ಕೋವಿಡ್19: ಪ್ರೀತಿಯ ಅಕ್ಕನನ್ನು ಕಳೆದುಕೊಂಡ ನಿರ್ದೇಶಕ ಜಯತೀರ್ಥ

ಕನ್ನಡ ನಿರ್ದೇಶಕ ಜಯತೀರ್ಥ ಅವರ ಅಕ್ಕ ಮೋಹನಾಂಬ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್19: ಪ್ರೀತಿಯ ಅಕ್ಕನನ್ನು ಕಳೆದುಕೊಂಡ ನಿರ್ದೇಶಕ ಜಯತೀರ್ಥ
Linkup
ಮಹಾಮಾರಿ ಸೋಂಕಿನಿಂದಾಗಿ ಪ್ರತಿದಿನ ಸಾವಿರಾರು ಮಂದಿ ಮರಣ ಹೊಂದುತ್ತಿದ್ದಾರೆ. ಎಷ್ಟೋ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ. ಕನ್ನಡ ನಿರ್ದೇಶಕ ಕೂಡ ತಮ್ಮ ಪ್ರೀತಿಯ ಸಹೋದರಿಯನ್ನು ಕಳೆದುಕೊಂಡಿದ್ದಾರೆ. ನಿರ್ದೇಶಕ ಜಯತೀರ್ಥ ಅವರ ಅಕ್ಕ ಮೋಹನಾಂಬ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಕೊರೊನಾ ವೈರಸ್ ಸೋಂಕಿಗೆ ಒಳಗಾದ ಅಕ್ಕನನ್ನು ಆಸ್ಪತ್ರೆಗೆ ಸೇರಿಸಲು ತಮಗೆ ಎದುರಾದ ಕಷ್ಟ ಹಾಗೂ ಈಗಿನ ದಾರುಣ ಪರಿಸ್ಥಿತಿಯನ್ನು ನಿರ್ದೇಶಕ ಜಯತೀರ್ಥ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜಯತೀರ್ಥ ಫೇಸ್‌ಬುಕ್ ಪೋಸ್ಟ್ ''ಕ್ಷಮಿಸಿ ಅಕ್ಕ.. ನನ್ನ ಪ್ರಯತ್ನಗಳಾಚೆಗೂ ನಿಮ್ಮನ್ನು ಉಳಿಸಿಕೊಳ್ಳಲು ಆಗಲಿಲ್ಲ. ಪರಮಮುಗ್ಧರಾದ ನನ್ನಕ್ಕ ಮನು ಮೋಹನಾಂಬ (58) ಇವರನ್ನು ಕೊರೊನಾ ಸೋಂಕಿನಿಂದಾಗಿ ಕಳೆದುಕೊಂಡಿದ್ದೇನೆ. ನನಗೆ ಸಾಧ್ಯವಾದಲ್ಲೆಲ್ಲ ರಾತ್ರಿ-ಹಗಲು ಓಡಾಡಿ ಆಕ್ಸಿಜನ್, ಬೆಡ್.. ಇವುಗಳಿಗಾಗಿ ಪರದಾಡಿ ಕೊನೆಗೆ ವಿಕ್ಟೋರಿಯಾದಲ್ಲಿ ಬೆಡ್ ಸಿಗುವಷ್ಟರಲ್ಲಿ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವ ಚೈತನ್ಯ ಕಳೆದುಕೊಂಡಿತ್ತು. ಈ ಪರದಾಟ, ಆತಂಕ, ಟೆನ್ಷನ್ ಯಾರಿಗೂ ಬೇಡ. ಪ್ಲೀಸ್ ಸೇಫ್ ಆಗಿರಿ'' ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ ನಿರ್ದೇಶಕ ಜಯತೀರ್ಥ. ಜೊತೆಗೆ, ''ಇಷ್ಟೆಲ್ಲದರ ನಂತರ ನನಗೆ ಅನಿಸಿದ್ದು ವಾರ್ ರಾಮ್‌ನಿಂದ ಹಿಡಿದು ಆಂಬ್ಯುಲೆನ್ಸ್, ಡ್ರೈವರ್, ಕೋವಿಡ್ ಸೆಂಟರ್‌ನ ವಾಲಂಟಿಯರ್ಸ್, ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು, ಚಿತಾಗಾರದ ಸಿಬ್ಬಂದಿಗಳೆಲ್ಲರೂ... ದಿನದ 16-18 ಗಂಟೆಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಯಾರನ್ನೂ ನಿಂದಿಸಬೇಡಿ. ಈ ವಿಷಮ ಪರಿಸ್ಥಿತಿಯನ್ನು ಎಲ್ಲರೂ ಕೂಡ ಹಿಮ್ಮೆಟ್ಟಿಸಬೇಕಿದೆ. ಪ್ರಭಾವಿಗಳು, ರಾಜಕಾರಣಿಗಳು ಸಮರೋತ್ಸಾಹದಲ್ಲಿ ಕೆಲಸ ಮಾಡುತ್ತಿರುವವರಿಗೆ ಕಿರುಕುಳ ಕೊಡುತ್ತಿದ್ದಾರೆ. ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಸಂಭವಿಸುತ್ತಿರುವ ಸಾವುಗಳು ತಡೆಯಬಹುದಿತ್ತು. ಆದರೆ ದೂಷಣೆ ನಿಂದನೆಗೆ ಇದು ಸಮಯವಲ್ಲ. ದಯವಿಟ್ಟು ಜಾಗರೂಕರಾಗಿರಿ'' ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ. ಅಂದ್ಹಾಗೆ, 'ಒಲವೇ ಮಂದಾರ', 'ಟೋನಿ', 'ಬುಲೆಟ್ ಬಸ್ಯಾ', 'ಬ್ಯೂಟಿಫುಲ್ ಮನಸ್ಸುಗಳು', 'ಬೆಲ್ ಬಾಟಂ' ಚಿತ್ರಗಳನ್ನು ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಸದ್ಯ 'ಬೆಲ್ ಬಾಟಂ-2' ಚಿತ್ರದ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ಜಯತೀರ್ಥ. (ಚಿತ್ರಕೃಪೆ: ಜಯತೀರ್ಥ ಫೇಸ್‌ಬುಕ್ ಪ್ರೊಫೈಲ್)