![](https://vijaykarnataka.com/photo/86454151/photo-86454151.jpg)
ಅಯೋಧ್ಯೆ/ಚಾಮರಾಜನಗರ: ರಾಮಜನ್ಮ ಭೂಮಿ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರದ ಅಡಿಪಾಯಕ್ಕೆ ರಾಜ್ಯದ ಕೊಳ್ಳೆಗಾಲದ ವಿಶ್ವ ವಿಖ್ಯಾತ ಕಪ್ಪು ಗ್ರ್ಯಾನೈಟ್ ಬಳಸಲಾಗುತ್ತಿದೆ.
ಈಗಾಗಲೇ ಮಂದಿರದ ಪಾಯದ ಮೊದಲ ಹಂತದ ಕೆಲಸ ಪೂರ್ಣಗೊಂಡಿದ್ದು, ಅಡಿ ಪಾಯದ ಎತ್ತರವನ್ನು ಸಮುದ್ರ ಮಟ್ಟಕ್ಕಿಂತ 107 ಮೀಟರ್ ಎತ್ತರಕ್ಕೆ ಏರಿಸುವ ಕಾಮಗಾರಿ ಈಗ ನಡೆಯುತ್ತಿದೆ. ಎರಡನೇ ಹಂತದ ಪಾಯಕ್ಕೆ ರಾಜ್ಯದ ಕೊಳ್ಳೆಗಾಲದ ಕಪ್ಪು ಗ್ರ್ಯಾನೈಟ್ ಮತ್ತು ಮಿರ್ಜಾಪುರದ ಮರಳುಗಲ್ಲುಗಳನ್ನು ಬಳಸಲಾಗುತ್ತಿದೆ.
ಈ ವಿಷಯವನ್ನು ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಎರಡನೇ ಹಂತದ ಪಾಯದ ನಿರ್ಮಾಣಕ್ಕಾಗಿ ವಿಶೇಷ ಮಹೂರ್ತದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. 'ಕರ್ನಾಟಕದ ಗ್ರ್ಯಾನೈಟ್ ಮತ್ತು ಮಿರ್ಜಾಪುರದ ಸ್ಯಾಂಡ್ ಸ್ಟೋನ್ ಬಳಸಿ ಅಂತಿಮ ಮತ್ತು 48ನೇ ಪದರವನ್ನು ನಿರ್ಮಿಸುತ್ತಿದ್ದೇವೆ' ಎಂದು ಚಂಪತ್‌ರಾಯ ತಿಳಿಸಿದ್ದಾರೆ.
ಕರ್ನಾಟಕ - ತಮಿಳುನಾಡು ಗಡಿಯ ಕೊಳ್ಳೆಗಾಲ ಕಾಡಿನಲ್ಲಿ ಗಣಿಗಾರಿಕೆ ಮಾಡಿ ಕಪ್ಪು ಗ್ರ್ಯಾನೆಟ್ ಕಲ್ಲುಗಳನ್ನು ತರಲಾಗಿದೆ. ಮಿರ್ಜಾಪುರದ ಕೆತ್ತನೆ ಕಲ್ಲುಗಳು ಮತ್ತು ರಾಜಸ್ಥಾನದ ಬನ್ಸಿ ಪಹರ್‌ಪುರದ ಪಿಂಕ್ ಮಾರ್ಬಲ್‌ಗಳ ಜೊತೆ ಕರ್ನಾಟಕದ ಕಪ್ಪು ಗ್ರ್ಯಾನೈಟ್ ಕಲ್ಲುಗಳೂ ಮಂದಿರ ನಿರ್ಮಾಣದಲ್ಲಿ ಬಳಕೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ. 'ಎರಡನೇ ಹಂತದ ನಿರ್ಮಾಣ ಕಾರ್ಯದಲ್ಲಿ ಶುಭವಾಗುವಂತೆ ವಿಶ್ವಕರ್ಮ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ' ಎಂದು ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾದ ಅನಿಲ್ ಮಿಶ್ರಾ ಹೇಳಿದ್ದಾರೆ.
ಕೊಳ್ಳೆಗಾಲದವರಿಗೆ ಗೊತ್ತಿಲ್ಲ: ನಿರ್ಮಾಣಕ್ಕೆ ಬಳಸಲಾಗುತ್ತಿರುವ ಕಪ್ಪು ಗ್ರ್ಯಾನೈಟ್ ಅನ್ನು ಕೊಳ್ಳೆಗಾಲದಲ್ಲಿ ಎಲ್ಲಿ ಗಣಿಗಾರಿಕೆ ಮಾಡಲಾಗಿತ್ತು? ಹೇಗೆ ಅಯೋಧ್ಯೆಗೆ ಸಾಗಿಸಲಾಗಿದೆ? ಎಂಬುದರ ಬಗ್ಗೆ ಸ್ಥಳೀಯ ಗಣಿ ಉದ್ಯಮಿಗಳ ಹಾಗೂ ಸ್ಥಳೀಯ ವ್ಯಾಪಾರಿಗಳ ಬಳಿ ಮಾಹಿತಿ ಇಲ್ಲ. ಕೊಳ್ಳೆಗಾಲದಲ್ಲಿ ಗಣಿಗಾರಿಕೆಗೆ ನಿಷೇಧವಿದ್ದು, ಬಹುಶಃ ಚಾಮರಾಜನಗರ ಜಿಲ್ಲೆಯ ಬೇರೆ ಭಾಗದಲ್ಲಿ ಗಣಿಗಾರಿಕೆ ಮಾಡಿದ್ದ ಕಲ್ಲನ್ನು ಅಯೋಧ್ಯೆಗೆ ಸಾಗಿಸಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಆದರೆ ಈ ಭಾಗದ ಕಪ್ಪು ಗ್ರ್ಯಾನೈಟ್ ವಿಶ್ವವಿಖ್ಯಾತಿ ಪಡೆದಿದ್ದು, ಅಮೆರಿಕ ಸೇರಿದಂತೆ ಹಲವಾರು ದೇಶಗಳಿಗೆ ರಫ್ತಾಗುತ್ತಲೇ ಬಂದಿದೆ. ಇದನ್ನು ಕಪ್ಪು ಬ್ಲಾಕ್ ಗ್ರ್ಯಾನೈಟ್ ಎಂದು ಕರೆಯಲಾಗುತ್ತದೆ. ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಸುಮಾರು 1.10 ದಶಲಕ್ಷ ಟನ್ ಗ್ರ್ಯಾನೈಟ್ ಇದೆ ಎನ್ನಲಾಗಿದೆ.
1992ಕ್ಕೂ ಮೊದಲು ಕರ್ನಾಟಕ ಗ್ರ್ಯಾನೈಟ್ ರಫ್ತಿನಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ನಂತರ ಕಾಡುಗಳ್ಳ ವೀರಪ್ಪನ್‌ನಿಂದಾಗಿ ಗಣಿಗಾರಿಕೆಗೆ ಏಟು ಬಿದ್ದಿದ್ದು, 2004ರ ನಂತರ ಮತ್ತೆ ಗಣಿಗಾರಿಕೆ ಆರಂಭಗೊಂಡಿತ್ತು. ಈಗ ಚಾಮರಾಜನಗರ ಜಿಲ್ಲೆಯಲ್ಲಿ ಗಣಿಗಾರಿಕೆಗೆ ನಡೆಯುತ್ತಿದೆಯಾದರೂ ಮಲೆ ಮಹದೇಶ್ವರ ವನ್ಯಜೀವಿ ಅರಣ್ಯಧಾಮ ಘೋಷಣೆಯಾದ ನಂತರ ಕೊಳ್ಳೆಗಾಲದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ.
115 ದೇಶಗಳ ಜಲಕಾಣಿಕೆ
ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಏಳು ಖಂಡಗಳ 115 ದೇಶಗಳಿಂದ ತಂದ ಜಲವನ್ನು ಬಳಸಲಾಗುತ್ತಿದೆ. ದೆಹಲಿಯ ಸಂಘಟನೆಯೊಂದು ನೀರನ್ನು ಸಂಗ್ರಹಿಸಿ ತಂದಿದ್ದು, ಇದನ್ನು ಇತ್ತೀಚೆಗೆ ದೆಹಲಿಯಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಡೆನ್ಮಾರ್ಕ್, ಫಿಜಿ, ನೈಜಿರೀಯಾ ಸೇರಿದಂತೆ ವಿವಿಧ ದೇಶಗಳ ಹೈಕಮಿಷನರ್‌ಗಳು, ರಾಯಭಾರಿಗಳು ಉಪಸ್ಥಿತರಿದ್ದರು.
ಇನ್ನೂ 77 ದೇಶಗಳ ಜಲವನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಇದು ಮಂದಿರ ಪೂರ್ಣಗೊಳ್ಳುವುದರೊಳಗೆ ಲಭ್ಯವಾಗುವ ನಿರೀಕ್ಷೆ ಇದೆ.