ಹಿರಿಯ ನಟ 'ಶಂಖನಾದ' ಅರವಿಂದ್ ಕೊರೊನಾ ಸೋಂಕಿನಿಂದ ನಿಧನ

ಕನ್ನಡ ಚಿತ್ರರಂಗದ ನಿರ್ಮಾಪಕರಾದ ರಾಮು, ಮಂಜುನಾಥ್‌, ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಸೇರಿ ಅನೇಕರು ಈಚೆಗೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೀಗ ಹಿರಿಯ ನಟ ಶಂಖನಾದ ಅರವಿಂದ್ ಅವರು ಕೂಡ ಕೊರೊನಾದಿಂದಾಗಿ ನಿಧನರಾಗಿದ್ದಾರೆ.

ಹಿರಿಯ ನಟ 'ಶಂಖನಾದ' ಅರವಿಂದ್ ಕೊರೊನಾ ಸೋಂಕಿನಿಂದ ನಿಧನ
Linkup
ಕೊರೊನಾ ಎರಡನೇ ಅಲೆಯಿಂದಾಗಿ ಪ್ರತಿದಿನ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಚಿತ್ರರಂಗದ ಮೇಲೆ ಕೊರೊನಾ ಮಹಾಮಾರಿಯ ವಕ್ರ ದೃಷ್ಟಿ ಬಿದ್ದಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಈ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಗುರುವಾರವಷ್ಟೇ ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಅವರು ಕೊರೊನಾಗೆ ಬಲಿಯಾದ ಸುದ್ದಿ ಕೇಳಿಬಂದಿತ್ತು. ಇಂದು (ಮೇ 7) ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಅವರು ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಅವರ ಪುತ್ರಿ, ಗಾಯಕಿ ಮಾನಸಾ ಹೊಳ್ಳ ಅವರು ಮಾಹಿತಿ ನೀಡಿದ್ದು, '13 ದಿನಗಳ ಹಿಂದೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದೆವು. ಆಸ್ಪತ್ರೆಗೆ ಹೋಗುವಾಗಲೂ ಅವರು ಸ್ಟ್ರಾಂಗ್‌ ಆಗಿಯೇ ಇದ್ದರು. ಮೊನ್ನೆ ಮೊನ್ನೆವರೆಗೂ, 'ನಾನು ಮತ್ತೆ ಹುಷಾರಾಗಿ ಬರ್ತಿನಿ' ಅಂತಲೇ ಹೇಳುತ್ತಿದ್ದರು. ನಿನ್ನೆ (ಗುರುವಾರ) ಕೂಡ ವಿಡಿಯೋ ಕಾಲ್‌ನಲ್ಲಿ ಅವರನ್ನು ನೋಡಿದ್ದೆವು. ಮೂರು ದಿನಗಳಿಂದ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ನಮಗೆ ಮಾಹಿತಿ ಕೊಟ್ಟಿದ್ದರು' ಎಂದು ಹೇಳಿದ್ದಾರೆ. ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು, ಸಿನಿಪ್ರಿಯರು ಶೋಕ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಕೆಲ ತಿಂಗಳ ಹಿಂದಷ್ಟೇ ಅವರ ಪತ್ನಿ ರಮಾ ಅವರು ಅನಾರೋಗ್ಯ ಕಾರಣದಿಂದ ನಿಧನರಾಗಿದ್ದರು. ಅರವಿಂದ್‌ ಅವರಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಕನ್ನಡದಲ್ಲಿ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ಅರವಿಂದ್ ಅವರು ಬಣ್ಣ ಹಚ್ಚಿದ್ದಾರೆ. ಕಾಶಿನಾಥ್‌, ಜಗ್ಗೇಶ್ ಅವರ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 1986ರಲ್ಲಿ ತೆರೆಕಂಡಿದ್ದ 'ಶಂಖನಾದ' ಸಿನಿಮಾದಲ್ಲಿ ಅರವಿಂದ್ ಪ್ರಧಾನ ಪಾತ್ರ ನಿರ್ವಹಿಸಿದ್ದರು. ಆ ಸಿನಿಮಾಕ್ಕೆ ಭಾರಿ ಮೆಚ್ಚುಗೆ ಸಿಕ್ಕಿದ್ದಲ್ಲದೆ, ರಾಷ್ಟ್ರ ಪ್ರಶಸ್ತಿಯೂ ದೊರಕಿತ್ತು. ಅಂದಿನಿಂದ ಅರವಿಂದ್ ಅವರು 'ಶಂಖನಾದ ಅರವಿಂದ್' ಎಂದೇ ಖ್ಯಾತರಾಗಿದ್ದರು. ಅದೇ ರೀತಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ 'ಬೆಟ್ಟದ ಹೂವು' ಚಿತ್ರದಲ್ಲೂ ಅವರು ಗಮನಾರ್ಹ ಪಾತ್ರ ಮಾಡಿದ್ದರು.