ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದಲೇ ಪಾಕ್‌ ಮೂಲದ ಉಗ್ರನ ಹತ್ಯೆ..! ಭದ್ರತಾ ಸಿಬ್ಬಂದಿಗೂ ಗಾಯ

ಉಗ್ರರ ಗುಂಡಿಗೇ ಬಲಿಯಾಗಿರುವ ಪಾಕಿಸ್ತಾನದ ಲಷ್ಕರ್‌ ಸಂಘಟನೆಯ ಉಗ್ರ ಜಿಯಾ ಮುಸ್ತಫಾ, 2003ರಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ದ್ವೇಷಪೂರಿತ ದಾಳಿಯ ರೂವಾರಿ. ಈತನಿಗೆ 'ವಿಕ್ಟರ್‌' ಎಂಬ ಗೌಪ್ಯ ನಾಮ ಕೂಡ ಇತ್ತು.

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದಲೇ ಪಾಕ್‌ ಮೂಲದ ಉಗ್ರನ ಹತ್ಯೆ..! ಭದ್ರತಾ ಸಿಬ್ಬಂದಿಗೂ ಗಾಯ
Linkup
ಜಮ್ಮು: ಪೊಲೀಸ್‌ ಬಂಧನದಲ್ಲಿದ್ದ ಪಾಕಿಸ್ತಾನ ಮೂಲದ ಉಗ್ರನೊಬ್ಬನನ್ನು ಭಾನುವಾರ ಉಗ್ರರೇ ಹೊಡೆದುರುಳಿಸಿದ್ದಾರೆ. ಕಾಶ್ಮೀರಿ ಪಂಡಿತರ ಗೆ ಸಂಬಂಧಿಸಿದಂತೆ 2003ರಲ್ಲಿ ಬಂಧಿತನಾಗಿದ್ದ ಲಷ್ಕರೆ ತಯ್ಬಾ ಸಂಘಟನೆಯ ಜಿಯಾ ಮುಸ್ತಫಾ ಹತನಾದ . ಪೂಂಚ್‌ನ ಸುರಾನ್‌ಕೋಟ್‌ ಮತ್ತು ರಜೌರಿ ಜಿಲ್ಲೆಯ ಥಾನಾಮಂಡಿ ಗಡಿಯಲ್ಲಿರುವ ಭಟ್ಟಾ ದುರ್ರಿಯಾನ್‌ ಅರಣ್ಯ ಪ್ರದೇಶದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರುತಿಸಲು ಮೆಂಧರ್‌ ಪೊಲೀಸರು ಸೈನಿಕರ ಕಾವಲಿನೊಂದಿಗೆ ಮುಸ್ತಫಾನನ್ನು ಕರೆದೊಯ್ದಿದ್ದರು. ಭದ್ರತಾ ಪಡೆಗಳನ್ನು ಕಾಣುತ್ತಲೇ ಅರಣ್ಯದಲ್ಲಿ ಅಡಗಿದ್ದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆ ಆರಂಭಿಸಿದರು. ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮುಸ್ತಫಾನನ್ನು ತಕ್ಷಣದಲ್ಲಿ ಅರಣ್ಯದಿಂದ ಹೊರಕ್ಕೆ ಕರೆ ತರಲು ಸಾಧ್ಯವಾಗಿಲ್ಲ. ಹೀಗಾಗಿ ತೀವ್ರ ರಕ್ತ ಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ. ಇಬ್ಬರು ಪೊಲೀಸ್‌ ಸಿಬ್ಬಂದಿ ಮತ್ತು ಒಬ್ಬ ಯೋಧ ಕೂಡ ಗುಂಡೇಟು ತಗುಲಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲ್‌ ಕೋಟ್‌ ನಿವಾಸಿ ಮುಸ್ತಫಾನನ್ನು ಕಳೆದ 14 ವರ್ಷಗಳಿಂದ ಕೋಟ್‌ ಭಲ್ವಾಲ್‌ ಜೈಲಿನಲ್ಲಿ ಇರಿಸಲಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಅಡಗಿರುವ ಲಷ್ಕರ್‌ ಉಗ್ರರನ್ನು ಪತ್ತೆ ಹಚ್ಚುವ ಸಲುವಾಗಿ ಇತ್ತೀಚೆಗೆ ಮುಸ್ತಫಾನನ್ನು ಮೆಂಧರ್‌ಗೆ ಜಮ್ಮು - ಕಾಶ್ಮೀರ ಪೊಲೀಸರು ಕರೆತಂದಿದ್ದರು. 14 ದಿನಗಳ ಕಾರ್ಯಾಚರಣೆ: ಲಷ್ಕರ್‌ ಉಗ್ರರು ಅಕ್ಟೋಬರ್ 11 ಹಾಗೂ ಅಕ್ಟೋಬರ್ 14ರಂದು ದಾಳಿ ನಡೆಸಿ ಇಬ್ಬರು ಕಿರಿಯ ಶ್ರೇಣಿ ಸೇನಾಧಿಕಾರಿಗಳೂ ಸೇರಿದಂತೆ ಒಟ್ಟು ಒಂಬತ್ತು ಯೋಧರನ್ನು ಹತ್ಯೆಗೈದಿದ್ದಾರೆ. ದಾಳಿಕೋರ ಉಗ್ರರು ಅರಣ್ಯ ಪ್ರದೇಶದಲ್ಲಿ ಅಡಗಿರುವ ಕುರಿತು ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ಅಲ್ಲದೇ, ಈ ಉಗ್ರರ ಜತೆ ಬಂಧಿತ ಮುಸ್ತಫಾ ನಂಟು ಹೊಂದಿರುವುದೂ ಬೆಳಕಿಗೆ ಬಂದಿತ್ತು. ಹೀಗಾಗಿ ಅಡಗು ತಾಣಗಳನ್ನು ಗುರುತಿಸಲು ಮುಸ್ತಫಾನನ್ನು ಕರೆದೊಯ್ಯಲಾಗಿತ್ತು. ಉಗ್ರರ ವಿರುದ್ಧ ಪ್ರತೀಕಾರಕ್ಕಾಗಿ ಸೇನಾ ಪಡೆಗಳು 14 ದಿನಗಳಿಂದ ನಿರಂತರ ಶೋಧ ಕಾರ್ಯ ಕೈಗೊಂಡಿವೆ. ಬಹಳ ಮುಖ್ಯವಾಗಿ ಅರಣ್ಯ ಪ್ರದೇಶಗಳಲ್ಲಿನ ಗುಹೆಗಳಲ್ಲಿ ಭದ್ರತಾ ಪಡೆಗಳಿಂದ ಶೋಧ ಬಿರುಸುಗೊಂಡಿದೆ. ಈಗಾಗಲೇ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು 9 ಉಗ್ರರನ್ನು ಹೊಡೆದುರುಳಿಸಲಾಗಿದೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಸುತ್ತಲಿನ ನಾಲ್ಕು ಕಿ.ಮೀ. ಪ್ರದೇಶದಲ್ಲಿರುವ ಗ್ರಾಮಗಳಿಂದ ಇಬ್ಬರು ಮಹಿಳೆಯರು ಸೇರಿದಂತೆ 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಕಿಸ್ತಾನದ ಉಗ್ರರಿಗೆ ಅಗತ್ಯ ಆಹಾರ, ಅಡಗು ದಾಣಗಳನ್ನು ಒದಗಿಸಿರುವ ಆರೋಪ ಇವರ ಮೇಲಿದೆ. ರಾಷ್ಟ್ರೀಯ ತನಿಖಾ ದಳ ಕೂಡ ಹಲವೆಡೆ ದಾಳಿ ನಡೆಸಿ ಉಗ್ರರಿಗೆ ನೆರವು ನೀಡಿದ ಆರೋಪದಲ್ಲಿ 700 ಜನರನ್ನು ವಶಕ್ಕೆ ಪಡೆದಿದೆ. ಕಳೆದ ಜೂನ್‌ನಿಂದ ರಜೌರಿ ಹಾಗೂ ಜಮ್ಮು ಪ್ರಾಂತ್ಯದ ಪೂಂಛ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಅಕ್ರಮ ನುಸುಳುವಿಕೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಪಂಡಿತರ ಹತ್ಯಾಕಾಂಡದ ರೂವಾರಿ ಮುಸ್ತಫಾ ಉಗ್ರರ ಗುಂಡಿಗೇ ಬಲಿಯಾಗಿರುವ ಪಾಕಿಸ್ತಾನದ ಲಷ್ಕರ್‌ ಸಂಘಟನೆಯ ಉಗ್ರ ಜಿಯಾ ಮುಸ್ತಫಾ, 2003ರಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ದ್ವೇಷಪೂರಿತ ದಾಳಿಯ ರೂವಾರಿ. ಈತನಿಗೆ 'ವಿಕ್ಟರ್‌' ಎಂಬ ಗೌಪ್ಯ ನಾಮ ಕೂಡ ಇತ್ತು. 2003ರಲ್ಲಿ ಪುಲ್ವಾಮ ಜಿಲ್ಲೆಯ ನದಿಮಾರ್ಗ್‌ನಲ್ಲಿ ಮನೆಯೊಂದರಲ್ಲಿ ವಾಸವಿದ್ದ 24 ಮಂದಿ ಕಾಶ್ಮೀರಿ ಪಂಡಿತರನ್ನು ಮುಸ್ತಫಾ ನೇತೃತ್ವದ ಉಗ್ರರು ಬರ್ಬರವಾಗಿ ಹತ್ಯೆಗೈದಿದ್ದರು. ಅದು ಕೂಡ ಸೇನೆಯ ಸಮವಸ್ತ್ರ ಧರಿಸಿಕೊಂಡು ಉಗ್ರರು ಗುಂಡಿನ ಸುರಿಮಳೆಗೈದಿದ್ದರು. 11 ಮಹಿಳೆಯರು, 2 ಮಕ್ಕಳು, 11 ಪುರುಷರು ಬಲಿಯಾಗಿದ್ದರು. ಬಳಿಕ ಪೊಲೀಸರಿಗೆ ಸೆರೆ ಸಿಕ್ಕಿದ್ದ ಮುಸ್ತಫಾ, ತಾನು ಪಾಕಿಸ್ತಾನ ಮಿಲಿಟರಿಯ ಕೈಗೊಂಬೆ ಎಂದು ಒಪ್ಪಿಕೊಂಡಿದ್ದ. ಮತ್ತೊಬ್ಬ ನಾಗರಿಕನ ಹತ್ಯೆ ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಝೈನಾಪೊರ ಪ್ರದೇಶದಲ್ಲಿ ಸೇಬು ಹಣ್ಣಿನ ವ್ಯಾಪಾರಿ ಶಾಹಿದ್‌ ಅಝಾಜ್‌ ಎನ್ನುವವರು ಗುಂಡೇಟಿನಿಂದ ಬಲಿಯಾಗಿದ್ದಾರೆ. ಉಗ್ರರು ಹಾಗೂ ಸಿಆರ್‌ಪಿಎಫ್‌ ಯೋಧರ ನಡುವೆ ಗುಂಡಿನ ಚಕಮಕಿ ನಡೆಯುತ್ತಿರುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಶಾಹಿದ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.