ಬ್ಯಾಟರಿ ಉತ್ಪಾದನೆಗೆ 18,100 ಕೋಟಿ ರೂ.ಗಳ ಪಿಎಲ್‌ಐ ಯೋಜನೆ ಪ್ರಕಟಿಸಿದ ಕೇಂದ್ರ
ಬ್ಯಾಟರಿ ಉತ್ಪಾದನೆಗೆ 18,100 ಕೋಟಿ ರೂ.ಗಳ ಪಿಎಲ್‌ಐ ಯೋಜನೆ ಪ್ರಕಟಿಸಿದ ಕೇಂದ್ರ
ಕೇಂದ್ರ ಸರಕಾರ ಎಸಿಸಿ ಬ್ಯಾಟರಿ ಉತ್ಪಾದನೆಯನ್ನು ಹೆಚ್ಚಿಸಲು 18,100 ಕೋಟಿ ರೂ.ಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಪ್ರಕಟಿಸಿದೆ. ಇದರಿಂದ 45,000 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಸಾಧ್ಯತೆ ಇದೆ.
ಹೊಸದಿಲ್ಲಿ: ಕೇಂದ್ರ ಸರಕಾರ ಎಸಿಸಿ ಉತ್ಪಾದನೆಯನ್ನು ( ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್) ಹೆಚ್ಚಿಸಲು 18,100 ಕೋಟಿ ರೂ.ಗಳ ಪಿಎಲ್‌ಐ (ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ) ಯೋಜನೆಯನ್ನು ಪ್ರಕಟಿಸಿದೆ. ಇದರಿಂದ 45 ಸಾವಿರ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಸಾಧ್ಯತೆ ಇದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಹಾಗೂ ಬ್ಯಾಟರಿ ಸ್ಟೋರೇಜ್ ಸಾಮರ್ಥ್ಯವನ್ನೂ ಉತ್ತೇಜಿಸಲೂ ಇದು ಪೂರಕವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಏನಿದು ಎಸಿಸಿ?
ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ಸ್ (ಎಸಿಸಿ) ಆಧುನಿಕ ಬ್ಯಾಟರಿ ಸ್ಟೋರೇಜ್ ತಂತ್ರಜ್ಞಾನವಾಗಿದ್ದು, ವಿದ್ಯುತ್ ಇಂಧನವನ್ನು ಎಲೆಕ್ಟ್ರೊಕೆಮಿಕಲ್ ಅಥವಾ ಕೆಮಿಕಲ್ ಎನರ್ಜಿಯಾಗಿ ಸಂಗ್ರಹಿಸಿಡಲು ಸಾಧ್ಯವಾಗುತ್ತದೆ. ಅಗತ್ಯ ಇದ್ದಾಗ ವಿದ್ಯುತ್ ಆಗಿ ಪರಿವರ್ತಿಸಬಹುದು.
"ಈ ಯೋಜನೆಗೆ ಆಯ್ಕೆಯಾದ ಪ್ರತಿಯೊಂದು ಎಸಿಸಿ ಬ್ಯಾಟರಿ ತಯಾರಕರು ಕನಿಷ್ಟ ಐದು ಗಿಗಾ ವ್ಯಾಟ್ ಸಾಮರ್ಥ್ಯದ ಎಸಿಸಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಬದ್ಧರಾಗಿರಬೇಕು ಮತ್ತು ಐದು ವರ್ಷಗಳಲ್ಲಿ ಕನಿಷ್ಠ 60% ದೇಶೀಯ ಮೌಲ್ಯವರ್ಧನೆಯನ್ನು ಯೋಜನಾ ಮಟ್ಟದಲ್ಲಿ ಖಚಿತಪಡಿಸಿಕೊಳ್ಳಬೇಕು" ಎಂದು ಸರಕಾರ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಟರಿ ಮಾರಾಟ, ಇಂಧನ ದಕ್ಷತೆ, ಬ್ಯಾಟರಿ ಜೀವನಚಕ್ರ ಮತ್ತು ಸ್ಥಳೀಕರಣದ ಪ್ರಮಾಣವನ್ನು ಆಧರಿಸಿ ಪ್ರೋತ್ಸಾಹಧನ ಪಾವತಿಸಲಾಗುವುದು ಎಂದು ಸರಕಾರ ಹೇಳಿದೆ.