ಕೇಂದ್ರದ ವಿರುದ್ಧ ಒಂದಾದ ರಾಜಕೀಯ ವೈರಿಗಳು ; ಸೋನಿಯಾ-ಮಮತಾ ಶೀಘ್ರದಲ್ಲೇ ಹಸ್ತಲಾಘವ

ಸೋನಿಯಾ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಭೇಟಿಗೆ ಪೆಗಾಸಸ್‌ ಪ್ರಕರಣವೇ ವೇದಿಕೆ ಒದಗಿಸಿಕೊಡಲಿದೆ. ಪೆಗಾಸಸ್‌ ಕದ್ದಾಲಿಕೆ ಸಂತ್ರಸ್ತರ ಪಟ್ಟಿಯಲ್ಲಿ ಎರಡೂ ಪಕ್ಷಗಳ ಪ್ರಮುಖರ ಹೆಸರುಗಳಿವೆ. ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಫೋನ್‌ ಕದ್ದಾಲಿಕೆಗೆ ಒಳಗಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಕೇಂದ್ರದ ವಿರುದ್ಧ ಒಂದಾದ ರಾಜಕೀಯ ವೈರಿಗಳು ; ಸೋನಿಯಾ-ಮಮತಾ ಶೀಘ್ರದಲ್ಲೇ ಹಸ್ತಲಾಘವ
Linkup
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬದ್ಧವೈರಿಗಳು ಎನಿಸಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಕಾಂಗ್ರೆಸ್‌ ಈಗ ಪರಸ್ಪರ ಸ್ನೇಹದ ಹಸ್ತಲಾಘವಕ್ಕೆ ಸಜ್ಜಾಗಿವೆ. ಮತ್ತು ಶೀಘ್ರವೇ ಭೇಟಿಯಾಗಿ ಕೇಂದ್ರ ಸರಕಾರದ ವಿರುದ್ಧ ಜಂಟಿ ಹೋರಾಟ ನಡೆಸುವ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಭಯ ನಾಯಕರ ಭೇಟಿಗೆ ಪೆಗಾಸಸ್‌ ಪ್ರಕರಣವೇ ವೇದಿಕೆ ಒದಗಿಸಿಕೊಡಲಿದೆ. ಪೆಗಾಸಸ್‌ ಕದ್ದಾಲಿಕೆ ಸಂತ್ರಸ್ತರ ಪಟ್ಟಿಯಲ್ಲಿ ಎರಡೂ ಪಕ್ಷಗಳ ಪ್ರಮುಖರ ಹೆಸರುಗಳಿವೆ. ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಫೋನ್‌ ಕದ್ದಾಲಿಕೆಗೆ ಒಳಗಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅವರ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಹೆಸರು ಕೂಡ ಪೆಗಾಸಸ್‌ ಸಂತ್ರಸ್ತರ ಪಟ್ಟಿಯಲ್ಲಿದೆ. ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೆಸರೂ ಟಾರ್ಗೆಟ್‌ ಆದವರ ಲಿಸ್ಟಿನಲ್ಲಿದೆ. ಈ ವಿಷಯ ಕುರಿತು ಸೋನಿಯಾ ಮತ್ತು ಮಮತಾ ಚರ್ಚೆ ನಡೆಸಲಿದ್ದಾರೆ. ಮುಂದಿನ ಜಂಟಿ ಹೋರಾಟಕ್ಕೂ ಅವರು ರೂಪುರೇಷೆ ಸಿದ್ಧಪಡಿಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಮೋದಿ ಅಲೆಯನ್ನು ಹತ್ತಿಕ್ಕುವ ಧಾವಂತ ವ್ಯಕ್ತಪಡಿಸಿರುವ ಈ ನಾಯಕಿಯರು, ಒಂಟಿ ಪ್ರತಿಭಟನೆಗಿಂತ ಜಂಟಿ ಹೋರಾಟವೇ ಲೇಸು ಎಂದು ಭಾವಿಸಿದ್ದಾರೆ. ಮಮತಾ, ಮೋದಿಗೆ ಪರ್ಯಾಯ ಶಕ್ತಿಯಾಗುವ ಕನಸು ಕಟ್ಟಿಕೊಂಡಿದ್ದಾರೆ. ಯಾರೇ ಆದರೂ ಸರಿ, ಬಿಜೆಪಿ ಸೋಲಿಸುವುದು ತಮ್ಮ ಗುರಿ ಎಂದು ಸೋನಿಯಾ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. 'ಶತ್ರುವಿನ ಶತ್ರು ಮಿತ್ರ' ಎನ್ನುವಂತೆ ಈಗ ಈ ಇಬ್ಬರು ಹಳೆಯ ವೈರಿಗಳು ಒಂದುಗೂಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.