Bitcoin Scam: ಬಿಟ್‌ ಕಾಯಿನ್ ಹಗರಣದ ಸುದ್ದಿಯೆಲ್ಲವೂ ಶುದ್ಧ ಸುಳ್ಳು, ಅಸಂಬದ್ಧ: ಶ್ರೀಕಿ

ಬಿಟ್‌ ಕಾಯಿನ್ ಹಗರಣದ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಕುರಿತಾದ ವರದಿಗಳೆಲ್ಲವೂ ಶುದ್ಧ ಸುಳ್ಳು ಮತ್ತು ಅಸಂಬದ್ಧ ಎಂದು ಹ್ಯಾಕರ್ ಶ್ರೀಕಿ ಹೇಳಿದ್ದಾನೆ. ಭಾನುವಾರ ಹೋಟೆಲ್ ಒಂದರಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಆತ ಈ ಹೇಳಿಕೆ ನೀಡಿದ್ದಾನೆ.

Bitcoin Scam: ಬಿಟ್‌ ಕಾಯಿನ್ ಹಗರಣದ ಸುದ್ದಿಯೆಲ್ಲವೂ ಶುದ್ಧ ಸುಳ್ಳು, ಅಸಂಬದ್ಧ: ಶ್ರೀಕಿ
Linkup
ಬೆಂಗಳೂರು: ವೆಬ್‌ಸೈಟ್ ಹಾಗೂ ಬಿಟ್‌ ಕಾಯಿನ್ ಮಾಡಿರುವ ಆರೋಪ ಎದುರಿಸುತ್ತಿರುವ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ತನ್ನ ವಿರುದ್ಧ ಸದ್ದು ಮಾಡುತ್ತಿರುವ ಬಿಟ್‌ಕಾಯಿನ್ ಹಗರಣದ ಆರೋಪಗಳು ಸುಳ್ಳು ಹಾಗೂ ಅಸಂಬದ್ಧ ಎಂದು ಹೇಳಿದ್ದಾನೆ. ಸ್ನೇಹಿತನೊಂದಿಗೆ ಸ್ಟಾರ್ ಹೋಟೆಲ್ ಒಂದರಲ್ಲಿ ರಂಪಾಟ ನಡೆಸಿದ ಬಳಿಕ ಬಂಧಿತನಾಗಿದ್ದ , ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆತ, 'ಬಿಟ್‌ ಕಾಯಿನ್ ಪ್ರಕರಣದಲ್ಲಿ ಏನೂ ಇಲ್ಲ. ಅದೆಲ್ಲವೂ ಅಸಂಬದ್ಧ ಮತ್ತು ಸುಳ್ಳು. ಈ ಪ್ರಕರಣ ನ್ಯಾಯಾಲಯದಲ್ಲಿದೆ' ಎಂದಿದ್ದಾನೆ. 'ಇದೆಲ್ಲವೂ ಸುಳ್ಳು ಸುದ್ದಿ. ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲ' ಎಂದು ತನ್ನಿಂದ 9 ಕೋಟಿ ರೂ ಮೌಲ್ಯದ ಬಿಟ್‌ ಕಾಯಿನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂಬ ವರದಿಗಳ ಬಗ್ಗೆ ಹೇಳಿದ್ದಾನೆ. ಬಿಟ್‌ ಕಾಯಿನ್ ಹಗರಣ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದು ಶ್ರೀಕಿ ಹೇಳಿದ್ದಾನೆ. ಬಿಟ್‌ ಕಾಯಿನ್ ಹಗರಣದಲ್ಲಿ ಕೆಲವು ಪ್ರಮುಖ ರಾಜಕೀಯ ಮುಖಂಡರ ಮಕ್ಕಳು ಭಾಗಿಯಾಗಿದ್ದಾರೆ. ಅವರು ಶ್ರೀಕಿಯ ಹ್ಯಾಕಿಂಗ್ ಸಾಮರ್ಥ್ಯವನ್ನು ಬಳಸಿಕೊಂಡು ಬಿಟ್‌ ಕಾಯಿನ್ ಅವ್ಯವಹಾರ ನಡೆಸಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ನಾಯಕರು ಬಿಟ್‌ಕಾಯಿನ್ ಹಗರಣದಲ್ಲಿ ಏಕೆ ನಿನ್ನ ಹೆಸರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, 'ದೊಡ್ಡ ಮನುಷ್ಯರು ದೊಡ್ಡ ಹೆಸರುಗಳನ್ನೇ ಹೇಳುತ್ತಾರೆ' ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾನೆ. ಶ್ರೀಕಿ ಶಾಲಾ ದಿನಗಳಿಂದಲೇ ಹ್ಯಾಕಿಂಗ್ ಮಾಡುವುದನ್ನು ಕಲಿತಿದ್ದು, ಪಿಯುಸಿ ಓದುವಾಗ ಅನೇಕ ಗೇಮಿಂಗ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಹಣ ದೋಚಿದ್ದಾನೆ ಎಂದು ಆರೋಪಿಸಲಾಗಿದೆ. ಶ್ರೀಕಿ ಮತ್ತು ಇತರರ ವಿರುದ್ಧ ಸಿಸಿಬಿ ಅಧಿಕಾರಿಗಳು ಸುಮಾರು 800 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಶ್ರೀಕಿ ವಿಚಾರಣೆ ವೇಳೆ ನೀಡಿದ ಮಾಹಿತಿಗಳನ್ನು ದಾಖಲಿಸಿದ್ದಾರೆ. ಮಂಗಳವಾರ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಶ್ರೀಕಿಗೆ ಜಾಮೀನು ನೀಡಿತ್ತು. ಹ್ಯಾಕಿಂಗ್ ಕೆಲಸಗಳಿಗೆ ಮೂರು ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಿದ್ದ ಎಂಬ ಆರೋಪದ ಕುರಿತಾದ ಪ್ರಶ್ನೆಗೆ ಆತ, ಅವುಗಳಲ್ಲಿ ಯಾವುದೂ ಕೆಲಸ ಮಾಡುತ್ತಿಲ್ಲ ಎಂದಿದ್ದಾನೆ. ಸ್ಟಾರ್ ಹೋಟೆಲ್‌ನಲ್ಲಿ ನಡೆದ ಪುಂಡಾಟ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಶ್ರೀಕಿ, 'ಆ ವ್ಯಕ್ತಿ ನನ್ನ ಕೊಠಡಿಗೆ ಬಂದು ಗಲಾಟೆ ಮಾಡಿದ್ದ' ಎಂದಿದ್ದಾನೆ. ಆದರೆ 'ಆ ವ್ಯಕ್ತಿ' ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ತಂದೆಯ ಆರೋಗ್ಯದ ಬಗ್ಗೆ ಮಾತನಾಡಿರುವ ಶ್ರೀಕಿ, ಅವರ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದಿದ್ದಾನೆ. ಜಯನಗರದಲ್ಲಿರುವ ಮನೆಯಲ್ಲಿ ಶ್ರೀಕಿಯ ತಂದೆ ಮೆಟ್ಟಿಲಿನಿಂದ ಜಾರಿಬಿದ್ದು ಗಾಯಗೊಂಡಿದ್ದರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಪಕ್ಕದಲ್ಲಿರುವ ಸ್ಟಾರ್ ಹೋಟೆಲ್‌ನಲ್ಲಿ ಶ್ರೀಕಿ 55 ದಿನಗಳಿಂದ ನೆಲೆಸಿದ್ದ. ಹೋಟೆಲ್‌ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಶ್ರೀಕಿಯ ಜತೆಗೆ ಆತನ ಗೆಳೆಯ ವಿಷ್ಣು ಭಟ್ ಎಂಬಾತನನ್ನು ಕೂಡ ಜೀವನ್ ಬಿಮಾ ನಗರ ಪೊಲೀಸರು ಭಾನುವಾರ ಬಂಧಿಸಿದ್ದರು. ವಿಷ್ಣು ಭಟ್ ಈಗ ಪೊಲೀಸ್ ವಶದಲ್ಲಿದ್ದಾನೆ. ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿರುವ ಆರೋಪ ಹೊತ್ತಿರುವ ಆಫ್ರಿಕಾದ ಪ್ರಜೆಯೊಬ್ಬನ ಜತೆ ವಿಷ್ಣು ಭಟ್ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ವಿಷ್ಣು ಭಟ್ ಮತ್ತು ಆಫ್ರಿಕಾದ ಪ್ರಜೆ ಇಬ್ಬರೂ ಮಾದಕ ಪದಾರ್ಥಗಳನ್ನು ಸರಬರಾಜು ಮಾಡುವುದಕ್ಕಾಗಿ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಷ್ಣು ಭಟ್ ನಿವಾಸದಲ್ಲಿ ಪೊಲೀಸರು ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದರು. ಶ್ರೀಕಿ ಇದ್ದ ಹೋಟೆಲ್ ಕೊಠಡಿಯಲ್ಲಿ ಏನೂ ಸಿಕ್ಕಿರಲಿಲ್ಲ.