ಕಳೆದ 6 ತಿಂಗಳಲ್ಲಿ 2 ಲಕ್ಷ ಕ್ರಿಪ್ಟೋ ಖಾತೆಗಳನ್ನು ಬ್ಲಾಕ್‌ ಮಾಡಿದ ಭಾರತೀಯ ಎಕ್ಸ್‌ಚೇಂಜ್‌ಗಳು!

ಆನ್‌ಲೈನ್ ವಂಚನೆ, ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆಯಂತಹ ಕ್ರಿಮಿನಲ್‌ ಚಟುವಟಿಕೆಗಳಿಗೆ ಕ್ರಿಪ್ಟೋಕರೆನ್ಸಿ ಬಳಕೆಯಾಗುತ್ತಿರುವ ಗಂಭೀರ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಲ್ಲಿ 2 ಲಕ್ಷ ಕ್ರಿಪ್ಟೋ ಖಾತೆಗಳನ್ನು ಬ್ಲಾಕ್‌ ಮಾಡಲಾಗಿದೆ.

ಕಳೆದ 6 ತಿಂಗಳಲ್ಲಿ 2 ಲಕ್ಷ ಕ್ರಿಪ್ಟೋ ಖಾತೆಗಳನ್ನು ಬ್ಲಾಕ್‌ ಮಾಡಿದ ಭಾರತೀಯ ಎಕ್ಸ್‌ಚೇಂಜ್‌ಗಳು!
Linkup
ಹೊಸದಿಲ್ಲಿ: ಕಳೆದ ಒಂದು ವರ್ಷದಿಂದೀಚೆಗೆ ಕ್ರಿಪ್ಟೋಕರೆನ್ಸಿಗಳು ವಿಶ್ವಾದ್ಯಂತ ವ್ಯಾಪಕ ಜನಪ್ರಿಯತೆ ಗಳಿಸಿವೆ. ಒಂದೇ ವರ್ಷದಲ್ಲಿ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹಲವು ಪಟ್ಟು ಹೆಚ್ಚಳವಾಗಿದೆ. ಆದರೆ, ಮತ್ತೊಂದು ಕಡೆ ಕ್ರಿಪ್ಟೋಕರೆನ್ಸಿಯಿಂದ ಹಲವು ವಂಚನೆ ಪ್ರಕರಣಗಳೂ ನಡೆದಿವೆ. ಆನ್‌ಲೈನ್ ವಂಚನೆ, ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆಯಂತಹ ಕ್ರಿಮಿನಲ್‌ ಚಟುವಟಿಕೆಗಳಿಗೆ ಕ್ರಿಪ್ಟೋಕರೆನ್ಸಿ ಬಳಕೆಯಾಗುತ್ತಿರುವ ಗಂಭೀರ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಲ್ಲಿ, ಬರೋಬ್ಬರಿ 2 ಲಕ್ಷ ಕ್ರಿಪ್ಟೋ ಖಾತೆಗಳನ್ನು ಬ್ಲಾಕ್‌ ಮಾಡಲಾಗಿದೆ. ಅಂದರೆ, 2021ರ ಏಪ್ರಿಲ್- ಸೆಪ್ಟೆಂಬರ್ ನಡುವೆ ದೇಶದ ಅಗ್ರ ಮೂರು ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳಾದ ವಾಜಿರ್‌ಎಕ್ಸ್‌, ಕಾಯಿನ್ ಸ್ವಿಚ್ ಕುಬೇರ್‌ ಮತ್ತು ಕಾಯಿನ್‌ಡಿಸಿಎಕ್ಸ್‌ ಗಳು ದುರುದ್ದೇಶಪೂರಿತ ಹಣ ವರ್ಗಾವಣೆ ಅಥವಾ ಆರ್ಥಿಕ ಚಟುವಟಿಕೆಗಳನ್ನು ಉಲ್ಲೇಖಿಸಿ ಈ ಕ್ರಮ ಕೈಗೊಂಡಿವೆ. ದುರುದ್ದೇಶಪೂರಿತ ಚಟುವಟಿಕೆಗಳು ಕಾಯಿನ್‌ಸ್ವಿಚ್‌ ಕುಬೇರ್‌ ಒಂದೇ ಎಕ್ಸ್‌ಚೇಂಜ್‌ನಲ್ಲಿ ಕಳೆದ ಆರು ತಿಂಗಳಲ್ಲಿ 180,000 ಕ್ರಿಪ್ಟೋ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ, ಇನ್ನೂ 200,000 ಖಾತೆಗಳ ಮೇಲೆ ನಿಗಾ ಇರಿಸಿದ್ದು, ದೈನಂದಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕಾಯಿನ್‌ಸ್ವಿಚ್‌ ಕುಬೇರ್‌ನ ಸಿಬಿಒ ಶರಣ್ ನಾಯರ್ ತಿಳಿಸಿದ್ದಾರೆ. ಭಾರತೀಯ ಮತ್ತು ವಿದೇಶಿ ಸರಕಾರಗಳ ಕಾನೂನು ಜಾರಿ ಸಂಸ್ಥೆಗಳಿಂದ ಮನವಿಗಳು ಬಂದ ನಂತರ ವಾಜಿರ್‌ಎಕ್ಸ್ ಎಕ್ಸ್‌ಚೇಂಜ್‌ 14,469 ಕ್ರಿಪ್ಟೋ ಖಾತೆಗಳನ್ನು ನಿರ್ಬಂಧಿಸಿದೆ. ಈ ಪೈಕಿ ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಂದ 38 ಮನವಿಗಳು ಬಂದಿದ್ದವು. ಅಮೆರಿಕ, ಬ್ರಿಟನ್‌, ಆಸ್ಟ್ರಿಯಾ, ಸ್ವಿಜರ್ಲ್ಯಾಂಡ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಿಂದ ಕ್ರಿಪ್ಟೋ ಖಾತೆಗಳ ಮಾಹಿತಿ ಒದಗಿಸುವಂತೆ ಮನವಿಗಳು ಬಂದಿದ್ದವು. ಹೀಗೆ ಸರಕಾರಿ ಏಜೆನ್ಸಿಗಳಿಂದ ಮನವಿ ಬಂದ ನಂತರ, ಶೇ.90ರಷ್ಟು ಅನುಮಾನಾಸ್ಪದ ಖಾತೆಗಳನ್ನು ನಿರ್ಬಂಧಿಸಲಾಗಿದೆ. ವಾಜಿರ್‌ಎಕ್ಸ್‌ ಎಕ್ಸ್‌ಚೇಂಜ್‌, ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋ ಸ್ವತ್ತುಗಳ ಮಂಡಳಿಯ (BACC) ಭಾಗವಾಗಿದ್ದು, ಎಮ್ಮ ಎಕ್ಸ್‌ಚೇಂಜ್‌ನಲ್ಲಿರುವ ಗ್ರಾಹಕರ ವಹಿವಾಟುಗಳನ್ನು ಸುಲಭವಾಗಿ ಟ್ರೇಸ್‌ ಮಾಡಬಹುದು. ಪ್ರಸ್ತುತ ಕ್ರಿಪ್ಟೋ ಕ್ಷೇತ್ರಕ್ಕೆ ಯಾವುದೇ ನಿಯಂತ್ರಕ ಕಾನೂನುಗಳು ಇರದಿದ್ದರೂ, ನಾವು ಸ್ವಯಂ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಅನುಸರಿಸಿದ್ದೇವೆ. ಎಲ್ಲ ಗ್ರಾಹಕರ ಖಾತೆಗಳಿಗೆ ಕೆವೈಸಿ ಮಾಹಿತಿಯನ್ನು ಹೊಂದಲಾಗಿದೆ. ಹೀಗಾಗಿ ಯಾವುದೇ ದುರುದ್ದೇಶಪೂರಿತ ಚಟುವಟಿಕೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಅಗತ್ಯವಿರುವ ಎಲ್ಲ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿದೆ. ಎಂದು ವಾಜಿರ್‌ಎಕ್ಸ್ ಸಂಸ್ಥಾಪಕ ನಿಶ್ಚಲ್‌ ಶೆಟ್ಟಿ ಹೇಳಿದ್ದಾರೆ. ವಾಜಿರ್‌ಎಕ್ಸ್‌ ಎಕ್ಸ್‌ಚೇಂಜ್‌ಗೆ ನೋಟಿಸ್‌ 2,790 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ-ಕರೆನ್ಸಿಗಳನ್ನು ಒಳಗೊಂಡ ವಹಿವಾಟುಗಳ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ವಾಜಿರ್‌ಎಕ್ಸ್‌ ಎಕ್ಸ್‌ಚೇಂಜ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಚೀನಾದ ಮಾಲೀಕತ್ವದ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಮೇಲೆ ನಡೆಯುತ್ತಿರುವ ಮನಿ-ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಕುರಿತು ತನಿಖೆ ನಡೆಲಾಗುತ್ತಿದೆ. ಇದರ ಆಧಾರದ ಮೇಲೆ ಕ್ರಿಪ್ಟೋ ಖಾತೆಗಳ ಮೇಲೆ ತನಿಖೆ ಆರಂಭಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ.