮುದ್ರೆ ಹಾಕಿಸಿಕೊಂಡು ಹೋಗಿ ಆಭರಣ ಮಾರುತ್ತಾರೆ. 22 ಕ್ಯಾರಟ್ ಚಿನ್ನಕ್ಕೆ ಮಾತ್ರ ಹಾಲ್‌ಮಾರ್ಕ್ ಚಿಹ್ನೆ ಇರುತ್ತದೆ ಎಂಬುದು ಗ್ರಾಹಕರ ನಂಬಿಕೆ. ಆದರೆ ಕೆಲವು ಮಾರಾಟಗಾರರು 14-18 ಕ್ಯಾರಟ್‌ಗೂ ಹಾಲ್‌ಮಾರ್ಕ್ ಹಾಕಿಸಿ ಗುಣಮಟ್ಟದಲ್ಲಿ ವಂಚಿಸುತ್ತಿದ್ದಾರೆ. ಸಾಕಷ್ಟು ಗ್ರಾಹಕರಿಗೆ ಇದರ ಮಾಹಿತಿಯೇ ಇಲ್ಲ. ಕೆಲವರು ಆ ಆಭರಣ ಮಾರಲು ಹೋದಾಗ, ಇಲ್ಲವೇ ಕೆಲ ವರ್ಷಗಳ ಬಳಿಕ ಅದು ಬಣ್ಣ ಮಾಸಿದಂತಾದಾಗ ಮಾತ್ರ ಅರಿವಿಗೆ ಬರುತ್ತದೆ. ಅಷ್ಟರಲ್ಲಿ ಕೆಲವು ವರ್ಷಗಳೇ ಕಳೆದು ಹೋಗಿ ಅಂಗಡಿ ಬದಲು, ಇಲ್ಲವೇ ಗ್ರಾಹಕರೇ ಬೇರೆ ಕಡೆ ಸ್ಥಳಾಂತರಗೊಂಡಿರುತ್ತಾರೆ. ಆದ್ದರಿಂದ ಖರೀದಿಸುವಾಗಲೇ ಎಚ್ಚರದಿಂದ ಇದ್ದರೆ ಇಂತಹ ವಂಚನೆ ತಪ್ಪಿಸಬಹುದು.
ಹಾಲ್‌ಮಾರ್ಕ್ ಏಕೆ ಅಗತ್ಯ?ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟ ದೃಢೀಕರಿಸಲು ಹಾಲ್‌ಮಾರ್ಕ್ ಅಗತ್ಯ. ಇದು ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ.
ಏನಿದು ಹಾಲ್‌ಮಾರ್ಕ್?
ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್‌ಮಾರ್ಕ್ ಇದ್ದಂತೆ ಚಿನ್ನಾಭರಣಗಳ ಶುದ್ಧತೆಗೆ ಹಾಲ್‌ಮಾರ್ಕ್ ಕಡ್ಡಾಯ. ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ಧತೆಗೆ ಇದೊಂದು ಪ್ರಮಾಣ ಪತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಮಾನಗಳಿಂದಲೂ ಹಾಲ್‌ಮಾರ್ಕ್ ಶುದ್ಧತೆಗೆ ಮಾನದಂಡವಾಗಿದೆ. ಭಾರತದಲ್ಲಿ ಇದುವರೆಗೆ ಆಭರಣ ತಯಾರಕರಿಗೆ ಹಾಲ್‌ಮಾರ್ಕ್ ಕಡ್ಡಾಯವಾಗಿಲ್ಲ. ತಮ್ಮ ಆಭರಣಗಳಿಗೆ ಹಾಲ್‌ಮಾರ್ಕ್ ಪಡೆಯುವುದು ಅವರ ಆಯ್ಕೆಗೆ ಬಿಟ್ಟ ವಿಚಾರ. 2000ದಿಂದಲೇ ಹಾಲ್‌ಮಾರ್ಕ್ ಸೌಲಭ್ಯ ಭಾರತದಲ್ಲಿ ಆರಂಭವಾಗಿದ್ದು, 2005ರಿಂದ ಬೆಳ್ಳಿ ಮತ್ತಿತರ ಪ್ರಶಸ್ತ ಲೋಹಗಳ ಆಭರಣಗಳಿಗೂ ಹಾಲ್‌ಮಾರ್ಕ್ ಸೌಲಭ್ಯ ಶುರುವಾಗಿದೆ. ಗ್ರಾಹಕರಲ್ಲೂ ಹಾಲ್‌ಮಾರ್ಕ್ ಕುರಿತ ಜಾಗೃತಿ ಹೆಚ್ಚತೊಡಗಿದೆ.
.
ಗ್ರಾಹಕರೇನು ಮಾಡಬೇಕು?
ಹಾಲ್‌ಮಾರ್ಕ್ ಎಂದಾಕ್ಷಣ ಖರೀದಿಸುವ ಹವ್ಯಾಸ ಬಿಡಬೇಕು. ಹಾಲ್‌ಮಾರ್ಕ್ ಜತೆಗೆ ಮಳಿಗೆದಾರರ ಸಂಖ್ಯೆ, ವರ್ಷ ಅಥವಾ ಇನ್ನಾವುದೇ ಸಂಖ್ಯೆ ಇದ್ದರೆ ಖರೀದಿಸಲು ತೊಂದರೆ ಇಲ್ಲ. ಕೇವಲ ಮಾರ್ಕ್ ಮಾತ್ರವಿದ್ದರೆ ಅದು ಶುದ್ಧವಾದುದು ಎಂದು ನಂಬುವುದು ಕಷ್ಟ. ಬದಲಿಗೆ ತ್ರಿಕೋನಾಕಾರದ ಹಾಲ್‌ಮಾರ್ಕ್ ಗುರುತು ತಯಾರಾದ ವರ್ಷ- (ಉದಾಹರಣೆಗೆ ವರ್ಷ 2000ಕ್ಕೆ ಎ, 2001ಕ್ಕೆ ಬಿ) ಪರಿಶೀಲಿಸಬೇಕು.
ಪರಿಶುದ್ಥತೆಚಿನ್ನದ ಕ್ಯಾರಟ್ ಸೂಚಿಸುವ 999 (24 ಕ್ಯಾರಟ್), 958 (23 ಕ್ಯಾರಟ್), 916 (22 ಕ್ಯಾರಟ್), 875 (21 ಕ್ಯಾರಟ್) ಹೀಗೆ ಕ್ಯಾರಟ್‌ಗಳನ್ನೂ ಜತೆ ಉಲ್ಲೇಖಿಸಲಾಗಿರುತ್ತದೆ. ಗುರುತು ನೀಡುವ ಬಿಐಎಸ್ ಕೇಂದ್ರದ ಸಂಖ್ಯೆ ಹಾಗೂ ಮಳಿಗೆದಾರನಿಗೆ ನೀಡಿದ ಸಂಖ್ಯೆಯನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು.
ರಾಜ್ಯದಲ್ಲಿ50 ಸಾವಿರ ಚಿನ್ನಾಭರಣ ಮಳಿಗೆಗಳಿವೆ. ಈ ಪೈಕಿ 12 ಸಾವಿರದಷ್ಟು ಬೆಂಗಳೂರಿನಲ್ಲಿವೆ. ನಿಯಮದಂತೆ ಎಲ್ಲರೂ ಬಿಐಎಸ್‌ನಲ್ಲಿ ನೋಂದಾಯಿಸಿ ಪರವಾನಗಿ ಪಡೆಯಬೇಕು. ಆನ್‌ಲೈನ್‌ನಲ್ಲೇ ಸರಳವಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಒಂದು ಮೊಬೈಲ್ ಖರೀದಿಸಿದಷ್ಟೇ ಸುಲಭ. ಇದರಿಂದ ಗ್ರಾಹಕರ ನಂಬಿಕೆಯೂ ಹೆಚ್ಚುತ್ತದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಬಿ. ರಾಮಾಚಾರಿ.