ಕ್ರಿಪ್ಟೋ ಕರೆನ್ಸಿಗೆ ಉತ್ತೇಜನ ನೀಡುವ ಯಾವ ಪ್ರಸ್ತಾಪ ಕೂಡ ನಮ್ಮ ಮುಂದಿಲ್ಲ: ಸಂಸತ್‌ಗೆ ಕೇಂದ್ರ ಸರ್ಕಾರ ಉತ್ತರ

ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ವಲಯಕ್ಕೆ ಪ್ರೋತ್ಸಾಹ ನೀಡುವ ಯಾವುದೇ ಪ್ರಸ್ತಾಪ ತನ್ನ ಮುಂದೆ ಇಲ್ಲ ಎಂದು ಕೇಂದ್ರ ಹಣಕಾಸು ಮಂತ್ರಾಲಯ ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದೆ.

ಕ್ರಿಪ್ಟೋ ಕರೆನ್ಸಿಗೆ ಉತ್ತೇಜನ ನೀಡುವ ಯಾವ ಪ್ರಸ್ತಾಪ ಕೂಡ ನಮ್ಮ ಮುಂದಿಲ್ಲ: ಸಂಸತ್‌ಗೆ ಕೇಂದ್ರ ಸರ್ಕಾರ ಉತ್ತರ
Linkup
ಹೊಸದಿಲ್ಲಿ: ದೇಶದಲ್ಲಿ ವಲಯನ್ನು ಉತ್ತೇಜಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕ್ರಿಪ್ಟೋ ಕರೆನ್ಸಿ ಹಗರಣಗಳು ವಿವಾದ ಉಂಟು ಮಾಡುತ್ತಿರುವ ವೇಳೆಯೇ ಕೇಂದ್ರ ಸರ್ಕಾರ ಹೀಗೆ ಹೇಳಿದೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಸೋಮವಾರ ಸಂಸತ್‌ಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಮಂತ್ರಾಲಯ, ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ವಲಯಕ್ಕೆ ಪ್ರೋತ್ಸಾಹ ನೀಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದೆ. ಭಾರತದಲ್ಲಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಕ್ರಿಪ್ಟೋ ಕರೆನ್ಸಿ ಎಕ್ಸ್‌ಜೇಂಜ್‌ ಕಂಪನಿಗಳ ಬಗ್ಗೆ ಯಾವುದಾದರೂ ದತ್ತಾಂಶ ಇದೆಯೇ ಎನ್ನುವ ಪ್ರಶ್ನೆಗೆ, 'ಕ್ರಿಪ್ಟೋ ಕರೆನ್ಸಿ ವಲಯದ ಯಾವುದೇ ಮಾಹಿತಿಯನ್ನು ಸಂಗ್ರಹಿಸುತ್ತಿಲ್ಲ' ಎಂದು ಕೇಂದ್ರ ಸರ್ಕಾರ ತನ್ನ ಉತ್ತರದಲ್ಲಿ ಹೇಳಿದೆ. ಅಲ್ಲದೇ ಕ್ರಿಪ್ಟೋ ಕರೆನ್ಸಿ ಹಾಗೂ ಡಿಜಿಟಲ್‌ ಕರೆನ್ಸಿಗಳ ನಿಯಂತ್ರಣಕ್ಕೆ ಮಸೂದೆ ತರಲಾಗುತ್ತಿದ್ದು, ಅದನ್ನು ಈ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲಾಗುತ್ತದೆ ಎಂದು ಸರ್ಕಾರ ತನ್ನ ಉತ್ತರದಲ್ಲಿ ಹೇಳಿದೆ. ಈ ಹಿಂದೆ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಸಾಕಷ್ಟು ತಕರಾರುಗಳು ಕೇಳಿ ಬಂದಾಗ, 'ಕ್ರಿಪ್ಟೋ ಕರೆನ್ಸಿಯಲ್ಲಿ ಬಳಕೆ ಮಾಡಲಾಗುತ್ತಿರುವ ಆಧುನಿಕ ತಂತ್ರಜ್ಞಾನಗಳ ನಿಯಂತ್ರಣಕ್ಕೆ ಜಾಗತಿಕ ಕ್ರಮಗಳು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಅಧಿವೇಶನದಲ್ಲಿ ನಾವು ಭಾರೀ ಸಮಾಲೋಚನೆ ನಡೆಸಿ ಕ್ರಿಪ್ಟೋ ಕರೆನ್ಸಿ ಮಸೂದೆಯನ್ನು ತರಲಿದ್ದೇವೆ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. 'ಕ್ರಿಪ್ಟೋ ಕರೆನ್ಸಿ ಹಾಗೂ ಡಿಜಿಟಲ್‌ ಮನಿಗಳ ನಿಯಂತ್ರಣ ಮಸೂದೆ 2021' ರಲ್ಲಿ 'ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಮೂಲಕ ಅಧಿಕೃತ ಡಿಜಿಟಲ್‌ ಕರೆನ್ಸಿ ರಚನೆಗೆ ಅನುಕೂಲಕರ ಚೌಕಟ್ಟು ನಿರ್ಮಿಸಲಾಗುತ್ತದೆ. ಅಲ್ಲದೇ ಹೊಸ ಮಸೂದೆಯಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧ ಮಾಡುವ ಪ್ರಸ್ತಾಪ ಕೂಡ ಇದೆ. ಆದರೆ ಈ ಮಸೂದೆಯಲ್ಲಿ ಕ್ರಿಪ್ಟೋಕರೆನ್ಸಿ ಪ್ರಚಾರಕ್ಕೆ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ' ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಸದ್ಯ ದೇಶದಲ್ಲಿ ಕ್ರಿಪ್ಟೋವಕರೆನ್ಸಿಗೆ ಬಳಕೆ, ಪ್ರಚಾರಕ್ಕೆ ಯಾವುದೇ ರೀತಿಯ ನಿರ್ಬಂಧ ಇಲ್ಲ. ಹೀಗಾಗಿ ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಮಾನ್ಯತೆ ಬಗ್ಗೆ ಹಲವು ಚರ್ಚೆಗಳು, ಸಂವಾದಗಳು ನಡೆಯುತ್ತಿವೆ. ಇನ್ನು ಕ್ರಿಪ್ಟೋ ಕರೆನ್ಸಿಗೆ ಕಾನೂನು ಮಾನ್ಯತೆ ನೀಡುವ ಬಗ್ಗೆ ಆರ್‌ಬಿಐ ಕೂಡ ವಿರೋಧ ವ್ಯಕ್ತ ಪಡಿಸುತ್ತಾ ಬಂದಿದೆ. ಕ್ರಿಪ್ಟೋ ಕರೆನ್ಸಿ ವಿರುದ್ಧದ ನಿಲುವು ವ್ಯಕ್ತ ಪಡಿಸಿಕೊಂಡೇ ಬಂದಿರುವ ಆರ್‌ಬಿಐ, ಒಂದು ವೇಳೆ ಕ್ರಿಪ್ಟೋ ಕರೆನ್ಸಿಗೆ ಮಾನ್ಯತೆ ನೀಡಿದ್ದೇ ಆದಲ್ಲಿ, ದೇಶದ ಸಮಗ್ರ ಆರ್ಥಿಕತೆ ಹಾಗೂ ಹಣಕಾಸು ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಕ್ರಿಪ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡಿರುವರ ಸಂಖ್ಯೆ, ಹಾಗೂ ಅವರ ಒಟ್ಟು ಘೋಷಿತ ಆಸ್ತಿಯ ಬಗ್ಗೆ ನಿಖರ ಮಾಹಿತಿ ಸಿಗುವುದಿಲ್ಲ ಎಂದು ಆರ್‌ಬಿಐ ಹೇಳಿತ್ತು. ಜತೆಗೆ ಕ್ರಿಪ್ಟೋ ಕರೆನ್ಸಿ ಆರ್‌ಬಿಐ ನಿಯಂತ್ರಣಕ್ಕೆ ಒಳಪಡದೇ ಇರುವುದರಿಂದ, ದೇಶದ ಆರ್ಥಿಕ ವ್ಯವಸ್ಥೆಗೆ ಹೊಡೆತ ಬೀಳಲಿದೆ ಎಂದು ಆರ್‌ಬಿಐ ಹೇಳಿತ್ತು.