ಐಟಿಆರ್‌ ಇ-ಫೈಲಿಂಗ್‌ ಗಡುವು ವಿಸ್ತರಣೆ: ಮತ್ತೊಮ್ಮೆ ಮೂಂದೂಡುವ ನಿರೀಕ್ಷೆ!

ಆದಾಯ ತೆರಿಗೆ ಇಲಾಖೆಯು ಕೆಲವು ಐ-ಟಿ ಫಾಮ್‌ರ್‍ಗಳ ಮೂಲಕ ಎಲೆಕ್ಟ್ರಾನಿಕ್‌ ಫೈಲಿಂಗ್‌ಗೆ (ಇ-ಫೈಲಿಂಗ್‌) ಗಡುವನ್ನು ವಿಸ್ತರಿಸಿದೆ. ಸಿಬಿಡಿಟಿಯು ಈ ಬಗ್ಗೆ ಅಧಿಸೂಚನೆಯನ್ನು ಭಾನುವಾರ ಪ್ರಕಟಿಸಿದೆ.

ಐಟಿಆರ್‌ ಇ-ಫೈಲಿಂಗ್‌ ಗಡುವು ವಿಸ್ತರಣೆ: ಮತ್ತೊಮ್ಮೆ ಮೂಂದೂಡುವ ನಿರೀಕ್ಷೆ!
Linkup
ಹೊಸದಿಲ್ಲಿ: ಇಲಾಖೆಯು ಕೆಲವು ಐ-ಟಿ ಫಾರ್ಮ್‌ಗಳ ಮೂಲಕ ಎಲೆಕ್ಟ್ರಾನಿಕ್‌ ಫೈಲಿಂಗ್‌ಗೆ (ಇ-ಫೈಲಿಂಗ್‌) ಗಡುವನ್ನು ವಿಸ್ತರಿಸಿದೆ. ಸಿಬಿಡಿಟಿಯು ಈ ಬಗ್ಗೆ ಅಧಿಸೂಚನೆಯನ್ನು ಭಾನುವಾರ ಪ್ರಕಟಿಸಿದೆ. ಇದು ಬಹುತೇಕ ಬಿಸಿನೆಸ್‌ ಖಾತೆಗಳಿಗೆ ಅನ್ವಯವಾಗುವ ನಾನಾ ಫಾರ್ಮ್‌ಗಳಾಗಿವೆ ಎಂದು ಚಾರ್ಟಡ್‌ ಅಕೌಂಟೆಂಟ್‌ಗಳು ತಿಳಿಸಿದ್ದಾರೆ. ಫಾರ್ಮ್‌ ನಂ.10ಎ, 10 ಎಬಿ, ಫಾರ್ಮ್‌ ನಂ. 15ಸಿಸಿಗಳ ಮೂಲಕ ಇ-ಫೈಲಿಂಗ್‌ಗೆ ಗಡುವನ್ನು ವಿಸ್ತರಿಸಲಾಗಿದೆ. ಭಿನ್ನ ಫಾರ್ಮ್‌ಗಳಿಗೆ ಗಡುವು ಕೂಡ ಭಿನ್ನವಾಗಿದ್ದು, ತೆರಿಗೆದಾರರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ವೈಯಕ್ತಿಕ ಆದಾಯ ತೆರಿಗೆದಾರರಿಗೆ 2020-21ರ ಸಾಲಿನ ಆದಾಯ ತೆರಿಗೆ ರಿಟರ್ನ್‌ (ಐಟಿಆರ್‌) ಸಲ್ಲಿಕೆಗೆ ಸೆಪ್ಟೆಂಬರ್‌ 30 ಆಗಿದೆ. ಈ ಹಿಂದೆ ಜುಲೈ 31ಕ್ಕಿದ್ದ ಗಡುವನ್ನು ಸೆ.30ಕ್ಕೆ ಮುಂದೂಡಲಾಗಿತ್ತು. ಆದರೆ, ಆದಾಯ ತೆರಿಗೆ ಇಲಾಖೆಯ ವೆಬ್‌ಪೋರ್ಟಲ್‌ನಲ್ಲಿ ತಾಂತ್ರಿಕ ಅಡಚಣೆಗಳು ಇನ್ನೂ ಸಂಪೂರ್ಣವಾಗಿ ಬಗೆಹರಿಯದಿರುವುದರಿಂದ ಮತ್ತೊಮ್ಮೆ ಮೂಂದೂಡಿಕೆಯಾಗುವ ನಿರೀಕ್ಷೆಯೂ ಇದೆ ಎನ್ನುತ್ತಾರೆ ತೆರಿಗೆ ತಜ್ಞರಾದ ವಿಜಯ್‌ ಸಾಗರ್‌ ಶೆಣೈ. ಆದಾಯ ತೆರಿಗೆ ಪಾವತಿದಾರರಲ್ಲಿ ಸಾಮಾನ್ಯವಾಗಿ ಮೂಡುವ ಪ್ರಮುಖ 5 ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಫಾರ್ಮ್‌- 16 ಎಂದರೇನು? ಇದು ಸಂಬಳ ಪಡೆಯುವ ನೌಕರರಿಗೆ ಅನ್ವಯವಾಗುತ್ತದೆ. ಅಂದರೆ, ನಿಮ್ಮ ಸಂಬಳವು ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದರೆ, ಪ್ರತಿ ತಿಂಗಳೂ ಇಂತಿಷ್ಟು ತೆರಿಗೆ ಹಣವನ್ನು ಕಡಿತಗೊಳಿಸಲಾಗುತ್ತದೆ (ಟಿಡಿಎಸ್‌). ವರ್ಷದ ಕೊನೆಯಲ್ಲಿ ನೀವು ಬೇರೆ ಯಾವುದಾದರೂ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದ್ದರೆ ಅದನ್ನು ಈ ಫಾರ್ಮ್‌ ತಿಳಿಸುವ ಮೂಲಕ ತೆರಿಗೆ ವಿನಾಯಿತಿ ಪಡೆಯಬುದಾಗಿದೆ. ಐಟಿಆರ್‌ ಮತ್ತು ಫಾರ್ಮ್‌ ನಂ.16 ನಡುವಿನ ವ್ಯತ್ಯಾಸವೇನು? ಇನ್ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ (ಐಟಿಆರ್‌) ನಮೂನೆಯ ಮೂಲಕ ತೆರಿದಾರ ವ್ಯಕ್ತಿ ತನ್ನ ಆದಾಯದ ಮೂಲಗಳನ್ನೆಲ್ಲ ಸರಕಾರಕ್ಕೆ ತಿಳಿಸುವ ನಮೂನೆ(ಫಾರ್ಮ್‌) ಆಗಿದೆ. ಫಾರ್ಮ್ಸ್‌ -16 ಮೂಲಕ ಒಬ್ಬ ಉದ್ಯೋಗಿಯು ತನ್ನ ಉದ್ಯೋಗದಾತನಿಗೆ ತಾನು ಎಲ್ಲೆಲ್ಲಿ ಉಳಿತಾಯ ಮಾಡಿದ್ದೇನೆ ಎಂಬುದನ್ನು ತಿಳಿಸುವ ನಮೂನೆಯಾಗಿದೆ. ಐಟಿಆರ್‌ ನಮೂನೆಯು ಒಬ್ಬ ವ್ಯಾಪಾರಿ ಅಥವಾ ಇತರೆ ಮೂಲಗಳಿಂದ ಆದಾಯ ಪಡೆಯುವ ವ್ಯಕ್ತಿ ಮತ್ತು ಸರಕಾರದ ನಡುವೆ ಸಂವಹನ ಮಾಡುತ್ತದೆ. ಫಾರ್ಮ್‌-16 ಉದ್ಯೋಗಿ ಮತ್ತು ಉದ್ಯೋಗದಾತನ ನಡುವೆ ಸಂವಹನ ಕಲ್ಪಿಸುತ್ತದೆ. ಫಾರ್ಮ್‌- 16ನಲ್ಲಿ ತೋರಿಸಿರುವುದಕ್ಕಿಂತಲೂ ಕಡಿಮೆ ಮೊತ್ತಕ್ಕೆ ತೆರಿಗೆ ಸಲ್ಲಿಸಬಹುದೇ? ಹೌದು, ಒಂದು ವೇಳೆ ನೀವು ಯಾವುದಾದರೂ ತೆರಿಗೆ ಉಳಿತಾಯ ಹೂಡಿಕೆ ಮಾಡಿದ್ದು, ಅದನ್ನು ಫಾರ್ಮ್‌-16ರಲ್ಲಿ ಪ್ರಸ್ತಾಪಿಸಿಲ್ಲದಿದ್ದರೆ, ನಿಮಗೆ ನೈಜ ಮೊತ್ತಕ್ಕಿಂತಲೂ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಮೊದಲು ಯಾವೆಲ್ಲ ಹೂಡಿಕೆಗಳು ತೆರಿಗೆ ಉಳಿತಾಯಕ್ಕೆ ಸಹಾಯಕ ಎಂಬುದನ್ನು ಗಮನಿಸಿ. ಅಂತ ಹೂಡಿಕೆಗಳನ್ನು ಮಾಡಿದ್ದರೆ, ಆ ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಉದ್ಯೋಗದಾತರಿಗೆ ಪಾನ್‌ ಕಾರ್ಡ್‌ ನೀಡದಿದ್ದರೆ ಏನಾಗಲಿದೆ? ನಿಮ್ಮ ಸಂಬಳದಲ್ಲಿ ಪ್ರತಿ ತಿಂಗಳೂ ಕಡಿತ ಮಾಡುವ ತೆರಿಗೆ ಹಣಕ್ಕೆ ನಿಮ್ಮ ಉದ್ಯೋಗದಾತ ಜವಾಬ್ದಾರನಾಗಿರುತ್ತಾನೆ. ಹೀಗಾಗಿ ನೀವು ನಿಮ್ಮ ಉದ್ಯೋಗದಾತರಿಗೆ ಪಾನ್‌ ನಂಬರ್‌ ನೀಡದಿದ್ದರೆ, ಅಥವಾ ತಪ್ಪಾದ ಪಾನ್‌ ನಂಬರ್‌ ನೀಡಿದ್ದರೆ ಹೆಚ್ಚುವರಿ ತೆರಿಗೆ (ಶೇ.20ರವರೆಗೆ) ಬೀಳುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮದೇ ಪಾನ್‌ ನಂಬರ್ ನೀಡುವುದು ಸೂಕ್ತ. ಸಂಬಳದ ಹೊರತಾಗಿ ಬೇರೆ ಆದಾಯವಿದ್ದರೆ ಏನು ಮಾಡಬೇಕು? ನಿಮಗೆ ಸಂಬಳದ ಹೊರತು ಬೇರೆ ಆದಾಯ ಬರುತ್ತಿದ್ದರೆ, ಆ ಕುರಿತು ನಿಮ್ಮ ಉದ್ಯೋಗದಾತರಿಗೆ ಮಾಹಿತಿ ನೀಡಿ. ಅವರು ನಿಮ್ಮ ಆದಾಯ ತೆರಿಗೆಯಲ್ಲಿ ಹೊಂದಾಣಿಗೆ ಮಾಡುತ್ತಾರೆ. ಒಂದು ವೇಳೆ ಉದ್ಯೋಗದಾತರಿಗೆ ಮಾಹಿತಿ ನೀಡದಿದ್ದಲ್ಲಿ, ನೀವೇ ಸರಕಾರಕ್ಕೆ ಮುಂಗಡ ತೆರಿಗೆ ಪಾವತಿಸಬಹುದು.