ಹೊಸ ಡ್ರೋನ್‌ ನಿಯಮ ಜಾರಿ, ನೋಂದಣಿ ಪ್ರಕ್ರಿಯೆ ಸರಳ, ಪರವಾನಗಿ ಶುಲ್ಕವೂ ಇಳಿಕೆ

ದೇಶಾದ್ಯಂತ ಡ್ರೋನ್‌ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ನಿಯಮಗಳಿಗೆ ಒಪ್ಪಿಗೆ ನೀಡಿದೆ. ಹೊಸ ನಿಯಮಗಳಲ್ಲಿ ಡ್ರೋನ್‌ ಹಾರಾಟಕ್ಕೆ ಹೆಚ್ಚು ಅವಕಾಶ ಮಾಡಿಕೊಡಲಾಗಿದೆ.

ಹೊಸ ಡ್ರೋನ್‌ ನಿಯಮ ಜಾರಿ, ನೋಂದಣಿ ಪ್ರಕ್ರಿಯೆ ಸರಳ, ಪರವಾನಗಿ ಶುಲ್ಕವೂ ಇಳಿಕೆ
Linkup
ಹೊಸದಿಲ್ಲಿ: ದೇಶಾದ್ಯಂತ ಡ್ರೋನ್‌ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ನಿಯಮಗಳಿಗೆ ಒಪ್ಪಿಗೆ ನೀಡಿದ್ದು, ಕಳೆದ ಮಾರ್ಚ್ 12ರಿಂದ ಜಾರಿಯಲ್ಲಿದ್ದ ಮಾನವರಹಿತ ವೈಮಾನಿಕ ವ್ಯವಸ್ಥೆಗಳ ನಿಯಮಗಳು (ಯುಎಎಸ್‌) ಬದಲಾಗಲಿವೆ. ಹೊಸ ನಿಯಮಗಳಲ್ಲಿ ಡ್ರೋನ್‌ ಹಾರಾಟಕ್ಕೆ ಹೆಚ್ಚು ಅವಕಾಶ ಮಾಡಿಕೊಡಲಾಗಿದ್ದು, ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಎಲ್ಲ ಡ್ರೋನ್‌ಗಳ ಮೇಲೆ ನಿಗಾ ಇರಿಸಲು ಸಚಿವಾಲಯ ತೀರ್ಮಾನಿಸಿದೆ. ಈ ಮುಂಚೆ ಅನುಮತಿಗಾಗಿ 25 ಅರ್ಜಿಗಳ ಸಲ್ಲಿಕೆ ಆಗಬೇಕಿತ್ತು. ಅದನ್ನು ಕೇವಲ ಐದಕ್ಕೆ ಇಳಿಕೆ ಮಾಡಲಾಗಿದೆ. ಪ್ರಮುಖವಾಗಿ ಡ್ರೋನ್‌ಗಳು ಹೊತ್ತೊಯ್ಯಬಹುದಾದ ಗರಿಷ್ಠ ತೂಕವನ್ನು 300 ಕೆ.ಜಿ.ಯಿಂದ 500 ಕೆ.ಜಿ.ಗೆ ಹೆಚ್ಚಿಸಲಾಗಿದೆ. ಜುಲೈ 15ರಂದೇ ಹೊಸ ಡ್ರೋನ್‌ ನಿಯಮಗಳನ್ನು ಜಾರಿಗೆ ತರುವ ಘೋಷಣೆಯನ್ನು ಮಾಡಿತ್ತು. ಈ ಕುರಿತು ಡ್ರೋನ್‌ ಬಳಕೆದಾರರು, ತಯಾರಕ ಕಂಪನಿಗಳಿಂದ ಸಲಹೆಗಳನ್ನೂ ಆಹ್ವಾನಿಸಿತ್ತು. ಅಂತಿಮವಾಗಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಕೇವಲ 5 ಅರ್ಜಿಗಳು, 4 ಮಾದರಿ ಶುಲ್ಕ ಹೊಸ ಡ್ರೋನ್‌ ನಿಯಮಗಳ ಅನ್ವಯ ದೇಶಾದ್ಯಂತ ಡ್ರೋನ್‌ ಸೇವೆ ಒದಗಿಸಲು ಇಚ್ಛಿಸುವವರು ಅಧಿಕೃತ ಅನುಮೋದನೆಗಾಗಿ 5 ಅರ್ಜಿಗಳನ್ನು ಭರ್ತಿ ಮಾಡಿದರೆ ಸಾಕಾಗಿದೆ. ಜತೆಗೆ ಪೈಲಟ್‌ ಪರವಾನಗಿ, ನೋಂದಣಿ ಶುಲ್ಕಗಳಲ್ಲಿ ಭಾರಿ ಕಡಿತ ಮಾಡಲಾಗಿದೆ. ಈ ಮುಂಚೆ ವಿವಿಧ ವಿಷಯಗಳಿಗೆ ಸಂಬಂಧಿಸಿ 72 ಶುಲ್ಕಗಳನ್ನು ಪಾವತಿಸಬೇಕಿತ್ತು. ಈಗ ಅವುಗಳನ್ನು ಕೇವಲ ನಾಲ್ಕು ಮಾದರಿಗೆ ಇಳಿಸಲಾಗಿದೆ. ಜತೆಗೆ ಶುಲ್ಕದಲ್ಲಿಯೂ ಭಾರಿ ಇಳಿಕೆ ಮಾಡಲಾಗಿದೆ. ಉದಾಹರಣೆಗೆ, ರಿಮೋಟ್‌ ಪೈಲಟ್‌ ಪರವಾನಗಿಗೆ (ಬೃಹತ್‌ ಗಾತ್ರದ ಡ್ರೋನ್‌ಗಳು) ಈ ಮುಂಚೆ 3000 ಸಾವಿರ ರೂ. ಶುಲ್ಕ ಪಾವತಿಸಬೇಕಿತ್ತು. ಇದನ್ನು ಹೊಸ ನಿಯಮಗಳ ಅಡಿಯಲ್ಲಿ ಕೇವಲ 100 ರೂ.ಗೆ ಇಳಿಕೆ ಮಾಡಲಾಗಿದೆ. ಈ ಪರವಾನಗಿಯ ಅವಧಿ 10 ವರ್ಷಗಳದ್ದಾಗಿದೆ. ಹೊಸ ನಿಯಮಗಳಲ್ಲಿನ ಪ್ರಮುಖಾಂಶಗಳು
  • ಡ್ರೋನ್‌ಗಳಿಗೆ ಪ್ರತ್ಯೇಕವಾದ ವಿಶಿಷ್ಟ ಗುರುತಿನ ಸಂಖ್ಯೆ, ಅಧಿಕೃತ ಎನ್ನಲು ಪ್ರಮಾಣಪತ್ರ, ಸಂಶೋಧನೆ ಮತ್ತು ಅಧ್ಯಯನ (ಆರ್‌ ಆ್ಯಂಡ್‌ ಡಿ) ಸಂಸ್ಥೆಯಿಂದ ಅನುಮೋದನೆ, ವಿದ್ಯಾರ್ಥಿ ಪೈಲಟ್‌ ಪರವಾನಗಿ, ರಿಮೋಟ್‌ ಪೈಲಟ್‌ ಪರವಾನಗಿ , ಡ್ರೋನ್‌ ಉಪಕರಣಗಳಿಗೆ ಆಮದು ಪರವಾನಗಿ
  • ಡಿಜಿಟಲ್‌ ಸ್ಕೈ ವೇದಿಕೆಯಲ್ಲೇ ಎಲ್ಲ ಡ್ರೋನ್‌ಗಳ ನೋಂದಣಿ
  • ಡ್ರೋನ್‌ ಟ್ಯಾಕ್ಸಿಗಳ ಬಳಕೆಗೆ ಉತ್ತೇಜನ, ಪೇಲೋಡ್‌ 300 ರಿಂದ 500 ಕೆ.ಜಿ.ಗೆ ಏರಿಕೆ
  • ಡ್ರೋನ್‌ಗಳ ನೋಂದಣಿಗೂ ಮುನ್ನವೇ ಯಾವುದೇ ಭದ್ರತಾ ಪರಿಶೀಲನೆ ಅಗತ್ಯವಿಲ್ಲ
  • ಡ್ರೋನ್‌ ಹಾರಾಟ ನಿಯಮಗಳ ಉಲ್ಲಂಘನೆಗೆ ಗರಿಷ್ಠ 1 ಲಕ್ಷ ರೂ.ವರೆಗೆ ದಂಡ
  • ಡಿಜಿಟಲ್‌ ಸ್ಕೈ ವೇದಿಕೆಯಲ್ಲಿ ಹಸಿರು, ಹಳದಿ ಮತ್ತು ಕೆಂಪು ವಲಯಗಳ ಪ್ರದರ್ಶನ
  • ಹಳದಿ ವಲಯದ ಎತ್ತರ 45 ಕಿ.ಮೀ ನಿಂದ 12 ಕಿ.ಮೀ.ಗೆ ಇಳಿಕೆ
  • ಹಸಿರು ವಲಯದಲ್ಲಿ 200 ಅಡಿಗಳವರೆಗೆ ಹಾರಾಟಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ (ಏರ್‌ಪೋರ್ಟ್‌ನ ವ್ಯಾಪ್ತಿಯಿಂದ 8-12 ಕಿ.ಮೀ ದೂರದಲ್ಲಿ)
  • ವಾಣಿಜ್ಯ ಬಳಕೆಗೆ ಸಣ್ಣ ಡ್ರೋನ್‌ಗಳನ್ನು ಹಾರಿಸಲು ಪೈಲಟ್‌ ಪರವಾನಗಿ ಬೇಕಿಲ್ಲ
  • ಸರಕು ಸಾಗಣೆಗಾಗಿಯೇ ಡ್ರೋನ್‌ ಕಾರಿಡಾರ್‌ಗಳ ನಿರ್ಮಾಣ
  • ವ್ಯಾಪಾರ ಸ್ನೇಹಿಯಾಗಿ ಡ್ರೋನ್‌ಗಳ ಬಳಕೆ ಮೇಲೆ ನಿಗಾ ಇರಿಸಲು ಮಾನವರಹಿತ ವೈಮಾನಿಕ ವ್ಯವಸ್ಥೆ(ಸಾಧನಗಳು) ಉತ್ತೇಜನ ಆಯೋಗ ಸ್ಥಾಪನೆ