ಲಾಕ್‌ಡೌನ್‌ ಹಿನ್ನೆಲೆ, ಬಿಬಿಎಂಪಿ ಆಸ್ತಿ ತೆರಿಗೆ ರಿಯಾಯಿತಿ ಅವಧಿ ಮೇ ಅಂತ್ಯದವರೆಗೆ ವಿಸ್ತರಣೆ

ಪ್ರತಿ ವರ್ಷವೂ ಏಪ್ರಿಲ್‌ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಾತ್ರ ಶೇ.5ರಷ್ಟು ರಿಯಾಯಿತಿ ಸಿಗುತ್ತದೆ. ಆದರೆ ಈ ಬಾರಿ ಕರ್ಫ್ಯೂ ವಿಧಿಸಿರುವುದರಿಂದ ಡಿಸ್ಕೌಂಟ್‌ ಸೌಲಭ್ಯವನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಲಾಕ್‌ಡೌನ್‌ ಹಿನ್ನೆಲೆ, ಬಿಬಿಎಂಪಿ ಆಸ್ತಿ ತೆರಿಗೆ ರಿಯಾಯಿತಿ ಅವಧಿ ಮೇ ಅಂತ್ಯದವರೆಗೆ ವಿಸ್ತರಣೆ
Linkup
ಬೆಂಗಳೂರು: ಬಿಬಿಎಂಪಿಯು ಪಾವತಿದಾರರಿಗೆ ಸಂತಸದ ಸುದ್ದಿ ನೀಡಿದ್ದು, ಶೇ.5ರಷ್ಟು ರಿಯಾಯಿತಿ ಸೌಲಭ್ಯದ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿ ಗುರುವಾರ ಆದೇಶ ಹೊರಡಿಸಿದೆ. ಕೋವಿಡ್‌ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಮೇ 12ರವರೆಗೆ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದ ನಗರದ ಆಸ್ತಿ ಮಾಲೀಕರ ಕೋರಿಕೆಗೆ ಪಾಲಿಕೆಯು ಸ್ಪಂದಿಸಿದೆ. ಪ್ರತಿ ವರ್ಷವೂ ಏಪ್ರಿಲ್‌ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಾತ್ರ ಶೇ.5ರಷ್ಟು ರಿಯಾಯಿತಿ ಸಿಗುತ್ತದೆ. ಆದರೆ, ಈ ಸಲ ಏ.27ರಿಂದಲೇ ಕರ್ಫ್ಯೂ ವಿಧಿಸಿರುವುದರಿಂದ ಆಸ್ತಿ ಮಾಲೀಕರು ಬ್ಯಾಂಕ್‌ಗಳಿಗೆ ಹೋಗಿ ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಆರ್ಥಿಕ ಸಂಕಷ್ಟದಿಂದಾಗಿ ತೆರಿಗೆ ಪಾವತಿ ಮಾಡಲು ಆಗಿಲ್ಲ. ಹಾಗಾಗಿ, ತೆರಿಗೆದಾರರಿಗೆ ಶೇ.5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಕಳೆದ ವರ್ಷವೂ ಶೇ.5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲಾಗಿತ್ತು. 14 ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿರುವುದರಿಂದ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಶೇ.5ರಷ್ಟು ರಿಯಾಯಿತಿ ಅವಧಿಯನ್ನು ವಿಸ್ತರಿಸುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ತೆರಿಗೆದಾರರು ಒತ್ತಾಯಿಸಿದ್ದರು. ಕೋವಿಡ್‌ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಸಂದರ್ಭದಲ್ಲೂ ಬಿಬಿಎಂಪಿಗೆ ಏ.29ರವರೆಗೆ 724.28 ಕೋಟಿ ರೂ. ಆಸ್ತಿ ತೆರಿಗೆ ಪಾವತಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಏಪ್ರಿಲ್‌ನಲ್ಲಿ ಎರಡು ಪಟ್ಟು ಜಾಸ್ತಿ ತೆರಿಗೆ ಸಂಗ್ರಹವಾಗಿದೆ. 2020-21ರಲ್ಲಿ ಏ.28ರವರೆಗೆ ಕೇವಲ 296.89 ಕೋಟಿ ರೂ. ಮಾತ್ರ ತೆರಿಗೆ ವಸೂಲಾಗಿತ್ತು. 2021-22ನೇ ಹಣಕಾಸು ವರ್ಷದ ಮೊದಲ ತಿಂಗಳ ಅಂತ್ಯಕ್ಕೆ ಒಂದು ದಿನ ಬಾಕಿ ಇರುವಾಗಲೇ 724,28,98,493 ತೆರಿಗೆ ಸಂಗ್ರಹವಾಗಿದೆ. ಆಸ್ತಿ ಮಾಲೀಕರು ಆನ್‌ಲೈನ್‌ ಮೂಲಕ 412.34 ಕೋಟಿ ರೂ. ಮತ್ತು ಚಲನ್‌ ಮೂಲಕ 311.94 ಕೋಟಿ ರೂ. ತೆರಿಗೆ ಪಾವತಿ ಮಾಡಿದ್ದಾರೆ. 2020-21ರಲ್ಲಿ 2855.60 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು.