ಉತ್ತರ ಪ್ರದೇಶದಲ್ಲಿ ಸಣ್ಣ ಪಕ್ಷಗಳ ಓಲೈಕೆಗೆ ದೊಡ್ಡ ಪೈಪೋಟಿ..! ಬಿಜೆಪಿಗೆ ಜೈ ಎಂದ 7 ಪಕ್ಷಗಳು..!

ಆಡಳಿತಾರೂಢ ಬಿಜೆಪಿ ಸಣ್ಣ ಪುಟ್ಟ ಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿದೆ. ಏಳು ಪಕ್ಷಗಳನ್ನು ಒಳಗೊಂಡಿರುವ 'ಹಿಸ್ಸೆದಾರಿ ಮೋರ್ಚಾ' ಈಗಾಗಲೇ ಬಿಜೆಪಿಗೆ ಬೆಂಬಲ ಸಾರಿದೆ. ತಾವು ಬೆಂಬಲ ನೀಡುವ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ಅವರಿಗೆ ಪ್ರಮಾಣ ಪತ್ರವನ್ನು ಕೂಡ ಸಲ್ಲಿಸಿವೆ.

ಉತ್ತರ ಪ್ರದೇಶದಲ್ಲಿ ಸಣ್ಣ ಪಕ್ಷಗಳ ಓಲೈಕೆಗೆ ದೊಡ್ಡ ಪೈಪೋಟಿ..! ಬಿಜೆಪಿಗೆ ಜೈ ಎಂದ 7 ಪಕ್ಷಗಳು..!
Linkup
ಲಖನೌ (): ಉತ್ತರ ಪ್ರದೇಶದಲ್ಲಿ ಪ್ರಾದೇಶಿಕವಾಗಿ ಬಲಿಷ್ಠವಾಗಿರುವ ಸಣ್ಣ ಪಕ್ಷಗಳನ್ನು ಓಲೈಸುವ ಪೈಪೋಟಿ ಬಿರುಸುಗೊಂಡಿದೆ. ಸುಹೇಲ್‌ ದೇವ್‌ ಭಾರತೀಯ ಸಮಾಜ (ಎಸ್‌ಬಿಎಸ್‌ಪಿ) ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಿದ ಮಾದರಿಯಲ್ಲೇ, ಗುರುವಾರ ಏಳು ಸಣ್ಣ ಪಕ್ಷಗಳು ಬೆನ್ನಿಗೆ ನಿಲ್ಲುವ ಭರವಸೆ ನೀಡಿವೆ. ಎಸ್‌ಪಿ ಮತ್ತು ಎಸ್‌ಬಿಎಸ್‌ಪಿ ವೇದಿಕೆ ಹಂಚಿಕೊಂಡು, ಮೈತ್ರಿ ಘೋಷಣೆ ಮಾಡಿದ್ದವು. 2022ರ ಚುನಾವಣೆಯನ್ನು ಜಂಟಿಯಾಗಿ ಎದುರಿಸುವುದಾಗಿ ಉಭಯ ಪಕ್ಷಗಳ ಮುಖಂಡರು ಸಾರಿದ್ದರು. ಎಸ್‌ಬಿಎಸ್‌ಪಿಯು 'ಭಾಗಿದಾರಿ ಸಂಕಲ್ಪ ಮೋರ್ಚಾ'ದ ಪ್ರಮುಖ ಪಾಲುದಾರ ಪಕ್ಷವಾಗಿದೆ. 'ನವೆಂಬರ್‌ನಲ್ಲಿ ಎಸ್‌ಪಿ ರಾಜ್ಯಾದ್ಯಂತ ಒಟ್ಟು ಎಂಟು ಪ್ರಮುಖ ಸಮಾವೇಶಗಳನ್ನು ನಡೆಸಲಿದೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಎಸ್‌ಬಿಎಸ್‌ಪಿ ಅಧ್ಯಕ್ಷ ಓಂ ಪ್ರಕಾಶ್‌ ರಾಜ್‌ಭರ್‌ ಈ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದು ಮೈತ್ರಿ ವೇದಿಕೆಯ ಮುಖಂಡರು ತಿಳಿಸಿದ್ದಾರೆ. ಈ ಜಂಟಿ ಹೋರಾಟದ ನಡೆಯಿಂದ ಸ್ಫೂರ್ತಿ ಪಡೆದ ಆಡಳಿತಾರೂಢ ಬಿಜೆಪಿ ಕೂಡ ಸಣ್ಣ ಪುಟ್ಟ ಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿದೆ. ಏಳು ಪಕ್ಷಗಳನ್ನು ಒಳಗೊಂಡಿರುವ 'ಹಿಸ್ಸೆದಾರಿ ಮೋರ್ಚಾ' ಈಗಾಗಲೇ ಬಿಜೆಪಿಗೆ ಬೆಂಬಲ ಸಾರಿದೆ. ತಾವು ಬೆಂಬಲ ನೀಡುವ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ಅವರಿಗೆ ಪ್ರಮಾಣ ಪತ್ರವನ್ನು ಕೂಡ ಸಲ್ಲಿಸಿವೆ. 2017ರ ಚುನಾವಣೆಯಲ್ಲಿ ಬಿಜೆಪಿ, ಇದೇ ಎಸ್‌ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು. ಆಗ ಎಂಟು ಸ್ಥಾನಗಳನ್ನು ಈ ಪಕ್ಷಕ್ಕೆ ಬಿಟ್ಟು ಕೊಡಲಾಗಿತ್ತು. ಓಂ ಪ್ರಕಾಶ್‌ ರಾಜ್‌ಭರ್‌ ಅವರಿಗೆ ಯೋಗಿ ಆದಿತ್ಯನಾಥ್‌ ಸಂಪುಟದಲ್ಲಿ ಸಚಿವ ಸ್ಥಾನ ಕೂಡ ನೀಡಲಾಗಿತ್ತು. ಆದರೆ, 2019ರ ಲೋಕಸಭೆ ಸಂದರ್ಭ ಭಿನ್ನಾಭಿಪ್ರಾಯದಿಂದ ರಾಜ್‌ಭರ್‌ ಬೇರ್ಪಟ್ಟಿದ್ದರು. ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಗಿಫ್ಟ್‌: ರಾಜ್ಯದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಲು ಬಿಜೆಪಿ ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದೆ. ಬೂತ್‌ ಮಟ್ಟದ 30 ಲಕ್ಷ ಕಾರ್ಯಕರ್ತರಿಗೆ ಪಕ್ಷ ದೀಪಾವಳಿ ಉಡುಗೊರೆ ರವಾನಿಸಿದೆ. 'ರಾಜ್ಯದಲ್ಲಿ ಒಟ್ಟು 1.63 ಲಕ್ಷ ಬೂತ್‌ಗಳಿವೆ. ಪ್ರತಿ ಬೂತ್‌ಗೂ 20 - 20 ಸದಸ್ಯರ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕರ್ತರು ಪಕ್ಷದ ಜೀವಾಳ. ಅವರು ಪಕ್ಷ ಎನ್ನುವ ಕುಟುಂಬದ ಅವಿಭಾಜ್ಯ ಅಂಗ. ಪ್ರತಿ ದೀಪಾವಳಿಗೆ ಅವರಿಗೆ ಉಡುಗೊರೆ ನೀಡುವುದು. ತುಂಬ ಹಿಂದಿನಿಂದ ನಡೆದು ಬಂದ ವಾಡಿಕೆ ಇದು. ಈ ಬಾರಿ 30 ಲಕ್ಷಗಿಂತ ಹೆಚ್ಚಿನ ಕಾರ್ಯಕರ್ತರಿಗೆ ಉಡುಗೊರೆ ನೀಡಲಾಗಿದೆ' ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯ್‌ ಬಹದೂರ್‌ ಪಾಠಕ್‌ ಹೇಳಿದ್ದಾರೆ.