20 ವರ್ಷದಲ್ಲಿ ಕಟ್ಟಿದ್ದೆಲ್ಲವೂ ಕ್ಷಣಮಾತ್ರದಲ್ಲಿ ನಾಶವಾಯಿತು: ಭಾರತದಲ್ಲಿ ಕಣ್ಣೀರಿಟ್ಟ ಅಫ್ಘನ್ ಸಂಸದ

ಅಫ್ಘಾನಿಸ್ತಾನದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಕಟ್ಟಿದ್ದ ಪ್ರತಿಯೊಂದೂ ಈಗ ನಿರ್ನಾಮವಾಗಿದೆ ಎಂದು ಭಾರತದ ರಕ್ಷಣೆಯ ಬಳಿಕ ದಿಲ್ಲಿಗೆ ಬಂದಿರುವ ಅಫ್ಘನ್ ಸಂಸದ ನರೇಂದ್ರ ಸಿಂಗ್ ಖಲ್ಸಾ ಕಣ್ಣೀರಿಟ್ಟಿದ್ದಾರೆ.

20 ವರ್ಷದಲ್ಲಿ ಕಟ್ಟಿದ್ದೆಲ್ಲವೂ ಕ್ಷಣಮಾತ್ರದಲ್ಲಿ ನಾಶವಾಯಿತು: ಭಾರತದಲ್ಲಿ ಕಣ್ಣೀರಿಟ್ಟ ಅಫ್ಘನ್ ಸಂಸದ
Linkup
ಹೊಸದಿಲ್ಲಿ: ಅಫ್ಘಾನಿಸ್ತಾನದಿಂದ ಭಾರತಕ್ಕೆ ಭಾನುವಾರ ಕರೆತರಲಾದ 24 ಸಿಖ್ಖರ ಪೈಕಿ ಇಬ್ಬರು ಅಫ್ಘನ್ ಸಂಸದರೂ ಸೇರಿದ್ದಾರೆ. ಸುಮಾರು 150 ಭಾರತೀಯರು ಅಪಹರಣಕ್ಕೊಳಗಾಗಿ ಬಿಡುಗಡೆಯಾದ ಭಯಾನಕ ಘಟನೆಯ ಬಳಿಕ 168 ಮಂದಿ ಪ್ರಯಾಣಿಕರನ್ನು ಹೊತ್ತ ವಿಮಾನ ಭಾರತಕ್ಕೆ ತಲುಪಿದೆ. ಇದರಲ್ಲಿ 107 ಮಂದಿ ಭಾರತೀಯ ಪ್ರಜೆಗಳಿದ್ದರೆ, ಇನ್ನು ಇಬ್ಬರು ಅಫ್ಘನ್ ಸೆನೆಟರ್‌ಗಳು ಹಾಗೂ 24 ಸಿಖ್ಖರು ಸೇರಿದ್ದಾರೆ. ಅಫ್ಘಾನಿಸ್ತಾನದ ಸನ್ನಿವೇಶದ ಕುರಿತು ದಿಲ್ಲಿ ಸಮೀಪದ ಹಿಂಡನ್ ವಾಯು ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲಿನ ಸಂಸದ ನರೇಂದರ್ ಸಿಂಗ್ ಖಾಲ್ಸಾ ಕಣ್ಣೀರಿಟ್ಟರು. 'ನನಗೆ ತೀವ್ರ ಅಳು ಬರುತ್ತಿದೆ. ಕಳೆದ 20 ವರ್ಷಗಳಲ್ಲಿ ಕಟ್ಟಿದ ಪ್ರತಿಯೊಂದೂ ಈಗ ನಾಶವಾಗಿದೆ. ಅಲ್ಲಿ ಶೂನ್ಯವಷ್ಟೇ ಇದೆ' ಎಂದು ಗದ್ಗದಿತರಾದರು. 'ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ಹೀಗಾಗಿ ನಾನು ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದೇನೆ. ನಮ್ಮ ಭಾರತೀಯ ಸಹೋದರರು ಹಾಗೂ ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ತಾಲಿಬಾನಿಗಳು ನನ್ನ ಮನೆಯನ್ನು ಸುಟ್ಟು ಕೆಡವಿದ್ದಾರೆ. ನಮಗೆ ಸಹಾಯ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ' ಎಂದು ಮತ್ತೊಬ್ಬ ಅಫ್ಘನ್ ಪ್ರಜೆ ಹೇಳಿದ್ದಾರೆ. ''ನಾವು ಪದೇ ಪದೇ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೆವು. ತಾಲಿಬಾನಿಗಳು ಕ್ರೂರ, ಅನಾಗರಿಕ ವ್ಯಕ್ತಿಗಳು. ನಾವು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಯಿತು. ವಿಮಾನ ನಿಲ್ದಾಣದಲ್ಲಿ ಕೂಡ ತಾಲಿಬಾನಿಗಳು ಅಡ್ಡಗಟ್ಟಿದ್ದರು. 'ಇಲ್ಲಿಂದ ಹೋಗಬೇಡಿ. ಎಲ್ಲಿಗೆ ಹೋಗುತ್ತೀರಿ?' ಎಂದು ಗದರುತ್ತಿದ್ದರು. ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ಮೋದಿ ಸರ್ಕಾರಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ'' ಎಂದು ಮತ್ತೊಬ್ಬ ಪ್ರಜೆ ತಿಳಿಸಿದ್ದಾರೆ. ಕಾಬೂಲ್‌ನ ಗುರುದ್ವಾರದಲ್ಲಿ ರಕ್ಷಣೆ ಪಡೆದಿದ್ದ ಹೆಚ್ಚಿನ ಜನರನ್ನು ಕರೆತರಲಾಗಿದೆ. ಅವರನ್ನು ಬಾಂಗ್ಲಾ ಸಾಹಿಬ್ ಗುರುದ್ವಾರದಲ್ಲಿ ಇರಿಸಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಪ್ರಜೆಗಳನ್ನು ಕರೆತರಲು ಪ್ರತಿ ದಿನ ಕಾಬೂಲ್‌ಗೆ ಎರಡು ವಿಮಾನಗಳು ತೆರಳಲು ಭಾರತಕ್ಕೆ ಅನುಮತಿ ನೀಡಲಾಗಿದೆ.