ಜಿಂದಾಲ್‌ಗೆ 3,667 ಎಕರೆ ಭೂಮಿ, ರಾಜ್ಯಕ್ಕೆ 2500 ಕೋಟಿ ರೂ. ಪಂಗನಾಮ: ಎಚ್‌ಕೆ ಪಾಟೀಲ್‌ ಆರೋಪ

ಜಿಂದಾಲ್‌ಗೆ ರಿಯಾಯಿತಿ ದರದಲ್ಲಿ 3,667 ಎಕರೆ ಭೂಮಿ ನೀಡಿದ್ದಕ್ಕೆ ಎಚ್‌ಕೆ ಪಾಟೀಲ್‌ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರದ ಮೂಲಕ ರಾಜ್ಯ ಸರಕಾರ ಕರ್ನಾಟಕಕ್ಕೆ 2,500 ಕೋಟಿ ರೂ. ಪಂಗನಾಮ ಹಾಕಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್‌ಗೆ 3,667 ಎಕರೆ ಭೂಮಿ, ರಾಜ್ಯಕ್ಕೆ 2500 ಕೋಟಿ ರೂ. ಪಂಗನಾಮ: ಎಚ್‌ಕೆ ಪಾಟೀಲ್‌ ಆರೋಪ
Linkup
ಗದಗ: ರಾಜ್ಯ ಸರಕಾರ ಜಿಂದಾಲ್‌ಗೆ ರಿಯಾಯಿತಿ ದರದಲ್ಲಿ 3,667 ಎಕರೆ ಭೂಮಿಯನ್ನು ಕೊಡುವ ಮೂಲಕ ರಾಜ್ಯಕ್ಕೆ 2,500 ಕೋಟಿ ರೂ. ಪಂಗನಾಮ ಹಾಕಲು ಹೊರಟಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಆರೋಪಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸರಕಾರಕ್ಕೆ 2 ಸಾವಿರ ಕೋಟಿ ರೂ. ಕೊಡಬೇಕಾದ ಕಟಬಾಕಿ ಇರುವ ಕಂಪನಿಗೆ ಈಗ ರಿಯಾಯಿತಿ ದರದಲ್ಲಿ ಭೂಮಿ ಕೊಡುವ ಹಿಂದಿನ ಉದ್ದೇಶ ಏನು? ರಾಜ್ಯದ ದೊಡ್ಡ ಆಸ್ತಿಯನ್ನು ಹೀಗೆ ಪರಭಾರೆ ಮಾಡಲು ಹೊರಟಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಬಹುದೊಡ್ಡ ಅಪಚಾರ. ಈ ಪ್ರಯತ್ನದ ಹಿಂದೆ ಅಪ್ರಮಾಣಿಕರ ಕೈಗಳಿದ್ದು, ರಾಜ್ಯದ ಪ್ರತಿಯೊಬ್ಬ ನಾಗರಿಕನೂ ಸರಕಾರದ ಪ್ರಾಮಾಣಿಕತನ ಬಗ್ಗೆ ಸಂಶಯ ವ್ಯಕ್ತಪಡಿಸುವಂತಾಗಿದೆ," ಎಂದು ಆರೋಪಿಸಿದರು. "ಈ ಹಿಂದೆ ಜಿಂದಾಲ್‌ಗೆ ಭೂಮಿ ಕೊಡುವ ವಿಷಯವಾಗಿ ಬಿಎಸ್‌ವೈ ಪ್ರತಿಭಟನೆ ಮಾಡಿದರು. ರಾಜ್ಯದ ಒಂದಿಂಚೂ ಭೂಮಿಯನ್ನು ಕೊಡಲು ಬಿಡುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಯಡಿಯೂರಪ್ಪನವರ ಆ ಛಲ ಎಲ್ಲಿ ಹೋಯಿತು? ಆವತ್ತು ಜನಪರವಾಗಿ ಮಾತನಾಡಿದ ಅವರು ಇವತ್ತು ಇಂಥ ನಿರ್ಧಾರ ಕೈಗೊಂಡಿದ್ದು ಯಾಕೆ?" ಎಂದು ಪ್ರಶ್ನಿಸಿದರು. '' ಕಂಪನಿಗೆ ಭೂಮಿ ಕೊಡುವ ವಿಷಯವಾಗಿ ನಾನು ವಿರೋಧ ವ್ಯಕ್ತಪಡಿಸಿದ್ದೆ. ನನ್ನ ಜೊತೆ ಶಾಸಕ ಆನಂದ್‌ ಸಿಂಗ್‌ ಅವರೂ ಧ್ವನಿಗೂಡಿಸಿದ್ದರು. ಈಗ ಮೌನವಾಗಿರುವುದು ಏಕೆ? ಈ ಎಲ್ಲ ಪ್ರಶ್ನೆಗಳ ಬಗ್ಗೆ ಜನರಿಗೆ ಉತ್ತರ ಕೊಡದಿದ್ದರೆ ಬಹುದೊಡ್ಡ ಗಂಡಾಂತರ ಏದುರಿಸಬೇಕಾಗುತ್ತದೆ," ಎಂದು ಎಚ್ಚರಿಸಿದರು. ''ಜಿಂದಾಲ್‌ 12 ಲಕ್ಷಕ್ಕೂ ಹೆಚ್ಚು ಟನ್‌ ಅಕ್ರಮ ಅದಿರು ರಫ್ತು ಮಾಡಿದೆ ಎಂದು ಸಿಬಿಐ ನೀಡಿದ ಪ್ರಾಥಮಿಕ ವರದಿ ಆಧರಿಸಿ ಎಫ್‌ಐಆರ್‌ ದಾಖಲಾಗಿದೆ. ಇಂಥ ಕಂಪನಿಗೆ ಅದೂ ರಿಯಾಯಿತಿ ದರದಲ್ಲಿ 3,665 ಎಕರೆ ಭೂಮಿ ಕೊಡುತ್ತಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ'' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.