ಟೆಲಿಕಾಂ ಕಂಪನಿಗಳಿಗೆ 5ಜಿ ಸ್ಪೆಕ್ಟ್ರಮ್‌ ಹಂಚಿಕೆ, ಶೀಘ್ರದಲ್ಲಿ ಪ್ರಾಯೋಗಿಕ ಜಾರಿ

ಪ್ರಾಯೋಗಿಕವಾಗಿ ದೇಶದಲ್ಲಿ 5ಜಿ ಸೇವೆಯನ್ನು ಜನತೆಗೆ ಒದಗಿಸುವ ನಿಟ್ಟಿನಲ್ಲಿ, ಟೆಲಿಕಾಂ ಇಲಾಖೆ 5ಜಿ ಸ್ಪೆಕ್ಟ್ರಮ್‌ಗಳನ್ನು ನಾನಾ ಟೆಲಿಕಾಂ ಕಂಪನಿಗಳಿಗೆ ಮಂಜೂರು ಮಾಡಿದೆ. ಶೀಘ್ರದಲ್ಲೇ ಕಂಪನಿಗಳು ಟ್ರಯಲ್‌ ರನ್‌ ಆರಂಭಿಸಲಿವೆ.

ಟೆಲಿಕಾಂ ಕಂಪನಿಗಳಿಗೆ 5ಜಿ ಸ್ಪೆಕ್ಟ್ರಮ್‌ ಹಂಚಿಕೆ, ಶೀಘ್ರದಲ್ಲಿ ಪ್ರಾಯೋಗಿಕ ಜಾರಿ
Linkup
ಹೊಸದಿಲ್ಲಿ: ದೇಶದಲ್ಲಿ ಪ್ರಾಯೋಗಿಕವಾಗಿ ಸೇವೆಯನ್ನು ಜನತೆಗೆ ಒದಗಿಸುವ ನಿಟ್ಟಿನಲ್ಲಿ, ಇಲಾಖೆಯು ಸ್ಪೆಕ್ಟ್ರಮ್‌ಗಳನ್ನು ನಾನಾ ಟೆಲಿಕಾಂ ಕಂಪನಿಗಳಿಗೆ ಮಂಜೂರು ಮಾಡಿದೆ. 5ಜಿ ಸೇವೆಯ ಪ್ರಾಯೋಗಿಕ ಜಾರಿಯ ಸಲುವಾಗಿ, ರಿಲಯನ್ಸ್‌ ಜಿಯೊ, ಏರ್‌ಟೆಲ್‌, ವೊಡಾಫೋನ್‌ ಐಡಿಯಾ, ಎಂಟಿಎನ್‌ಎಲ್‌ಗೆ ಅನುಮತಿ ನೀಡಲಾಗಿತ್ತು. ಟೆಲಿಕಾಂ ಕಂಪನಿಗಳಿಗೆ 700 ಮೆಗಾ ಹರ್ಟ್ಸ್ ಬ್ಯಾಂಡ್‌, 3.3-3.6 ಗಿಗಾಹರ್ಟ್ಸ್ ಬ್ಯಾಂಡ್‌ ಮತ್ತು 24.25-28.5 ಗಿಗಾಹರ್ಟ್ಸ್ ಬ್ಯಾಂಡ್‌ನ ತರಂಗಾಂತರಗಳನ್ನು ಮಂಜೂರು ಮಾಡಲಾಗಿದೆ. ದಿಲ್ಲಿ, ಬೆಂಗಳೂರು, ಮುಂಬಯಿ, ಕೋಲ್ಕೊತಾ, ಗುರ್‌ಗಾಂವ್‌, ಹೈದರಾಬಾದ್‌ ಸೇರಿ 13 ಸ್ಥಳಗಳಲ್ಲಿ 5ಜಿ ಪ್ರಾಯೋಗಿಕ ಸೇವೆ ಅನುಷ್ಠಾನಕ್ಕೆ ಬರಲಿದೆ. ಈಗಾಗಲೇ 5ಜಿಗೆ ಸಿದ್ಧಪಡಿಸಿರುವ ನೆಟ್‌ವರ್ಕ್ ಹೊಂದಿರುವ ಜಿಯೊ ಮತ್ತು ಏರ್‌ಟೆಲ್‌ಗೆ ಈ ತರಂಗಾಂತರ ನಿರ್ಣಾಯಕವಾಗಿದೆ. ಚೀನಾ ಮೂಲದ ಝಡ್‌ಟಿಇ, ಹುವೈ ಮೊದಲಾದ ಕಂಪನಿಗಳ ಸಲಕರಣೆಗಳನ್ನು ಬಳಸದಿರುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿತ್ತು. ಟೆಲಿಮೆಡಿಸಿನ್‌, ಟೆಲಿ-ಎಜ್ಯುಕೇಶನ್‌, ಡ್ರೋನ್‌ ಆಧಾರಿತ ಕೃಷಿ ಮೇಲುಸ್ತುವಾರಿ ಇತ್ಯಾದಿಗೆ 5ಜಿ ತಂತ್ರಜ್ಞಾನದ ಪ್ರಯೋಗ ನಡೆಯಲಿದೆ. ಟೆಲಿಕಾಂ ಕಂಪನಿಗಳು ತಮ್ಮ ನೆಟ್‌ವರ್ಕ್‌ನಲ್ಲಿ ನಾನಾ 5ಜಿ ಸಾಧನಗಳನ್ನು ಪರೀಕ್ಷಿಸಲು ಅವಕಾಶ ಸಿಗಲಿದೆ. ಈ ಪ್ರಾಯೋಗಿಕ ಅವಧಿ 6 ತಿಂಗಳು ಇರಲಿದೆ.

4ಜಿಗೆ ಹೋಲಿಸಿದರೆ 5ಜಿಯ ಅಡಿಯಲ್ಲಿ ಡೌನ್‌ಲೋಡ್‌ ಸ್ಪೀಡ್‌ 10 ಪಟ್ಟು ವೃದ್ಧಿಸಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ. ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಪಟ್ಟಣಗಳಿಗೂ 5ಜಿ ಪ್ರಾಯೋಗಿಕ ಸೇವೆ ವಿಸ್ತರಿಸಲು ಸೂಚಿಸಲಾಗಿದೆ. ಇಲಾಖೆಯ ವೈರ್‌ಲೆಸ್‌ ಪ್ಲಾನಿಂಗ್‌ ಆ್ಯಂಡ್‌ ಕೋ ಆರ್ಡಿನೇಶನ್‌ (ಡಬ್ಲ್ಯುಪಿಸಿ) ವಿಭಾಗವು 5ಜಿ ತರಂಗಾಂತರಗಳನ್ನು ಮಂಜೂರು ಮಾಡಿದೆ. 5ಜಿ ತಂತ್ರಜ್ಞಾನದ ಪರಿಣಾಮ ಡೌನ್‌ಲೋಡ್‌ ಸ್ಪೀಡ್‌ ಹೆಚ್ಚುವುದರ ಜತೆಗೆ ಹಲವಾರು ಪ್ರಯೋಜನಗಳು ದೊರೆಯಲಿವೆ. ಹಲವಾರು ಹೊಸ ಅಪ್ಲಿಕೇಶನ್‌ಗಳ ಬಳಕೆ ಸಾಧ್ಯವಾಗಲಿದೆ. ತಂತ್ರಜ್ಞಾನ ಆಧರಿತ ಉದ್ದಿಮೆಗೆ ಅನುಕೂಲವಾಗಲಿದೆ. ಸ್ಮಾರ್ಟ್‌ ಸಿಟಿ, ಸ್ಮಾರ್ಟ್‌ ಹೋಮ್‌, ಇಂಡಸ್ಟ್ರಿಯಲ್‌ ಆಟೊಮೇಶನ್‌ ವಲಯಕ್ಕೆ ಅನುಕೂಲವಾಗಲಿದೆ.