ಜನಪರ ತೀರ್ಪುಗಳಿಗೆ ಖ್ಯಾತಿ ಪಡೆದಿರುವ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ನ್ಯಾ. ನಾಗರತ್ನ!

ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ನ್ಯಾ. ನಾಗರತ್ನ. 13 ವರ್ಷಗಳ ಸೇವಾವಧಿಯಲ್ಲಿ ಕಾನೂನು ಪರಿಪಾಲನೆ ಜತೆಗೆ ಜನಪರ ಕಾಳಜಿ, ಸಾಮಾಜಿಕ ಕಲ್ಯಾಣವನ್ನೇ ಉಸಿರಾಗಿಸಿಕೊಂಡು ಅದೇ ನೆಲೆಯಲ್ಲಿ ದೂರಗಾಮಿ ಪರಿಣಾಮಗಳುಳ್ಳ ತೀರ್ಪುಗಳನ್ನು ನೀಡಿದ್ದಾರೆ. ಸುಪ್ರೀಂಕೋರ್ಟ್‌ನ ಮುಂದಿನ ಸಿಜೆಐ ಆಗಿ ಅವರು ಆಯ್ಕೆಯಾಗುವುದು ಪಕ್ಕಾ ಆಗಿದೆ.

ಜನಪರ ತೀರ್ಪುಗಳಿಗೆ ಖ್ಯಾತಿ ಪಡೆದಿರುವ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ನ್ಯಾ. ನಾಗರತ್ನ!
Linkup
ಶ್ರೀಕಾಂತ ಹುಣಸವಾಡಿ ಬೆಂಗಳೂರು: ಅನೈತಿಕ ಸಂಬಂಧದ ತಂದೆ, ತಾಯಿ ಇರಬಹುದು, ಆದರೆ ಅನೈತಿಕ ಮಕ್ಕಳಿರಲು ಸಾಧ್ಯವಿಲ್ಲ. ಸಾಂಕ್ರಾಮಿಕವಿರಲಿ, ಬಿಡಲಿ ಮಕ್ಕಳ ಶಿಕ್ಷಣ ಮುಂದುವರಿಯಬೇಕು. ಬ್ರೇಕಿಂಗ್‌ ನ್ಯೂಸ್‌ ಹೆಸರಿನಲ್ಲಿ ಸುದ್ದಿ ವೈಭವೀಕರಣ ಸಲ್ಲ. ದೇವಾಲಯಗಳು ವಾಣಿಜ್ಯ ಸಂಸ್ಥೆಗಳಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಮಕ್ಕಳಿಗೆ ಸಬಲ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದೇ ಹೇಳಿಕೊಟ್ಟಿಲ್ಲ ಎಂಬುದೂ ಸೇರಿ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ ಸುಪ್ರೀಂಕೋರ್ಟ್‌ಗೆ ನೂತನವಾಗಿ ಆಯ್ಕೆಯಾಗಿರುವ, ಮೂಲದ ನ್ಯಾ. ಬಿ.ವಿ.ನಾಗರತ್ನ. ಹೌದು, ಈವರೆಗಿನ ತಮ್ಮ 13 ವರ್ಷಗಳ ಸೇವಾವಧಿಯಲ್ಲಿ ಕಾನೂನು ಪರಿಪಾಲನೆ ಜತೆಗೆ ಜನಪರ ಕಾಳಜಿ, ಸಾಮಾಜಿಕ ಕಲ್ಯಾಣವನ್ನೇ ಉಸಿರಾಗಿಸಿಕೊಂಡು ಅದೇ ನೆಲೆಯಲ್ಲಿ ದೂರಗಾಮಿ ಪರಿಣಾಮಗಳುಳ್ಳ ತೀರ್ಪುಗಳನ್ನು ನೀಡಿರುವ ಅವರಿಂದ ಸುಪ್ರೀಂಕೋರ್ಟ್‌ನಲ್ಲೂ ಮಹತ್ವದ ತೀರ್ಪುಗಳನ್ನು ನಿರೀಕ್ಷಿಸಲಾಗುತ್ತಿದೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವ, ಕಾನೂನು ಪರಿಧಿಯಲ್ಲಿಯೇ ಮಾನವೀಯತೆ ಮೆರೆಯುತ್ತಿರುವ ಅಪರೂಪದ ವ್ಯಕ್ತಿತ್ವ ಅವರದು. 2009ರಲ್ಲಿ ಸಿಜೆ ಆಗಿದ್ದ ದಿನಕರನ್‌ ಪ್ರಕರಣದಲ್ಲಿ ವಕೀಲರ ಗುಂಪು ನ್ಯಾ.ಬಿ.ವಿ.ನಾಗರತ್ನ ಅವರನ್ನು ಕೋರ್ಟ್‌ ಹಾಲ್‌ನಲ್ಲಿ ಕೂಡಿ ಹಾಕಿತ್ತು. ಆಗ ಅವರು ಧೈರ್ಯದಿಂದ ಪರಿಸ್ಥಿತಿ ಎದುರಿಸಿದ್ದೇ ಅಲ್ಲದೆ ''ನನೆಗೆ ಕೋಪವಿಲ್ಲ, ಆದರೆ ನ್ಯಾಯಾಂಗದ ಭಾಗವಾಗಿರುವ ವಕೀಲರ ನಡತೆಯಿಂದ ನೋವಾಗಿದೆ,'' ಎಂದು ಸಮಾಧಾನದಿಂದಲೇ ಹೇಳಿದ್ದರು. ಆನಂತರ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಶೇ.25ರಷ್ಟು ಮೀಸಲು ರದ್ದುಗೊಳಿಸಿದ್ದು, ಪೋಸ್ಕೊ ಕಾಯಿದೆಯಡಿ ಆರೋಪಪಟ್ಟಿ ಸಲ್ಲಿಕೆ ವಿಳಂಬ ಕಾರಣಕ್ಕೆ ಆರೋಪಿ ಸಹಜ ಜಾಮೀನಿಗೆ ಅರ್ಹನಲ್ಲ ಎಂಬುದೂ ಸೇರಿ ಹಲವು ತೀರ್ಪು ನೀಡಿದ್ದಾರೆ. ಇತ್ತೀಚೆಗೆ ಮಲತಾಯಿ ಮಕ್ಕಳ ನಡುವಿನ ಆಸ್ತಿ ವಿವಾದದ ತೀರ್ಪೊಂದನ್ನು ನೀಡುವಾಗ ''ಅನೈತಿಕ ಸಂಬಂಧದ ತಂದೆ ತಾಯಿ ಇರಬಹುದು, ಆದರೆ ಅನೈತಿಕ ಮಕ್ಕಳು ಇರಲು ಸಾಧ್ಯವಿಲ್ಲ. ಹೀಗಾಗಿ, ಅನೈತಿಕ ಸಂಬಂಧಕ್ಕೆ ಜನಿಸಿದ ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿದೆ'' ಎಂದು ಸಾರಿ, ಆ ಬಗ್ಗೆ ಸಾಂವಿಧಾನಿಕ ತಿದ್ದುಪಡಿಗೂ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯ ಹಲವು ಆದೇಶಗಳನ್ನು ನೀಡಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುಚಿ ಯೋಜನೆ ಜಾರಿಗೆ ನಿರ್ದೇಶನ ನೀಡಿದ್ದರು. ಹೈಕೋರ್ಟ್‌ ಆದೇಶದ ನಂತರ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ಒದಗಿಸುವ ಯೋಜನೆಗೆ ಸರಕಾರ ಹಣ ಮಂಜೂರು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪಠ್ಯಪುಸ್ತಕವನ್ನೇ ಒದಗಿಸದೇ ತರಗತಿ ಆರಂಭಿಸಿದ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾ. ಬಿ.ವಿ.ನಾಗರತ್ನ, ಕೂಡಲೇ ಪಠ್ಯಪುಸ್ತಕ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಬೋರ್ಡ್‌ ಪರೀಕ್ಷೆ ಬರೆಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ್ದ ಅವರು, ಪರೀಕ್ಷೆ ಬರೆಯುವುದರಲ್ಲಿ ದ್ವಿತೀಯ ಪಿಯುಸಿ ಪುನರಾವರ್ತಿತ ಅಭ್ಯರ್ಥಿಗಳಿಗೆ ಆಗುತ್ತಿದ್ದ ತಾರತಮ್ಯದಿಂದ ನ್ಯಾಯ ಕೊಡಿಸಿ, ಅವರೂ ಪರೀಕ್ಷೆ ಬರೆಯದೆ ಪಾಸಾಗಲು ನೆರವಾಗಿದ್ದರು. ಕಳೆದ ವರ್ಷ ಕೋವಿಡ್‌ ಸಮಯದಲ್ಲಿ ಸಿಜೆ ಎ.ಎಸ್‌. ಓಕ್‌ ಅವರೊಂದಿಗೆ ವಿಭಾಗೀಯ ಪೀಠದಲ್ಲಿ ವಲಸೆ ಕಾರ್ಮಿಕರಿಗೆ ನೆರವಿಗೆ ಧಾವಿಸಿ ಕಾಳಜಿ ಮೆರೆದಿದ್ದರು. ಜನಪರ ಕಾಳಜಿ, ಕಾನೂನಿನ ಅಪಾರ ಜ್ಞಾನ ಹೊಂದಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರದಲ್ಲಿಇನ್ನಷ್ಟು ಹೆಚ್ಚಿಸಲಿ ಎಂಬುದು ಎಲ್ಲರ ಆಶಯವಾಗಿದೆ. ಮಂಡೂರು, ಮಾವಳ್ಳಿಪುರಂಗೆ ಭೇಟಿ ನ್ಯಾ. ನಾಗರತ್ನ ಅವರ ಜನಪರಕಾಳಜಿ ಎಷ್ಟೆಂಬುದಕ್ಕೆ ಅವರು ತ್ಯಾಜ್ಯ ಬಿಕ್ಕಟ್ಟು ತಲೆದೋರಿದ್ದ ಸಂದರ್ಭದಲ್ಲಿ ನ್ಯಾ. ಎನ್‌. ಕುಮಾರ್‌ ಜತೆಗೂಡಿ ಮಂಡೂರು ಮತ್ತು ಮಾವಳ್ಳಿಪುರ ಭೂ ಭರ್ತಿ ಘಟಕಗಳಿಗೆ ಭೇಟಿ ನೀಡಿದ್ದರು. ಸ್ಥಳೀಯ ಜನರ ಸಮಸ್ಯೆ ಆಲಿಸಿ, ಸಾಂತ್ವನ ಹೇಳಿದ್ದರು. ತ್ಯಾಜ್ಯ ವಿಲೇವಾರಿ ಕುರಿತು ಬಿಬಿಎಂಪಿಗೆ ಸಾಲು ಸಾಲು ನಿರ್ದೇಶನಗಳನ್ನು ನೀಡಿದ್ದರು. ವಕೀಲಿಕೆಯ ಕುಟುಂಬ!ಮೂಲತಃ ವಕೀಲಿಕೆ ಕುಟಂಬದ ನ್ಯಾ. ನಾಗರತ್ನ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇ.ಎಸ್‌.ವೆಂಕಟರಾಮಯ್ಯ ಅವರ ಪುತ್ರಿ. 1987ರ ಅ.28ರಂದು ಬೆಂಗಳೂರಿನಲ್ಲಿ ವಕೀಲಿಕೆ ಆರಂಭಿಸಿದರು. ಸಾಂವಿಧಾನಿಕ, ವಾಣಿಜ್ಯ, ಸೇವಾ, ಆಡಳಿತ, ವಿಮಾ ಕಾನೂನುಗಳಲ್ಲಿ ಹೆಚ್ಚಿನ ಪಾಂಡಿತ್ಯ ಸಂಪಾದಿಸಿದ್ದ ಅವರು, ಮಧ್ಯಸ್ಥಿಕೆ ಮತ್ತು ರಾಜಿ ಸಂಧಾನ ವಿಷಯಗಳಲ್ಲಿಅಪಾರ ಅನುಭವ ಸಂಪಾದಿಸಿದ್ದರು. 2008ರ ಫೆ.18ರಂದು ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2010ರಲ್ಲಿಅವರು ಕಾಯಂ ನ್ಯಾಯಮೂರ್ತಿಯಾದರು.