ನಾಗಪ್ಪ ನಾಗನಾಯಕನಹಳ್ಳಿ: ಕೊರೊನಾ ಸೋಂಕಿನ ಹೆಮ್ಮಾರಿಯು ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಗೂ ಸಂಕಷ್ಟ ತಂದೊಡ್ಡಿದೆ. ಪ್ರಾಣಿಗಳ ದಿನನಿತ್ಯದ ಹಾಗೂ ಇನ್ನಿತರೆ ಖರ್ಚು, ವೆಚ್ಚಗಳಿಗೆ ಹಣ ಹೊಂದಿಸಲಾಗದೆ ಕಂಗೆಟ್ಟಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು, ನೆರವಾಗಿ ದಾನಿಗಳ ಮೊರೆ ಹೋಗಿದೆ.
ರಾಜಧಾನಿಗೆ ಸನಿಹದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು 731.88 ಹೆಕ್ಟೇರ್ ವಿಸ್ತೀರ್ಣವಿದ್ದು, ಮೃಗಾಲಯ, ಚಿಟ್ಟೆ ಉದ್ಯಾನ, ಸಫಾರಿ ಮತ್ತು ಪುನರ್ವಸತಿ ಕೇಂದ್ರವನ್ನು ಹೊಂದಿದೆ. ಉದ್ಯಾನದಲ್ಲಿ 102 ನಾನಾ ಜಾತಿಯ 2,388 , ಪಕ್ಷಿಗಳು, ಸರೀಸೃಪಗಳು ಆಶ್ರಯ ಪಡೆದಿವೆ. ಪ್ರವಾಸಿಗರಿಂದ ಸಂಗ್ರಹವಾಗುವ ಆದಾಯವನ್ನಷ್ಟೇ ನೆಚ್ಚಿಕೊಂಡು ಉದ್ಯಾನವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಕೋವಿಡ್‌ನಿಂದಾಗಿ 2020ರ ಏಪ್ರಿಲ್‌ನಿಂದಲೂ ಹೆಚ್ಚಿನ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿಲ್ಲ. ಹೀಗಾಗಿ, ಆದಾಯ ಕುಗ್ಗಿದೆ.
ರಾಜ್ಯ ಸರಕಾರದಿಂದ ಯಾವುದೇ ಅನುದಾನ ಪಡೆಯದೆ ಪ್ರವಾಸಿಗರಿಂದ ಬರುವ ಆದಾಯದಲ್ಲೇ ಮೃಗಾಲಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. 2019-20ರಲ್ಲಿ 16.16 ಲಕ್ಷ ಮಂದಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದರು. ಇದರಿಂದ 31.99 ಕೋಟಿ ರೂ. ಟಿಕೆಟ್ ಆದಾಯ ಬಂದಿತ್ತು. 2020-21ರಲ್ಲಿ ಕಾಲಿಟ್ಟ ಕೊರೊನಾ ಸೋಂಕು, ಮೃಗಾಲಯದ ಆದಾಯದ ಮೇಲೆ ದೊಡ್ಡ ಪೆಟ್ಟು ನೀಡಿದ್ದು, ಕೇವಲ 14 ಕೋಟಿ ರೂ. ಆದಾಯವಷ್ಟೇ ಸಂಗ್ರಹವಾಗಿದೆ. ಆದರೆ, ಪ್ರಾಣಿ-ಪಕ್ಷಿಗಳ ಊಟ, ಚಿಕಿತ್ಸೆ ಮತ್ತು ಸಿಬ್ಬಂದಿಯ ವೇತನಕ್ಕೆ ವಾರ್ಷಿಕ 21ರಿಂದ 22 ಕೋಟಿ ರೂ. ವೆಚ್ಚವಾಗುತ್ತದೆ. ಹೀಗಾಗಿ, ಕಳೆದ ವರ್ಷ ಅಂದಾಜು 8 ಕೋಟಿ ರೂ. ಖೋತಾ ಆಗಿದ್ದು, ಉದ್ಯಾನದ ನಿರ್ವಹಣೆಗೆ ಇನ್ನಿಲ್ಲದ ಪಡಿಪಾಟಿಲು ಬೀಳುವಂತಾಗಿದೆ.
2021-22ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 27ರವರೆಗೆ ಕೇವಲ 72 ಲಕ್ಷ ರೂ. ಆದಾಯವಷ್ಟೇ ಬಂದಿದೆ. ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್ ಕಾರಣದಿಂದ ಈವರೆಗೆ ಉದ್ಯಾನವನ್ನು ತೆರೆದಿಲ್ಲ. ಪರಿಣಾಮ, ಉದ್ಯಾನದ ನಿರ್ವಹಣೆಗೆ ತಗಲುವ ವೆಚ್ಚವನ್ನು ಹೊಂದಿಸಲಾಗುತ್ತಿಲ್ಲ. ಸಣ್ಣ-ಪುಟ್ಟ ಪ್ರಾಣಿ, ಪಕ್ಷಿಗಳನ್ನು ಹೊರತುಪಡಿಸಿ ಆನೆ, ಹುಲಿ, ಸಿಂಹ, ಚಿರತೆ, ಕರಡಿ, ಜಿರಾಫೆ, ಕರಡಿಗಳು ಸೇರಿದಂತೆ 1,534 ಪ್ರಾಣಿಗಳ ಒಂದು ದಿನದ ಆಹಾರಕ್ಕೆ ಸರಾಸರಿ 2.69 ಲಕ್ಷ ರೂ. ವೆಚ್ಚವಾಗುತ್ತದೆ. ಪ್ರತಿಯೊಂದು ಆನೆಯ ಊಟಕ್ಕೆ 3 ಸಾವಿರ ರೂ., ಹುಲಿಗಳಿಗೆ ತಲಾ 1500 ರೂ. ಖರ್ಚಾಗುತ್ತದೆ.
ಪ್ರಾಣಿ ಪ್ರಿಯರಿಂದ 1.61 ಕೋಟಿ ರೂ.: ರಾಜ್ಯ ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿಯೂ ಆಗಿರುವ ಚಲನಚಿತ್ರ ನಟ ದರ್ಶನ್ ಅವರ ಮನವಿಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಕೆಲವರು ಪ್ರಾಣಿಗಳನ್ನು ದತ್ತು ಪಡೆದಿದ್ದರೆ, ಇನ್ನು ಹಲವರು ಪ್ರಾಣಿ-ಪಕ್ಷಿಗಳ ಊಟ, ಔಷಧೋಪಚಾರಕ್ಕೆ ದೇಣಿಗೆ ನೀಡಿದ್ದಾರೆ. ಇಲ್ಲಿಯವರೆಗೆ 2,535 ಮಂದಿ ಪ್ರಾಣಿ ಪ್ರಿಯರು 1,16,90,796 ರೂ. ನೆರವು ಕೊಟ್ಟಿದ್ದಾರೆ.
ಪ್ರಾಣಿ ಪ್ರಿಯರು ದತ್ತು ಪಡೆದ ಪ್ರಾಣಿಗಳಿಗೆ ಅವರಿಷ್ಟದ ಹೆಸರಿಡಲು ಅವಕಾಶ ಕಲ್ಪಿಸಲಾಗಿದೆ. 2020-21ರ ಆರ್ಥಿಕ ವರ್ಷದಲ್ಲೂ 230 ಮಂದಿಯು 299 ಪ್ರಾಣಿಗಳನ್ನು ದತ್ತು ತೆಗೆದುಕೊಂಡು, 5,68,200 ರೂ. ನೆರವಿನ ಸಹಾಯಹಸ್ತ ಚಾಚಿದ್ದರು. ಮೃಗಾಲಯಗಳಿಗೆ ನೆರವು ನೀಡಲು ನಿಗದಿಪಡಿಸಿದ್ದ ಕನಿಷ್ಠ ಮೊತ್ತದ ಮಿತಿಯನ್ನು ಇಳಿಕೆ ಮಾಡಿರುವುದರಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ಈ ಮೊದಲು ಕನಿಷ್ಠ 1000 ರೂ. ನಿಂದ 1.75 ಲಕ್ಷ ರೂ.ವರೆಗೆ ನೆರವು ನೀಡಬಹುದಿತ್ತು. ಸದ್ಯ ಕನಿಷ್ಠ 50 ರೂ. ನಿಂದ ಗರಿಷ್ಠ 2 ಲಕ್ಷ ರೂ.ವರೆಗೆ ದೇಣಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ನಿರೀಕ್ಷೆಗೂ ಮೀರಿ ನೆರವು ಹರಿದುಬರುತ್ತಿದೆ. ದೇಣಿಗೆ ನೀಡಿದವರಿಗೆ 80 'ಜಿ' ತೆರಿಗೆ ವಿನಾಯಿತಿಯೂ ದೊರಕುತ್ತಿದೆ.
'ಕೋವಿಡ್‌ನಿಂದ ಮೃಗಾಲಯದ ನಿರ್ವಹಣೆಯ ವೆಚ್ಚ ಭರಿಸುವುದು ಕಷ್ಟವಾಗಿದ್ದು, ನೆರವು ನೀಡುವಂತೆ ಪ್ರಾಣಿ ಪ್ರಿಯರನ್ನು ಕೋರಲಾಗುತ್ತಿದೆ. ಪ್ರಾಣಿಗಳನ್ನು ದತ್ತು ಪಡೆಯಲು ಹಾಗೂ ಒಂದು ದಿನದ ಆಹಾರಕ್ಕೆ ದೇಣಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಉದ್ಯಾನದಲ್ಲಿ 350 ಮಂದಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ವೇತನ, ಪ್ರಾಣಿ-ಪಕ್ಷಿಗಳ ಆಹಾರಕ್ಕೆ ಮತ್ತು ಔಷಧ, ಚಿಕಿತ್ಸೆಗೆ ವರ್ಷಕ್ಕೆ 21-22 ಕೋಟಿ ರೂ.ಗಳ ಅಗತ್ಯವಿದೆ' ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಗೋಕುಲ್ ಮಾಹಿತಿ ನೀಡಿದ್ಧಾರೆ.