ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ ಹೆಚ್ಚಿಸಲು, ಜಿಎಸ್‌ಟಿ ಇಳಿಕೆ ಮಾಡಲು ಸಂಸದೀಯ ಸಮಿತಿ ಸಲಹೆ

ಎಲೆಕ್ಟ್ರಿಕ್‌ ದ್ವಿ ಚಕ್ರ ವಾಹನ ಖರೀದಿಸುವವರಿಗೆ ನೀಡುತ್ತಿರುವಂತೆ ಖಾಸಗಿ ಎಲೆಕ್ಟ್ರಿಕ್‌ 3 ಮತ್ತು 4 ಚಕ್ರದ ವಾಹನಗಳನ್ನು ಖರೀದಿಸಲು ಬಯಸುವವರಿಗೂ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ.

ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ ಹೆಚ್ಚಿಸಲು, ಜಿಎಸ್‌ಟಿ ಇಳಿಕೆ ಮಾಡಲು ಸಂಸದೀಯ ಸಮಿತಿ ಸಲಹೆ
Linkup
ಹೊಸದಿಲ್ಲಿ: ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವವರಿಗೆ ನೀಡುತ್ತಿರುವ ಸೌಲಭ್ಯವನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಸಂಸದೀಯ ಸಮಿತಿಯೊಂದು ಸಲಹೆ ನೀಡಿದೆ. ಖಾಸಗಿ ಎಲೆಕ್ಟ್ರಿಕ್‌ 3 ಮತ್ತು 4 ಚಕ್ರದ ವಾಹನಗಳನ್ನು ಖರೀದಿಸಲು ಬಯಸುವವರಿಗೆ ಕೂಡ, ಫೇಮ್‌ - 2 ಅಡಿಯಲ್ಲಿ ಎಲೆಕ್ಟ್ರಿಕ್‌ ದ್ವಿ ಚಕ್ರ ವಾಹನ ಖರೀದಿಸುವವರಿಗೆ ನೀಡುತ್ತಿರುವಂತೆ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಎಲೆಕ್ಟ್ರಿಕ್‌ ವಾನಗಳ ಬಿಡಿಭಾಗಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಬೇಕು. ಈಗಲೂ ಇವುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅದರ ಬದಲು ಸ್ಥಳೀಯವಾಗಿಯೇ ತಯಾರಿಸಿದರೆ ಇಲ್ಲಿನವರಿಗೆ ಉದ್ಯೋಗವೂ ಸಿಗುವಂತಾಗುತ್ತದೆ ಎಂದು ಶಿಫಾರಸು ಮಾಡಿದೆ. ಹೈಬ್ರಿಡ್‌ ಎಲೆಕ್ಟ್ರಿಕ್‌ ವಾಹನಗಳಿಗೆ (ಎಚ್‌ಇವಿ) ದರವನ್ನು ತಗ್ಗಿಸಬೇಕು. ಸದ್ಯಕ್ಕೆ ಇವಿ ಕಾರುಗಳಿಗೆ ಶೇ. 5 ಜಿಎಸ್‌ಟಿ ಇದ್ದರೆ, ಎಚ್‌ಇವಿಗಳಿಗೆ ಶೇ. 43 ತೆರಿಗೆ ಇದೆ (ಶೇ. 28 ಜಿಎಸ್‌ಟಿ ಮತ್ತು ಶೇ. 15 ಸೆಸ್‌). ಎಲೆಕ್ಟ್ರಿಕ್‌ ವಾಹನಗಳು ಇಂಧನ ಬಳಕೆಯನ್ನು ಶೇ. 75 ತಗ್ಗಿಸುತ್ತದೆ. ಎಚ್‌ಇವಿಗಳು ಶೇ. 35ರಷ್ಟು ತಗ್ಗಿಸುತ್ತವೆ ಎಂದು ಸಮಿತಿ ತಿಳಿಸಿದೆ. ಬ್ಯಾಟರಿ ಉತ್ಪಾದನೆಗೆ ಸಜ್ಜು ಎಲೆಕ್ಟ್ರಿಕ್‌ ಪವರ್‌ ಅನ್ನು ಸ್ಟೋರೇಜ್‌ ಮಾಡಲು ಬಳಸುವ ಅತ್ಯಾಧುನಿಕ ಸೆಲ್‌ ಬ್ಯಾಟರಿಗಳನ್ನು ಸರಕಾರದ ಪಿಎಲ್‌ಐ ಯೋಜನೆಯ ನೆರವಿನೊಂದಿಗೆ ಉತ್ಪಾದಿಸಲು ಸುಮಾರು 20 ಕಂಪನಿಗಳು ಉತ್ಸುಕವಾಗಿವೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ., ಓಲಾ ಎಲೆಕ್ಟ್ರಿಕ್‌, ಟಾಟಾ ಕೆಮಿಕಲ್ಸ್‌ ಸೇರಿದಂತೆ 17 ಕಂಪನಿಗಳು ಉತ್ಸುಕವಾಗಿವೆ. ಪಿಎಲ್‌ಐ ಎಸಿಸಿ ಯೋಜನೆಗೆ ನಿರೀಕ್ಷೆಗಿಂತಲೂ ಉತ್ತಮ ಪ್ರತಿಸ್ಪಂದನೆ ಲಭಿಸಿದೆ ಎಂದು ಭಾರಿ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಅರುಣ್‌ ಗೋಯೆಲ್‌ ತಿಳಿಸಿದ್ದಾರೆ. ಸಚಿವಾಲಯವು ಕಳೆದ ಅಕ್ಟೋಬರ್‌ನಲ್ಲಿ ಕಂಪನಿಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಿದಾಗ (ಆರ್‌ಇಎಫ್‌) 100ಕ್ಕೂ ಹೆಚ್ಚು ಪ್ರಸ್ತಾಪಗಳು ಬಂದಿತ್ತು. 20 ಕಂಪನಿಗಳು ಬಿಡ್ಡಿಂಗ್‌ ಪೂರ್ವ ಸಭೆಯಲ್ಲಿ ಭಾಗವಹಿಸಿದ್ದವು.