ಡಾ ರಾಜ್‌ಕುಮಾರ್ ಪುಣ್ಯ ಸ್ಮರಣೆ:
ಕನ್ನಡಿಗರ ಮನದಲ್ಲಿ ಗಾಜನೂರಿನ ಮುತ್ತು, ಅಜಾತಶತ್ರು, 'ಬಂಗಾರದ ಮನುಷ್ಯ'ನಾಗಿ ನೆಲೆಸಿರುವ ಡಾ ರಾಜ್‌ಕುಮಾರ್.
ಇಂದು ಅಭಿಮಾನಿ ದೇವರುಗಳಿಂದ ಆರಾಧಿಸಲ್ಪಡುವ 'ವರನಟ', 'ನಟ ಸಾರ್ವಭೌಮ' ನಟ ಡಾ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ. ಕನ್ನಡ ಬೆಳ್ಳಿತೆರೆಗೆ ಚಿನ್ನದ ಶೋಭೆ ತಂದುಕೊಟ್ಟ ಡಾ. ರಾಜ್‌ಕುಮಾರ್ ನೆನಪು ಕನ್ನಡಿಗರ ಎದೆಯಲ್ಲಿ ಸದಾ ಹಸಿರು. ಕರ್ನಾಟಕಕ್ಕೆ ಡಾ.ರಾಜ್‌ಕುಮಾರ್ ಸೇವೆ ಅತ್ಯಂತ ಅವಿಸ್ಮರಣೀಯ. ಅಣ್ಣಾವ್ರು ನಟಿಸಿರುವ ಸಿನಿಮಾಗಳಲ್ಲಿ ಸಾಮಾಜಿಕ ಜೀವನದ ಮೌಲ್ಯಗಳು ಅಡಗಿದ್ದು, ಅವರ ಅಭಿನಯಕ್ಕೆ ಮಾರುಹೋಗಿ ಅಡ್ಡದಾರಿ ಹಿಡಿದ ಸಾವಿರಾರು ಜನರು ಸರಿ ದಾರಿಗೆ ಬಂದು ಮಾದರಿ ಜೀವನ ನಡೆಸಿದ್ದರು.
ಎಲ್ಲರಿಂದಲೂ ಅಣ್ಣಾವ್ರು ಎಂದು ಪ್ರೀತಿಯಿಂದ ಕರೆಯಲ್ಪಡುವ ರಾಜ್ ಅವರು ಕನ್ನಡ ಭಾಷೆ ಒಂದೇ ಅಲ್ಲದೆ, ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆ. ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲದೆ, ಡಾ ರಾಜ್ ತಮ್ಮ ಬದುಕಿನ ಮೂಲಕವೂ ಎಲ್ಲರಿಗೂ ಮಾದರಿಗುವಂತೆ ಬಾಳಿದ್ದರು. ಡಾ ರಾಜ್‌ಕುಮಾರ್ ಎಂದು ನೆನಪು ಮಾಡಿಕೊಂಡ ಕನ್ನಡಿಗರಿಗೆ, ಅವರ ಮಾನವೀಯತೆ, ಸಹಜತೆ ನೆನಪಾಗುವುದು. ಸಿನಿಮಾ ಮಂದಿಗೆ ಮಾತ್ರವಲ್ಲ, ಜನ ಸಾಮಾನ್ಯರಿಗೂ ಆದರ್ಶವಾಗಿರುವ ರಾಜ್‌ಕುಮಾರ್ ಅಭಿನಯಿಸಿರುವ ಪ್ರತಿ ಸಿನಿಮಾವೂ ಇಂದಿಗೂ ಹಲವು ಜನರ ಜೀವನಕ್ಕೆ ದಾರಿದೀಪಗಳಾಗಿವೆ.
ರಾಜ್‌ಕುಮಾರ್‌ರಂಥ ನಟ ಇನ್ನೊಬ್ಬರಿಲ್ಲ ಎನ್ನುವಂಥ ಕಲಾ ಪ್ರೌಢಿಮೆ ಅಣ್ಣಾವ್ರದ್ದು. ಅದಕ್ಕೇ ಅವರನ್ನು ನಟ ಸಾರ್ವಭೌಮ ಎಂದು ಕರೆಯಲಾಗುತ್ತದೆ. ಕರ್ನಾಟಕ ಮತ್ತು ಕನ್ನಡ ಭಾಷೆ ಕುರಿತಾದ ಚಳವಳಿಯಲ್ಲೂ ರಾಜ್ ಸದಾ ಮುಂಚೂಣಿಯಲ್ಲಿದ್ದರು. ಅದಕ್ಕೆ ಅವರು ಸದಾ ಕನ್ನಡಿಗರ ಮನೆ ಮನಗಳಲ್ಲಿ ನೆಲೆಸಿದ್ದಾರೆ. ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಯೋಗ ಮತ್ತು ತಾವೇ ನೇತ್ರದಾನ ಮಾಡುವ ಮೂಲಕ ಇತರರಿಗೂ ಸ್ಫೂರ್ತಿಯಾದ ಅಪರೂಪದ ಕಲೆಯ ಗಣಿ ಇವರು. ತಮ್ಮ ಅಭಿಮಾನಿಗಳನ್ನೇ ದೇವರು ಎಂದು ನಂಬಿದ್ದ ಡಾ. ರಾಜ್ ಈಗ ನಮ್ಮ ನಡುವೆ ಇಲ್ಲದಿದ್ದರೂ ಪ್ರತಿವರ್ಷ ಏಪ್ರಿಲ್ 24 ರಂದು ಕರ್ನಾಟಕದಾದ್ಯಂತ ರಾಜ್‌ಕುಮಾರ್ ಅವರ ಜನ್ಮದಿನವನ್ನು ರಾಜ್‌ಕುಮಾರ್ ಸ್ಮರಣೆ ದಿನವನ್ನಾಗಿ ಆಚರಿಸಲಾಗುತ್ತದೆ.