ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆ ಕ್ಯಾನ್ಸರ್‌ನಂತೆ..! ದುಬಾರಿ ಅಷ್ಟೇ ಅಲ್ಲ, ಕಷ್ಟಕರ: ಕೊರೊನಾ ಜೊತೆಗೆ ಡಬಲ್ ಶಾಕ್..!

'ಚಿಕಿತ್ಸೆ ದುಬಾರಿ ಅಷ್ಟೇ ಅಲ್ಲ, ತುಂಬಾ ಕ್ಲಿಷ್ಟಕರ. ಎಲ್ಲ ವೈದ್ಯರು ಒಟ್ಟಿಗೆ ಸೇರಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ. ಇಲ್ಲವಾದರೆ ರೋಗಿಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ' - ಎಚ್‌ಸಿಜಿ ಆಸ್ಪತ್ರೆ ಕ್ಯಾನ್ಸರ್‌ ತಜ್ಞ ಡಾ.ಯು.ಎಸ್‌. ವಿಶಾಲ್‌ ರಾವ್‌.

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆ ಕ್ಯಾನ್ಸರ್‌ನಂತೆ..! ದುಬಾರಿ ಅಷ್ಟೇ ಅಲ್ಲ, ಕಷ್ಟಕರ: ಕೊರೊನಾ ಜೊತೆಗೆ ಡಬಲ್ ಶಾಕ್..!
Linkup
: ಕೋವಿಡ್‌ ಸೋಂಕು ನಿವಾರಣೆಗೆ ನೀಡುವ ಚಿಕಿತ್ಸೆ ವೇಳೆ ಸ್ಟಿರಾಯ್ಡ್‌ ಬಳಕೆಯ ಅಡ್ಡ ಪರಿಣಾಮದಿಂದಾಗಿ ಕಾಣಿಸಿಕೊಳ್ಳುತ್ತಿರುವ ಮಾರಕ 'ಬ್ಲ್ಯಾಕ್‌ ಫಂಗಸ್‌' ಕಾಯಿಲೆಗೆ ಚಿಕಿತ್ಸೆ ನೀಡುವುದು ಕಷ್ಟಕರ. ವೈದ್ಯರ ಪ್ರಕಾರ, ಇತರೆ ಕಾಯಿಲೆಗಳಂತೆ ಒಂದಿಬ್ಬರು ವೈದ್ಯರು ಇದಕ್ಕೆ ಚಿಕಿತ್ಸೆ ನೀಡಲಾಗದು. ಏಕಕಾಲದಲ್ಲಿ ಕಣ್ಣು, ನರರೋಗ, ಗಂಟಲು, ಮೆದುಳು ತಜ್ಞರು, ಸೋಂಕು ತಜ್ಞರು ಸೇರಿ ಕನಿಷ್ಠ 10 ನುರಿತ ವೈದ್ಯರು ಚಿಕಿತ್ಸೆ ನೀಡಬೇಕಾಗುತ್ತದೆ. ಕಪ್ಪು ಶಿಲೀಂಧ್ರವೆಂದೂ ಕರೆಯಲಾಗುವ ಈ ಬ್ಲ್ಯಾಕ್‌ ಫಂಗಸ್‌ ಕ್ಯಾನ್ಸರ್‌ನಂತೆ. ಅದು ಯಾವ ರೀತಿ ಹೇಗೆ ಯಾವಾಗ ಹರಡುತ್ತದೆ, ಹೇಗೆ ತಿರುಗುತ್ತದೆ ಎಂದು ಹೇಳುವುದು ಕಷ್ಟಕರ ಎನ್ನುತ್ತಾರೆ ಅದಕ್ಕೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರು. 'ಚಿಕಿತ್ಸೆ ದುಬಾರಿ ಅಷ್ಟೇ ಅಲ್ಲ, ತುಂಬಾ ಕ್ಲಿಷ್ಟಕರ. ಎಲ್ಲ ವೈದ್ಯರು ಒಟ್ಟಿಗೆ ಸೇರಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ. ಇಲ್ಲವಾದರೆ ರೋಗಿಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ' ಎನ್ನುತ್ತಾರೆ ಎಚ್‌ಸಿಜಿ ಆಸ್ಪತ್ರೆಯಲ್ಲಿ ಅಂತಹದೊಂದು ವಿಶೇಷ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾನ್ಸರ್‌ ತಜ್ಞ ಡಾ.ಯು.ಎಸ್‌. ವಿಶಾಲ್‌ ರಾವ್‌. ಸಲಕರಣೆಗಳೂ ಇಲ್ಲ: 'ಅಷ್ಟೇ ಅಲ್ಲದೆ, ಈ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ಅಗತ್ಯ ಸಲಕರಣೆಗಳೂ ಇಲ್ಲ, ಆದರೆ ಈಗ ಅವುಗಳನ್ನು ತರಿಸಿಕೊಂಡು ಚಿಕಿತ್ಸೆ ನೀಡಲಾಗದು. ಹಾಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಸಾಮಗ್ರಿ ಮತ್ತು ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ' ಎಂದು ಅವರು ಹೇಳಿದರು. 'ತುಂಬಾ ದುಬಾರಿಯಾಗಿರುವ ಇದಕ್ಕೆ ಚಿಕಿತ್ಸೆ ನೀಡಲು ದಾನಿಗಳ ನೆರವನ್ನೂ ಪಡೆದುಕೊಳ್ಳಲಾಗುತ್ತಿದೆ' ಎಂದು ಡಾ.ವಿಶಾಲ್‌ ರಾವ್‌ ಹೇಳಿದರು. ಎಚ್‌ಸಿಜಿಯಲ್ಲಿ ವಿಶೇಷ ವಾರ್ಡ್‌: ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ತೆರೆಯಲಾಗಿದೆ. ಕ್ಯಾನ್ಸರ್‌ ಚಿಕಿತ್ಸೆಗೆ ಹೆಸರಾದ ಇಲ್ಲಿ, ಕೋವಿಡ್‌ ನಂತರ ಪ್ಲಾಸ್ಮಾ ಚಿಕಿತ್ಸೆ ಅಧ್ಯಯನ ಸೇರಿ ಹಲವು ವಿನೂತನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 'ಬ್ಲ್ಯಾಕ್‌ ಫಂಗಸ್‌ ಕೂಡ ಕ್ಯಾನ್ಸರ್‌ನಷ್ಟೇ ಅಪಾಯಕಾರಿ. ಇದು ಹೇಗೆ ರಿಯಾಕ್ಟ್ ಮಾಡುತ್ತದೆ ಎಂದು ಹೇಳುವುದು ಕಷ್ಟ. ಇದಕ್ಕೆ ಚಿಕಿತ್ಸೆ ನೀಡುವುದೂ ವೈದ್ಯರಿಗೆ ನಿಜಕ್ಕೂ ಸವಾಲಿನ ಕೆಲಸ' ಎನ್ನುತ್ತಾರೆ ಎಚ್‌ಸಿಜಿ ಆಸ್ಪತ್ರೆ ಹಿರಿಯ ವೈದ್ಯ ಡಾ.ಯು.ಎಸ್‌.ವಿಶಾಲ್‌ ರಾವ್‌.