ಪತ್ನಿ, ಮಗುವಿನ ಎದುರಲ್ಲೇ ರೌಡಿ ಶೀಟರ್ ಹತ್ಯೆ: ಬೆಂಗಳೂರಿನಲ್ಲಿ ಬ್ಯಾಂಕ್‌ನೊಳಗೆ ನುಗ್ಗಿ ಕೊಲೆ

ಸಾರ್ವಜನಿಕ ಸ್ಥಳಗಳಲ್ಲೇ ಹಂತಕರು ಹರಿಸಿದ್ದ ರಕ್ತದ ಕೋಡಿಯ ಕಲೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಬ್ಯಾಂಕ್‌ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆಯೇ ಬಬ್ಲಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.

ಪತ್ನಿ, ಮಗುವಿನ ಎದುರಲ್ಲೇ ರೌಡಿ ಶೀಟರ್ ಹತ್ಯೆ: ಬೆಂಗಳೂರಿನಲ್ಲಿ ಬ್ಯಾಂಕ್‌ನೊಳಗೆ ನುಗ್ಗಿ ಕೊಲೆ
Linkup
: ಕಾನೂನಿನ ಭಯವಿಲ್ಲದೆ ಅಪರಾಧಿಗಳು ಬೆಂಗಳೂರಿನಲ್ಲಿ ಹಾಡಹಗಲೇ ರಕ್ತದ ಕೋಡಿ ಹರಿಸುವುದನ್ನು ಮುಂದುವರಿಸಿದ್ದಾರೆ. ಸೋಮವಾರ ಮಧ್ಯಾಹ್ನ ಪತ್ನಿ ಮತ್ತು ಮಗುವಿನ ಜತೆ ಬ್ಯಾಂಕ್‌ಗೆ ಬಂದಿದ್ದ ರೌಡಿಶೀಟರ್‌ವೊಬ್ಬನನ್ನು ದುಷ್ಕರ್ಮಿಗಳು ಬ್ಯಾಂಕ್‌ನೊಳಗೇ ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆ. ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ರೌಡಿ ಶೀಟರ್‌ ಜೋಸೆಫ್‌ ಅಲಿಯಾಸ್‌ ಬಬ್ಲಿ ಕೊಲೆಗೀಡಾತ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್‌ಗಳಲ್ಲಿ ಬಂದಿದ್ದ 8 ಮಂದಿ ಹಂತಕರು ಕೋರಮಂಗಲ 8ನೇ ಹಂತದಲ್ಲಿರುವ ಯೂನಿಯನ್‌ ಬ್ಯಾಂಕ್‌ನೊಳಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಜೂನ್ 24ರಂದು ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್‌ ಅವರನ್ನು ಪೀಟರ್‌ ಹಾಗೂ ಸೂರ್ಯ ಎಂಬ ಆರೋಪಿಗಳು ಹಾಡಹಗಲೇ ನಡು ರಸ್ತೆಯಲ್ಲಿ ಕೊಲೆಗೈದಿದ್ದರು. ಜುಲೈ 3ರಂದು ಫೈನಾನ್ಸಿಯರ್‌ ಮದನ್‌ ಎಂಬಾತನನ್ನು ಹಾಡಹಗಲೇ ಬನಶಂಕರಿ ದೇವಸ್ಥಾನದ ಮುಂಭಾಗ ಮಚ್ಚಿನಿಂದ ಕೊಚ್ಚಿ ಕೊಂದಿದ್ದರು. ಹೀಗೆ ಸಾರ್ವಜನಿಕ ಸ್ಥಳಗಳಲ್ಲೇ ಹಂತಕರು ಹರಿಸಿದ್ದ ರಕ್ತದ ಕೋಡಿಯ ಕಲೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಬ್ಯಾಂಕ್‌ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆಯೇ ಬಬ್ಲಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ನಗರದಲ್ಲಿ ಕಾನೂನು ಮತ್ತು ಶಿಸ್ತು ಸಂಪೂರ್ಣ ಹಳಿ ತಪ್ಪಿದೆಯೇ ಎಂಬ ಪ್ರಶ್ನೆ ಎದ್ದಿದೆ. ಕೊಲೆಗೆ ಕಾರಣ ಏನು..? ಆಡುಗೋಡಿ ಠಾಣೆಯ ರೌಡಿಶೀಟರ್‌ ಪಟ್ಟಿಯಲ್ಲಿ ಬಬ್ಲಿಯ ಹೆಸರಿತ್ತು. ಆದರೆ 2011ರ ನಂತರ ಆತ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಲಿಲ್ಲ. ಕೊಳಚೆ ಪ್ರದೇಶವೊಂದರ ನಿವಾಸಿಯಾಗಿರುವ ಬಬ್ಲಿ, ಮತಾಂತರದಲ್ಲೂ ತೊಡಗಿದ್ದ ಎನ್ನಲಾಗಿದೆ. ವಿವೇಕ ನಗರ ರೌಡಿ ಶೀಟರ್‌ ಜಾರ್ಜ್‌ ಅವರ ಸಹೋದರಿಯನ್ನು ಬಬ್ಲಿ ಪ್ರೇಮಿಸಿ ವಿವಾಹವಾಗಿದ್ದ. ಇದಾದ ಬಳಿಕ ತನ್ನ ಭಾವನ ವಿರುದ್ಧ ಬಾಮೈದ ದ್ವೇಷ ಸಾಧಿಸುತ್ತಿದ್ದ. ಇದು ಕೂಡ ಕೊಲೆಗೆ ಕಾರಣವಿರಬಹುದು ಎನ್ನಲಾಗುತ್ತಿದೆ. ಮತಾಂತರಗೊಂಡಿದ್ದ ಬಬ್ಲಿ: ಈತ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡು ಜೋಸೆಫ್‌ ಅಲಿಯಾಸ್‌ ಬಬ್ಲಿ ಎಂದು ಹೆಸರಿಟ್ಟುಕೊಂಡಿದ್ದ. ಒಬ್ಬರನ್ನು ಮತಾಂತರಗೊಳಿಸಿದರೆ 3 ಲಕ್ಷ ರೂ. ಪಡೆಯುತ್ತಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. 'ಹಂತಕರು ಕೊಲೆಗೈಯುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ' ಎಂದು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ ಮುರುಗನ್‌ ತಿಳಿಸಿದ್ಧಾರೆ.