ಸುಪ್ರೀಂ​ ನ್ಯಾಯಮೂರ್ತಿಗಳ ನೇಮಕ: ಮಾಧ್ಯಮಗಳ ಊಹಾತ್ಮಕ ವರದಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಜೆಐ

ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಸಭೆಯ ಶಿಫಾರಸು ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಊಹಾತ್ಮಕ ವರದಿಗಳಿಗೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ (CJI) ಎನ್‌​. ವಿ. ರಮಣ ಕಳವಳ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ​ ನ್ಯಾಯಮೂರ್ತಿಗಳ ನೇಮಕ: ಮಾಧ್ಯಮಗಳ ಊಹಾತ್ಮಕ ವರದಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಜೆಐ
Linkup
ಹೊಸದಿಲ್ಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಸಭೆಯ ಶಿಫಾರಸು ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಊಹಾತ್ಮಕ ವರದಿಗಳಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಕಳವಳ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಕೆಲವು ಹೆಸರುಗಳನ್ನೂ ಉಲ್ಲೇಖಿಸಿ ವರದಿ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ ಎಂದು ಮುಖ್ಯ ನ್ಯಾಯಮೂರ್ತಿಗಳು ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಕ್ರಿಯೆಗಳು ಇನ್ನೂ ನಡೆಯುತ್ತಿವೆ. ಇದುವರೆಗೂ ಯಾರ ಹೆಸರನ್ನೂ ಅಂತಿಮಗೊಳಿಸಲಾಗಿಲ್ಲ. ಅಂಥದ್ದರಲ್ಲಿ ಮಾಧ್ಯಮಗಳು ತಮ್ಮ ಊಹೆಗೆ ತಕ್ಕಂತೆ, ಹೆಸರುಗಳನ್ನು ಉಲ್ಲೇಖಿಸಿ ವರದಿ ಮಾಡುವುದು ತುಂಬ ಹಾನಿಕಾರ. ಇದರಿಂದ ವರದಿಯಲ್ಲಿ ಹೆಸರಿಸಲಾದ ನ್ಯಾಯಮೂರ್ತಿಗಳ ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿಗಳ ನೇಮಕಾತಿ ತುಂಬ ಮಹತ್ವವಾದ ಕೆಲಸ. ಈ ಪ್ರಕ್ರಿಯೆಯ ಸೂಕ್ಷ್ಮತೆಯನ್ನು ನನ್ನ ಮಾಧ್ಯಮ ಸ್ನೇಹಿತರು ಅರ್ಥ ಮಾಡಿಕೊಳ್ಳಬೇಕು. ನೇಮಕಾತಿಗೂ ಮುನ್ನವೇ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದು ಸರಿಯಲ್ಲ. ಮಾಧ್ಯಮದವರ ಬೇಜವಾಬ್ದಾರಿ ವರದಿಗಳಿಂದ ಹೀಗೆ ಉಲ್ಲೇಖವಾದ ಹೆಸರುಗಳ ನ್ಯಾಯಾಧೀಶರ ವೃತ್ತಿ ಬದುಕು ಹಾಳಾಗಬಹುದು. ನನಗಂತೂ ತುಂಬ ನೋವಾಗಿದೆ ಎಂದು ಎನ್.ವಿ. ರಮಣ ಹೇಳಿದ್ದಾರೆ. ಹಿರಿಯ ಪತ್ರಕರ್ತರಿಗೆ ಧನ್ಯವಾದ ಮಾಧ್ಯಮ ವರದಿ ಕುರಿತು ಬೇಸರ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು ಕೆಲವು ಹಿರಿಯ ಪತ್ರಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಲವು ಹಿರಿಯ ಪತ್ರಕರ್ತರು ಹೀಗೆ ಊಹಾತ್ಮಕ ವರದಿಯನ್ನು ಪ್ರಕಟಿಸಲಿಲ್ಲ. ಅಂಥವರಿಗೆ ಖಂಡಿತವಾಗಿಯೂ ಕೃತಜ್ಞತೆ ಸಲ್ಲಿಸುತ್ತೇನೆ. ನಿಜ ಹೇಳಬೇಕೆಂದರೆ ಅಂಥ ಪತ್ರಕರ್ತರು ನಮ್ಮ ಪ್ರಜಾಪ್ರಭುತ್ವದ ಶಕ್ತಿಗಳು. ನಾನಂತೂ ನಿಜಕ್ಕೂ ತುಂಬ ಬೇಜಾರಾಗಿದ್ದೇನೆ ಎಂದು ಎನ್.ವಿ.ರಮಣ ಹೇಳಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಬಂಧ 9 ನ್ಯಾಯಾಧೀಶರ ಹೆಸರುಗಳನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದೆ ಎಂದು ಇಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕೆಲವು ಮಾಧ್ಯಮಗಳು ಫೋಟೋ-ಹೆಸರು ಕೂಡ ಪ್ರಕಟಿಸಿದ್ದವು. ಆದರೆ ಈಗ ಎನ್.ವಿ.ರಮಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ನಿವೃತ್ತಿ ಹೊಂದಿದ ನ್ಯಾಯಮೂರ್ತಿ ನವೀನ್ ಸಿನ್ಹಾ ಅವರನ್ನೊಳಗೊಂಡ ಔಪಚಾರಿಕ ಪೀಠದಲ್ಲಿ ಕುಳಿತಿದ್ದಾಗ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.