ದೇಶದಲ್ಲಿ 2,000 ರೂ. ಮುಖಬೆಲೆಯ ನೋಟು ಚಲಾವಣೆ ಶೇ. 1.75ಕ್ಕೆ ಇಳಿಕೆ

2018ರ ಮಾರ್ಚ್ ವೇಳೆಗೆ ದೇಶದಲ್ಲಿ ಚಲಾವಣೆಯಲ್ಲಿದ್ದ 2,000 ರೂ. ನೋಟುಗಳ ಪ್ರಮಾಣ ಶೇ. 3.27 ಇತ್ತು. ಆಗ 335.3 ಕೋಟಿ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿದ್ದವು, ಅದು ಈಗ 223.3 ಕೋಟಿಗೆ ಇಳಿಕೆಯಾಗಿದೆ.

ದೇಶದಲ್ಲಿ 2,000 ರೂ. ಮುಖಬೆಲೆಯ ನೋಟು ಚಲಾವಣೆ ಶೇ. 1.75ಕ್ಕೆ ಇಳಿಕೆ
Linkup
ಹೊಸದಿಲ್ಲಿ: ಈಗ ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ 2 ಸಾವಿರ ರೂಪಾಯಿಗಳ ನೋಟುಗಳ ಪ್ರಮಾಣ ಕಳೆದ ನವೆಂಬರ್‌ ವೇಳೆಗೆ ಶೇ. 1.75ಕ್ಕೆ ಕುಸಿದಿದೆ. ಈಗ ದೇಶದಲ್ಲಿ ಒಟ್ಟು 223.3 ಕೋಟಿ 2 ಸಾವಿರದ ನೋಟುಗಳು ಚಲಾವಣೆಯಲ್ಲಿ ಇವೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್‌ ಚೌಧುರಿ ರಾಜ್ಯಸಭೆಗೆ ತಿಳಿಸಿದ್ದಾರೆ. 2018ರ ಮಾರ್ಚ್ ವೇಳೆಗೆ ದೇಶದಲ್ಲಿ ಚಲಾವಣೆಯಲ್ಲಿದ್ದ 2 ಸಾವಿರ ರೂ.ಗಳ ನೋಟುಗಳ ಪ್ರಮಾಣ ಶೇ. 3.27 ಇತ್ತು. ಆಗ 335.3 ಕೋಟಿ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿದ್ದವು ಎಂದು ಅವರು ತಿಳಿಸಿದರು. ನೋಟುಗಳನ್ನು ಎಷ್ಟು ಮುದ್ರಿಸಬೇಕು ಎಂಬ ನಿರ್ಧಾರವು ಸರಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ () ನಡುವಣ ಸಮಾಲೋಚನೆಯ ನಂತರ ನಿರ್ಧಾರವಾಗುತ್ತದೆ. ಸದ್ಯ ದೇಶದಲ್ಲಿ ಚಲಾವಣೆಯಲ್ಲಿರುವ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮೌಲ್ಯ ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದ ಶೇ. 15.11ರಷ್ಟಾಗುತ್ತದೆ. ಇದು 2018ರ ಮಾರ್ಚ್‌ 31ರ ಅಂತ್ಯಕ್ಕೆ ಶೇ. 37.26ರಷ್ಟಿತ್ತು. ನೋಟು ಅಮಾನ್ಯತೆಯ ನಂತರ ಬಿಡುಗಡೆಯಾಗಿದ್ದ 2,000 ರೂ. ಮುಖಬೆಲೆಯ ನೋಟುಗಳನ್ನು 2018 - 19ರ ನಂತರ ಹೊಸತಾಗಿ ಮುದ್ರಿಸಿರಲಿಲ್ಲ. 2 ಸಾವಿರ ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ್ದ ಸರಕಾರ, 500 ರೂ. ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಮಾತ್ರ ಒತ್ತು ನೀಡಿತ್ತು. ಒಂದೆಡೆ 2,000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸರಕಾರ ಸ್ಥಗಿತಗೊಳಿಸಿದೆ, 'ಮಾತ್ರವಲ್ಲದೆ ನೋಟುಗಳು ವಿರೂಪವಾಗುವುದು, ಹಾಳಾಗುವುದರಿಂದಲೂ ಚಲಾವಣೆಯಿಂದ ಹೊರಗುಳಿಯುತ್ತವೆ' ಎಂದು ಸಚಿವರು ವಿವರಿಸಿದರು. 2016ರ ನವೆಂಬರ್‌ 8ರಂದು ನೋಟು ಅಮಾನ್ಯತೆ ಘೋಷಿಸಿದಾಗ 500 ರೂ. ಹಾಗೂ 1000 ರೂ. ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ನಂತರ ಹೊಸತಾಗಿ 2,000 ರೂ. ಹಾಗೂ 500 ರೂ.ಗಳ ನೋಟುಗಳನ್ನು ಬಿಡುಗಡೆಗೊಳಿಸಲಾಗಿತ್ತು. ಮುಂದೆ 200 ರೂ. ಮುಖಬೆಲೆಯ ನೋಟುಗಳನ್ನೂ ಸರಕಾರ ಬಿಡುಗಡೆಗೊಳಿಸಿತ್ತು.