ಹೊಸದಿಲ್ಲಿ: ಅನೇಕ ದಶಕಗಳವರೆಗೆ ಎಲ್ಲಿಗೂ ಹೋಗುವುದಿಲ್ಲ, ಅವರ ಸಮಸ್ಯೆ ಏನೆಂದರೆ ಅವರು ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಚುನಾವಣಾ ಪ್ರಚಾರ ಚಾಣಾಕ್ಷ ಹೊಸ ಬಾಂಬ್ ಸಿಡಿಸಿದ್ದಾರೆ.
ಗೋವಾದಲ್ಲಿ ಬುಧವಾರ ಮಾತನಾಡಿದ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆ, ಮತ್ತು ಗಾಂಧಿ ಕುಟುಂಬದ ಸದಸ್ಯರೊಂದಿಗೆ ಅವರು ನಡೆಸಿದ ಈ ಹಿಂದಿನ ಮಾತುಕತೆಗಳು ಸಫಲವಾಗಿಲ್ಲ ಎಂಬ ಸುಳಿವು ನೀಡಿದೆ.
ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಭಾರತದ ರಾಜಕಾರಣದಲ್ಲಿ ಇನ್ನೂ ಅನೇಲ ವರ್ಷ ಬಿಜೆಪಿ ಕೇಂದ್ರದಲ್ಲಿ ಇರುತ್ತದೆ. ಅದು ಗೆಲ್ಲಲಿ ಅಥವಾ ಸೋಲಲಿ. ಸ್ವಾತಂತ್ರ್ಯ ಪಡೆದ ಬಳಿಕ ಮೊದಲ 40 ವರ್ಷ ಕಾಂಗ್ರೆಸ್ ಇದ್ದಂತೆಯೇ ಅದೂ ಇರಲಿದೆ ಎಂದರು.
'ಬಿಜೆಪಿಯು ಭಾರತೀಯ ರಾಜಕಾರಣದ ಕೇಂದ್ರದಲ್ಲಿ ಇರಲಿದೆ. ಅವರು ಗೆಲ್ಲಲಿ ಅಥವಾ ಅವರು ಪರಾಜಯ ಹೊಂದಲಿ. ಅದು ಕಾಂಗ್ರೆಸ್‌ನ ಮೊದಲ 40 ವರ್ಷಗಳಲ್ಲಿದ್ದಂತೆಯೇ ಇರಲಿದೆ. ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ಭಾರತದ ಮಟ್ಟದಲ್ಲಿ ಒಮ್ಮೆ ನೀವು ಶೇ 30ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡರೆ ತಕ್ಷಣಕ್ಕೆ ಕದಲಿಸಲು ಆಗುವುದಿಲ್ಲ. ಹೀಗಾಗಿ ಜನರು ಬಹಳ ಆಕ್ರೋಶಗೊಳ್ಳುತ್ತಿದ್ದಾರೆ ಮತ್ತು ಪ್ರಧಾನಿ ಅವರನ್ನು ಕಿತ್ತೊಗೆಯಲಿದ್ದಾರೆ ಎಂಬ ಈ ಬಲೆಯೊಳಗೆ ಬೀಳಬೇಡಿ. ಬಹುಶಃ ಅವರು ಮೋದಿ ಅವರನ್ನು ಕಿತ್ತು ಹಾಕಬಹುದು. ಆದರೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಅವರು ಇಲ್ಲಿಯೇ ಇರಲಿದ್ದಾರೆ. ಅವರು ಮುಂದಿನ ಅನೇಕ ದಶಕಗಳ ಕಾಲ ಹೋರಾಟ ನಡೆಸಲಿದ್ದಾರೆ. ಅದನ್ನು ತರಾತುರಿಯಲ್ಲಿ ತೆಗೆಯಲು ಸಾಧ್ಯವಿಲ್ಲ' ಎಂದು ಹೇಳಿದರು.
ರಾಹುಲ್ ಗಾಂಧಿ ಅವರಲ್ಲಿ ಇರುವ ಸಮಸ್ಯೆ ಬಹುಶಃ ಇರುವುದು ಇಲ್ಲಿಯೇ. ಜನರು ಅವರನ್ನು ಕಿತ್ತು ಹಾಕಲು ಕೆಲವೇ ಸಮಯದ ಕೆಲಸ ಎಂದು ಅವರು ಭಾವಿಸಿದ್ದಾರೆ. ಅದು ಆಗುತ್ತಿಲ್ಲ. ನೀವು ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಪರಿಶೀಲಿಸಲು, ಅರ್ಥಮಾಡಿಕೊಳ್ಳಲು ಮತ್ತು ಅರಿವಿಗೆ ಪಡೆದುಕೊಳ್ಳಲು ಸಾಧ್ಯವಾಗದ ಹೊರತು ಅವರನ್ನು ಸೋಲಿಸುವ ಪ್ರತಿತಂತ್ರವನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಪ್ರಶಾಂತ್ ಕಿಶೋರ್ ಅವರ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಮಮತಾ ಬ್ಯಾನರ್ಜಿ ಹಾಗೂ ಎಂಕೆ ಸ್ಟಾಲಿನ್ ಅವರ ಅಮೋಘ ಗೆಲುವಿನಲ್ಲಿ ಪಾತ್ರ ವಹಿಸಿದ್ದ ಅವರು, ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಗಳು ನಡೆದಿದ್ದವು. ಈ ಸಂಬಂಧ ಅವರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪಕ್ಷದ ಇತರೆ ನಾಯಕರ ಜತೆ ಹಲವು ಬಾರಿ ಮಾತುಕತೆ ನಡೆಸಿದ್ದರು. ಆದರೆ ಅದರಲ್ಲಿ ಯಾವುದೇ ಫಲ ಕಂಡಿರಲಿಲ್ಲ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸಾವಿಗೀಡಾದ ರೈತರ ಕುಟುಂಬದವರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ನಡೆಸಿದ್ದ ಪ್ರಯತ್ನಗಳು ಹಾಗೂ ಪೊಲೀಸರೊಂದಿಗಿನ ಅವರ ಮುಖಾಮುಖಿಗೆ ದೊರಕಿದ್ದ ಪ್ರಚಾರವು ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಕ್ಕೆ ತ್ವರಿತ, ತತ್‌ಕ್ಷಣದ ಪುನಶ್ಚೇತನ ನೀಡಲಿದೆ ಎಂದು ನಂಬಿರುವುದು ಕಾಂಗ್ರೆಸ್‌ನಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆ ಎಂದು ಈ ತಿಂಗಳ ಆರಂಭದಲ್ಲಿ ಅವರು ಹೇಳಿದ್ದರು.
ಕಾಂಗ್ರೆಸ್‌ನಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳು ಮತ್ತು ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸಲು ದುರದೃಷ್ಟವಶಾತ್ ಯಾವುದೇ ಪರಿಹಾರಗಳಿಲ್ಲ ಎಂದಿದ್ದರು.
ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು, ಜುಲೈನಲ್ಲಿ ಪಕ್ಷದ ನಾಯಕರ ನಡುವೆ ನಡೆದ ಮಾತುಕತೆಗಳ ಬೆನ್ನಲ್ಲೇ ದಟ್ಟವಾಗಿ ಹರಡಿದ್ದವು. ಆದರೆ ಒಟ್ಟಾರೆಯಾಗಿ ಪಕ್ಷದಲ್ಲಿ ತಮಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು ಎಂಬ ಪ್ರಶಾಂತ್ ಬೇಡಿಕೆಗೆ ರಾಹುಲ್ ಗಾಂಧಿ ಒಪ್ಪದ ಕಾರಣ ಸಂಧಾನಗಳು ಮುರಿದುಬಿದ್ದಿದ್ದವು. ಇದರಿಂದ ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯಿಂದ ಕಾಂಗ್ರೆಸ್‌ಗೆ ಪ್ರಚಾರ ತಂತ್ರ ರೂಪಿಸುವ ಕಾರ್ಯದಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ.