ಯುವಕನಿಗೆ ಕಪಾಳಮೋಕ್ಷ ಮಾಡಿದ್ದ ಛತ್ತೀಸ್‌ಗಢದ ಸೂಜ್‌ಪುರ ಜಿಲ್ಲಾಧಿಕಾರಿ ಎತ್ತಂಗಡಿ!

ಕೊರೊನಾ ಪ್ರಸರಣ ತಡೆಗೆ ಜಾರಿಯಲ್ಲಿರುವ ಲಾಕ್‌ಡೌನ್‌ ನಿರ್ಬಂಧಗಳನ್ನು ಉಲ್ಲಂಘಿಸಿದ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲಾಧಿಕಾರಿಯನ್ನ ವರ್ಗಾವಣೆಗೆ ಮಾಡಿ ಅಲ್ಲಿ ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಯುವಕನಿಗೆ ಕಪಾಳಮೋಕ್ಷ ಮಾಡಿದ್ದ ಛತ್ತೀಸ್‌ಗಢದ ಸೂಜ್‌ಪುರ ಜಿಲ್ಲಾಧಿಕಾರಿ ಎತ್ತಂಗಡಿ!
Linkup
ರಾಯಪುರ: ಕೊರೊನಾ ಪ್ರಸರಣ ತಡೆಗೆ ಜಾರಿಯಲ್ಲಿರುವ ಲಾಕ್‌ಡೌನ್‌ ನಿರ್ಬಂಧಗಳನ್ನು ಉಲ್ಲಂಘಿಸಿದ ಯುವಕನೊಬ್ಬನಿಗೆ ಛತ್ತೀಸ್‌ಗಢದ ಜಿಲ್ಲಾಧಿಕಾರಿ ಕಪಾಳಮೋಕ್ಷ ಮಾಡಿ, ಆತನ ಮೊಬೈಲ್‌ ಬಿಸಾಡಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ವರ್ಗಾವಣೆಗೆ ಆದೇಶಿಸಿದ್ದಾರೆ. ರಣಬೀರ್‌ ಶರ್ಮಾ ಅವರನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡುವಂತೆ ಆದೇಶಿಸಿದ್ದಾರೆ. ರಾಜ್ಯ ಸಚಿವಾಲಯದ ಹೊಣೆಯನ್ನು ಶರ್ಮಾಗೆ ವಹಿಸಲಾಗಿದೆ. ರಾಯಪುರ ಜಿಲ್ಲಾಪಂಚಾಯತ್‌ ಸಿಇಒ ಆಗಿದ್ದ ಗೌರವ್‌ ಕುಮಾರ್‌ ಸಿಂಗ್‌ ಅವರನ್ನು ಸೂರಜ್‌ಪುರದ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಕಪಾಳಮೋಕ್ಷ ಮಾಡಿಸಿಕೊಂಡ ವ್ಯಕ್ತಿಗೆ ಮತ್ತು ಆತನ ಕುಟುಂಬಕ್ಕೆ ಸಿಎಂ ಬಘೇಲ್‌ ಅವರು ಟ್ವಿಟರ್‌ ಮೂಲಕ ಕ್ಷಮೆಯಾಚಿಸಿದ್ದಾರೆ. ''ಈ ಘಟನೆಯಿಂದ ಬಹಳ ಬೇಸರವಾಗಿದೆ. ನನ್ನ ಆಡಳಿತ ಅವಧಿಯಲ್ಲಿ ಅಧಿಕಾರಿಗಳಿಂದ ಇಂತಹ ವರ್ತನೆಗಳನ್ನು ಸಹಿಸುವುದಿಲ್ಲ,'' ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕಾರಿ ಶರ್ಮಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಲಾಗಿದೆ. ಈ ನಡುವೆ ಜಿಲ್ಲಾಧಿಕಾರಿ ರಣಬೀರ್‌ ಶರ್ಮಾ ಅವರು ಕೂಡ ತಮ್ಮ ವರ್ತನೆಗೆ ಜನರ ಕ್ಷಮೆಯಾಚಿಸಿದ್ದಾರೆ. ''ವೈರಲ್‌ ಆಗಿರುವ ವಿಡಿಯೊದಲ್ಲಿರುವ ವ್ಯಕ್ತಿಗೆ ಅವಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಆತ ಬೈಕ್‌ನಲ್ಲಿ ಬಹಳ ವೇಗವಾಗಿ ಬಂದಿದ್ದಲ್ಲದೇ, ಸ್ಥಳದಲ್ಲಿದ್ದ ನಮ್ಮ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಹೀಗೆ ಮಾಡಬೇಕಾಯಿತು. ಛತ್ತೀಸ್‌ಗಢದಲ್ಲಿ ಕೊರೊನಾದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ಆಡಳಿತ ವರ್ಗ ಹಗಲುರಾತ್ರಿ ಶ್ರಮಿಸುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಧಿಬೇಕು,'' ಎಂದು ಮನವಿ ಮಾಡಿದ್ದಾರೆ. ಐಎಎಸ್‌ ಸಂಘ ಖಂಡನೆ: ಅಧಿಕಾರಿ ಶರ್ಮಾ ಅವರ ಕ್ರಮವನ್ನು ಐಎಎಸ್‌ ಸಂಘ ಖಂಡಿಸಿದೆ. ''ಸಮಾಜಕ್ಕೆ ಪೂರಕವಾಗಿ ನೇರವಾಗುವ ನಮ್ಮ ಆಡಳಿತ ಸೇವೆಯ ಮೂಲಭೂತ ನಿಯಮವನ್ನೇ ಸೂರಜ್‌ಪುರ ಜಿಲ್ಲಾಧಿಕಾರಿ ರಣಬೀರ್‌ ಶರ್ಮಾ ಅವರ ಕೃತ್ಯ ಉಲ್ಲಂಘಿಸುತ್ತದೆ. ಸಾಂಕ್ರಾಮಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಸಮಾಜಕ್ಕೆ ಅಧಿಕಾರಿಗಳ ಮಾನವೀಯತೆಯ ಮುಖವೇ ಸ್ಫೂರ್ತಿಯಾಗಬೇಕಿದೆ. ಇಂಥ ಕಷ್ಟದ ಸಮಯಧಿದಲ್ಲಿ ಅಧಿಕಾರಿಗಳು ಕಟುವಾಗಿ ಸಾರ್ವಜನಿಕರೊಂದಿಗೆ ವರ್ತಿಸುವುದು ಸರಿಯಲ್ಲ,'' ಎಂದು ಸಂಘದ ಕೇಂದ್ರೀಯ ವಿಭಾಗ ಟ್ವೀಟ್‌ ಖಾತೆಯ ಮೂಲಕ ಪ್ರತಿಕ್ರಿಯಿಸಿದೆ.