ಕೋವಿಡ್ 3ನೇ ಅಲೆಗೆ ಬಿಬಿಎಂಪಿ ಸಿದ್ಧತೆ: ಪದ್ಮನಾಭ ನಗರದಲ್ಲಿ ಮಕ್ಕಳ ಕೋವಿಡ್‌ ಸೆಂಟರ್‌

ಮಕ್ಕಳನ್ನು ಆಸ್ಪತ್ರೆಯಲ್ಲಿ ಇಡುವುದು ಕಷ್ಟ. ಹೀಗಾಗಿ, ಮಕ್ಕಳ ವಾರ್ಡ್‌ಗಳ ಗೋಡೆಗಳನ್ನು ವರ್ಣರಂಜಿತ ಕಲಾಕೃತಿಗಳಿಂದ ಚಿತ್ರಿಸಲಾಗಿದೆ. ಪ್ರಾಣಿಗಳು, ಪಕ್ಷಿಗಳು ಮತ್ತು ಇತರ ಕಲಾಕೃತಿಗಳ ಚಿತ್ರಗಳೊಂದಿಗೆ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದೆ.

ಕೋವಿಡ್ 3ನೇ ಅಲೆಗೆ ಬಿಬಿಎಂಪಿ ಸಿದ್ಧತೆ: ಪದ್ಮನಾಭ ನಗರದಲ್ಲಿ ಮಕ್ಕಳ ಕೋವಿಡ್‌ ಸೆಂಟರ್‌
Linkup
: ಕೋವಿಡ್‌ ಮೂರನೇ ಅಲೆಯಿಂದ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪದ್ಮನಾಭನಗರದ ಪ್ರಾದೇಶಿಕ ಇನ್ಸ್‌ಟಿಟ್ಯೂಟ್‌ ಆಫ್‌ ಕೋ-ಆಪರೇಟಿವ್‌ ಮ್ಯಾನೇಜ್‌ಮೆಂಟ್‌ನಲ್ಲಿ ಆಮ್ಲಜನಕಯುಕ್ತ 42 ಹಾಸಿಗೆಗಳ ಮಕ್ಕಳ ವಿಶೇಷ ಕೋವಿಡ್‌ ಕೇಂದ್ರ (ಸಿಸಿಸಿ) ಸ್ಥಾಪಿಸಿದೆ. ಕೋವಿಡ್‌ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಆತಂಕವಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳಿಗೆ ಸಿಸಿಸಿ ಕೇಂದ್ರ ಆರಂಭಿಸಲಾಗಿದೆ. ಮೂಲಸೌಲಭ್ಯ ಕಲ್ಪಿಸಲಾಗಿದೆ. ಮಕ್ಕಳ ವಯಸ್ಸನ್ನು ಪರಿಗಣಿಸಿ ತಾಯಂದಿರಿಗೆ ಚಿಕ್ಕ ಮಕ್ಕಳೊಂದಿಗೆ ಇರಲು ಅವಕಾಶ ನೀಡುವ ಬಗ್ಗೆ ಬಿಬಿಎಂಪಿ ಒಂದು ಸುತ್ತಿನ ಸಭೆ ನಡೆಸಿದೆ. ಮಕ್ಕಳನ್ನು ಆಸ್ಪತ್ರೆಯಲ್ಲಿ ಇಡುವುದು ಕಷ್ಟ. ಹೀಗಾಗಿ, ಮಕ್ಕಳ ವಾರ್ಡ್‌ಗಳ ಗೋಡೆಗಳನ್ನು ವರ್ಣರಂಜಿತ ಕಲಾಕೃತಿಗಳಿಂದ ಚಿತ್ರಿಸಲಾಗಿದೆ. ಪ್ರಾಣಿಗಳು, ಪಕ್ಷಿಗಳು ಮತ್ತು ಇತರ ಕಲಾಕೃತಿಗಳ ಚಿತ್ರಗಳೊಂದಿಗೆ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ತಜ್ಞರ ಅಭಿಪ್ರಾಯದ ಆಧಾರದ ಮೇಲೆ ಅಗತ್ಯ ಸಿದ್ಧತೆಗಳನ್ನು ಸಿಸಿಸಿಯಲ್ಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಕಾರಿಗಳು ತಿಳಿಸಿದ್ದಾರೆ. 'ಮೂರು ಮಹಡಿಗಳಲ್ಲಿ ನೆಲಮಹಡಿಯನ್ನು ಗರ್ಭಿಣಿಯರಿಗೆ ಮೀಸಲಿಡಲಾಗುವುದು. ಉಳಿದ ಎರಡು ಮಹಡಿಗಳನ್ನು ಮಕ್ಕಳಿಗಾಗಿ ಬಳಸಲಾಗುತ್ತಿದೆ. ಕರ್ತವ್ಯ ನಿರತ ವೈದ್ಯರ ಜತೆಗೆ ರೋಗಿಗಳನ್ನು ಪರೀಕ್ಷಿಸಲು ಸ್ತ್ರೀರೋಗ ತಜ್ಞ ಮತ್ತು ಮಕ್ಕಳ ವೈದ್ಯರನ್ನು ನೇಮಿಸಲು ಯೋಜಿಸುತ್ತಿದ್ದೇವೆ' ಎಂದು ಪದ್ಮನಾಭನಗರದ ವೈದ್ಯಕೀಯ ಅಧಿಕಾರಿ ಡಾ. ಸುರೇಶ್‌ ಹೇಳಿದರು. 'ಎರಡನೇ ಅಲೆಯಿಂದ ಪಾಠಗಳನ್ನು ಕಲಿತಿದ್ದೇವೆ. ಸಾಂಕ್ರಾಮಿಕ ರೋಗದಿಂದ ಹೊರಬರಲು ಪರಸ್ಪರ ಸಹಕಾರದ ಅವಶ್ಯಕತೆಯಿದೆ' ಎಂದು ದಕ್ಷಿಣ ವಲಯದ ಆರೋಗ್ಯ ಅಧಿಕಾರಿ ಡಾ. ಶಿವಕುಮಾರ್‌ ತಿಳಿಸಿದರು. ಗುರುವಾರ ಉದ್ಘಾಟನೆ: ವಾರ್ಡ್‌ನಲ್ಲೇ ಪ್ರತಿ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡಿದ್ದೇವೆ. ಕೋವಿಡ್‌ ಕೇಂದ್ರವು ಆಕ್ಸಿಜನ್‌ ಸಹಿತ ಬೆಡ್‌ ಹಾಗೂ ಸಾಮಾನ್ಯ ಬೆಡ್‌ಗಳನ್ನು ಹೊಂದಿದೆ. ಮುಂದಿನ ಗುರುವಾರ ಉದ್ಘಾಟನೆಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.