ದನ ಮೇಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ; ಹಿರೇಹಳ್ಳಿ ಸಮೀಪದ ಛೋಟಸಾಬರ ಪಾಳ್ಯದ ಜಯಲಕ್ಷ್ಮೇ (35) ಮೃತ
ತುಮಕೂರು: ತಾಲೂಕಿನ ಛೋಟಸಾಬರ ಪಾಳ್ಯದಲ್ಲಿ ನಡೆದಿರುವ ರೈತ ಮಹಿಳೆ ಬರ್ಬರ ಹತ್ಯೆ, ಸಾಮೂಹಿಕ ಅತ್ಯಾಚಾರ ಶಂಕೆ ಪ್ರಕರಣವನ್ನು ವಾರ ಸಮೀಪಿಸಿದರೂ ಭೇದಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಖಾಕಿಯ ದಿವ್ಯ ನಿರ್ಲಕ್ಷ್ಯ ಜನಾಕ್ರೋಶ ಭುಗಿಲೇಳಲು ನಾಂದಿಯಾಗುತ್ತಿದೆ.
ಮೈಸೂರಲ್ಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಐದು ದಿನಗಳಲ್ಲಿ ಕ್ರೌರ್ಯಮೆರೆದ ಕಾಮಾಂಧರ ಹೆಡೆಮುರಿಕಟ್ಟಿದ್ದಾರೆ. ಆದರೆ, ಅದೇ ದಿನ (ಆ.24) ತುಮಕೂರಲ್ಲಿ ನಡೆದಿರುವ ರೈತ ಮಹಿಳೆ ಹಂತಕರ ಪತ್ತೆಯಾಗಿಲ್ಲ.
ಪ್ರಕರಣದ ಸುತ್ತ
ಹಿರೇಹಳ್ಳಿ ಸಮೀಪದ ಛೋಟಸಾಬರ ಪಾಳ್ಯದ ಜಯಲಕ್ಷ್ಮೇ (35) ಮೃತ ದುರ್ದೈವಿ. ಆ.24ರಂದು ಬೆಳಗ್ಗೆ ದನ ಮೇಯಿಸಲು ಸಮೀಪದ ಬೆಟ್ಟಕ್ಕೆ ತೆರಳಿದ್ದರು. ಸಂಜೆಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ. ಶಾಲೆಯಿಂದ ಬಂದ ಮಗಳು ಸಂಜೆ 5 ಗಂಟೆ ಸುಮಾರಿಗೆ ತಾಯಿಯನ್ನು ಹುಡುಕಿಕೊಂಡು ಹೋದಾಗ, ಹೊಲದಲ್ಲಿ ಟವಲ್ ಸಿಕ್ಕಿತ್ತು. ನಂತರ ಕೆಲಸಕ್ಕೆ ಹೋಗಿದ್ದ ಪತಿ ಶಿವಕುಮಾರ್ ಬಂದು ಪತ್ನಿಯ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿತ್ತು. ವಿವಸ್ತ್ರಗೊಂಡ ಸ್ಥಿತಿ, ಮೈಮೇಲಿನ ಗಾಯಗಳಿಂದಾಗಿ ಅತ್ಯಾಚಾರವೆಂದು ಶಂಕಿಸಲಾಗಿದೆ. ಅಂದು ಸಂಜೆಯೇ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಇದುವರೆಗೆ ಪೊಲೀಸರು ಪ್ರಕರಣ ಭೇದಿಸಿಲ್ಲ.
ತುಮಕೂರಿನ ಹಿರೇಹಳ್ಳಿ ಸಮೀಪದ ಛೋಟಸಾಬರ ಪಾಳ್ಯದ ಬೆಟ್ಟದಲ್ಲಿ ದನ ಮೇಯಿಸಲು ತೆರಳಿದ್ದ ಜಯಲಕ್ಷ್ಮಿ (35) ಎಂಬ ರೈತ ಮಹಿಳೆಯ ಹತ್ಯೆಯಾಗಿತ್ತು. ವಿವಸ್ತ್ರ ಸ್ಥಿತಿಯಲ್ಲಿ ಶವ ಇದ್ದಿದ್ದರಿಂದ ಅತ್ಯಾಚಾರ ಶಂಕೆ ವ್ಯಕ್ತವಾಗಿತ್ತು. ಈ ಯಾವುದರ ಬಗ್ಗೆಯೂ ಪೊಲೀಸರು ಸ್ಪಷ್ಟ ಮಾಹಿತಿ ನೀಡಿಲ್ಲ. ಜಯಲಕ್ಷ್ಮಿ ಗಟ್ಟಿಯಾಗಿದ್ದರು, ಯಾರಾದರೊಬ್ಬ ಕ್ರೂರಿಯಾಗಿದ್ದರೆ ಅವನಿಂದ ಖಂಡಿತ ತಪ್ಪಿಸಿಕೊಳ್ಳುತ್ತಿದ್ದರು ಎಂದು ಪತಿ ಶಿವಕುಮಾರ್ ಮತ್ತು ಗ್ರಾಮಸ್ಥರು ಇದನ್ನು ಸಾಮೂಹಿಕ ಅತ್ಯಾಚಾರ, ಕೊಲೆಯೆಂದು ಶಂಕಿಸಿದ್ದಾರೆ.
ಪ್ರಕರಣದ ತನಿಖೆಗೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಸಾಕಷ್ಟು ಬಾರಿ ಪೊಲೀಸರು ಮೃತ ಮಹಿಳೆಯ ಗ್ರಾಮ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಹಿಳೆ ಹತ್ಯೆಯಾದ ಸ್ಥಳದಿಂದ ಹೊರಟ ಶ್ವಾನದಳ ರಿಸಾಲ್ ಪಾಳ್ಯದವರೆಗೆ ಹೋಗಿ, ಅಲ್ಲಿ ನಿಂತಿತು. ಅದು ಊರ್ಡಿಗೆರೆ ರಸ್ತೆಯಾಗಿದ್ದು, ಅಲ್ಲಿಂದ ವಾಹನದಲ್ಲಿ ಆರೋಪಿಗಳು ತಪ್ಪಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.