ಕೊರೊನಾ ಬಿಕ್ಕಟ್ಟು, ಬರೋಬ್ಬರಿ 3.5 ಕೋಟಿ ಕಾರ್ಮಿಕರಿಂದ ಪಿಎಫ್‌ ದುಡ್ಡು ಹಿಂತೆಗೆತ

ಕೊರೊನಾ ಆರಂಭವಾದ ಬಳಿಕ ಕಳೆದ 2020ರ ಏಪ್ರಿಲ್‌ ನಂತರ ಇಲ್ಲಿಯವರೆಗೆ 3.5 ಕೋಟಿಗೂ ಹೆಚ್ಚು ಮಂದಿ ತಮ್ಮ ನಿವೃತ್ತಿಕಾಲದ ಉಳಿತಾಯ ನಿಧಿಯಾಗಿರುವ ಭವಿಷ್ಯನಿಧಿ ಖಾತೆಯಿಂದ ಹಣವನ್ನು ಹಿಂತೆಗೆದುಕೊಂಡಿದ್ದಾರೆ.

ಕೊರೊನಾ ಬಿಕ್ಕಟ್ಟು, ಬರೋಬ್ಬರಿ 3.5 ಕೋಟಿ ಕಾರ್ಮಿಕರಿಂದ ಪಿಎಫ್‌ ದುಡ್ಡು ಹಿಂತೆಗೆತ
Linkup
ಹೊಸದಿಲ್ಲಿ: ಕೋಟ್ಯಂತರ ಕಾರ್ಮಿಕರಿಗೆ ಕೋವಿಡ್‌-19 ಬಿಕ್ಕಟ್ಟು ತೀವ್ರ ಹಣಕಾಸು ಕೊರತೆಗೂ ಕಾರಣವಾಗಿದೆ. ಹೀಗಾಗಿ ಕಳೆದ 2020ರ ಏಪ್ರಿಲ್‌ ನಂತರ ಇಲ್ಲಿಯವರೆಗೆ 3.5 ಕೋಟಿಗೂ ಹೆಚ್ಚು ಮಂದಿ ತಮ್ಮ ನಿವೃತ್ತಿಕಾಲದ ಉಳಿತಾಯ ನಿಧಿಯಾಗಿರುವ ಭವಿಷ್ಯನಿಧಿ ಖಾತೆಯಿಂದ () ಹಣ ಹಿಂತೆಗೆದುಕೊಂಡಿದ್ದಾರೆ. ಅಂದರೆ ಒಟ್ಟು ಪಿಎಫ್‌ದಾರರ ಪೈಕಿ ಅರ್ಧಕ್ಕೂ ಹೆಚ್ಚು ಎಂಬುದು ಗಮನಾರ್ಹ. ಕೇಂದ್ರ ಸರಕಾರ ಕಳೆದ ವರ್ಷ ಮಾರ್ಚ್‌ನಲ್ಲಿ ಇಪಿಎಫ್‌ ಚಂದಾದಾರರಿಗೆ ಕೋವಿಡ್‌-19 ಬಿಕ್ಕಟ್ಟಿನ ಕಾರಣ, ವಿಶೇಷ ಮುಂಗಡ ಹಣ ಹಿಂತೆಗೆದುಕೊಳ್ಳಲು ಅನುಮತಿ ಕಲ್ಪಿಸಿತ್ತು. ಈ ಅವಕಾಶವನ್ನು ಕೋಟ್ಯಂತರ ಕಾರ್ಮಿಕರು ಬಳಸಿಕೊಂಡಿದ್ದಾರೆ. ಉಂಟಾಗಿರುವ ಬಿಕ್ಕಟ್ಟಿನ ಗಂಭೀರತೆಯನ್ನು ಇದು ಬಿಂಬಿಸಿದೆ. ಪಿಎಫ್‌ ಕ್ಲೇಮ್‌ ಸೆಟ್ಲ್‌ಮೆಂಟ್‌, ಪಿಂಚಣಿ, ಡೆತ್‌ ಇನ್ಷೂರೆನ್ಸ್‌ ಇತ್ಯಾದಿಗಳ ಮೂಲಕ 81,200 ಕೋಟಿ ರೂ.ಗಳನ್ನು ಇಪಿಎಫ್‌ಒ 2019-20ರಲ್ಲಿ ವಿತರಿಸಿದೆ. 2020ರ ಏಪ್ರಿಲ್‌ 1 ಮತ್ತು 2021 ಮೇ ನಡುವೆ 3.5 ಕೋಟಿ ಕಾರ್ಮಿಕರಿಗೆ ಕೋವಿಡ್‌-19 ಹಿನ್ನೆಲೆಯಲ್ಲಿ ಮುಂಗಡ ಪಡೆಯಲು ಅವಕಾಶ ನೀಡಲಾಗಿತ್ತು. ಇದು ನಾನ್‌-ರಿಫಂಡಬೆಲ್‌ ಆಗಿದ್ದು, ಮುಂಗಡವನ್ನು ಮರು ಪಾವತಿಸಬೇಕಾಗಿರುವುದಿಲ್ಲ. ಈ ಸೌಲಭ್ಯದ ಅಡಿಯಲ್ಲಿ 18,500 ಕೋಟಿ ರೂ.ಗಳನ್ನು ವೇತನದಾರರು ಹಿಂತೆಗೆದುಕೊಂಡಿದ್ದಾರೆ. ಕೋವಿಡ್‌-19 ಕುರಿತ ಮುಂಗಡದ ಜತೆಗೆ ಉದ್ಯೋಗ ಬದಲಾವಣೆ, ನಿವೃತ್ತಿ, ಉದ್ಯೋಗ ನಷ್ಟದ ಪರಿಣಾಮ ಪಿಎಫ್‌ ದುಡ್ಡಿನ ಹಿಂತೆಗೆತದ ಪ್ರಮಾಣ ಕನಿಷ್ಠ ಶೇ.10ರಷ್ಟು ಹೆಚ್ಚಳವಾಗಿದೆ. ಎಲ್ಲ ಸೇರಿ ಒಟ್ಟಾರೆ ವಿತ್‌ಡ್ರಾವಲ್ಸ್‌ ಮೊತ್ತ 1.25 ಲಕ್ಷ ಕೋಟಿ ರೂ.ಗಳಾಗಿದೆ ಎಂದು ವರದಿಯಾಗಿದೆ. ಮಾಸಿಕ ಸರಾಸರಿ 8000-9000 ರೂ. ವೇತನ ಪಡೆಯುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌-19 ಸಂಬಂಧಿತ ಪಿಎಫ್‌ ವಿತ್‌ಡ್ರಾವಲ್ಸ್‌ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.