![](https://vijaykarnataka.com/photo/84532082/photo-84532082.jpg)
ಹೊಸದಿಲ್ಲಿ: ಕೊರೊನಾ ಕಾರಣದಿಂದ ತಾತ್ಕಾಲಿಕವಾಗಿ ರದ್ದುಪಡಿಸಿರುವ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಮತ್ತೆ ಆರಂಭಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಸಂಸತ್‌ನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಕರೆದಿದ್ದ ಸದನ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷಗಳ ನಾಯಕರು, ''ಎರಡು ವರ್ಷಗಳಿಂದ ಪ್ರದೇಶಾಭಿವೃದ್ಧಿ ನಿಧಿ ಇಲ್ಲದ ಕಾರಣ ಸಂಸದರು ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ನಿಧಿಯನ್ನು ಮತ್ತೆ ಆರಂಭಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿ,'' ಎಂದು ಮನವಿ ಮಾಡಿದರು.
ಸರಕಾರದ ಜತೆ ಈ ಕುರಿತು ಚರ್ಚೆ ನಡೆಸುವ ಭರವಸೆಯನ್ನು ಸ್ಪೀಕರ್ ನೀಡಿದರು. ಆರೋಗ್ಯಕರ ಚರ್ಚೆಗೆ ಸಿದ್ಧ ಎಂದ ಪ್ರಧಾನಿ ಇದಕ್ಕೂ ಮೊದಲು, ಕೇಂದ್ರ ಸರಕಾರವು ಸರ್ವಪಕ್ಷಗಳ ಸಭೆ ನಡೆಸಿತು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ''ಸದನದಲ್ಲಿ ಆರೋಗ್ಯಕರ ಚರ್ಚೆಗೆ ಸರಕಾರ ಸಿದ್ಧ,'' ಎಂದು ಭರವಸೆ ನೀಡಿದರು.
''ಕಲಾಪ ನಿಯಮಗಳು ಹಾಗೂ ಪ್ರಕ್ರಿಯೆಗಳ ಅನ್ವಯ ಸಂಸತ್ತಿನಲ್ಲಿ ಆರೋಗ್ಯಕರ ಮತ್ತು ಅರ್ಥಪೂರ್ಣ ಚರ್ಚೆಗೆ ಸರಕಾರ ಸಿದ್ಧವಿದೆ. ಪ್ರತಿಪಕ್ಷಗಳು ಅರ್ಥಪೂರ್ಣ ಕಲಾಪ ನಡೆಸಲು ಸಹಕರಿಸಬೇಕು,'' ಎಂದು ಕೋರಿದರು.
"ಲೋಕಸಭೆಯಲ್ಲಿ ಕಾಂಗ್ರೆಸ್ ಸದನ ನಾಯಕ ಅಧೀರ್ ರಂಜನ್ ಚೌಧರಿ ಸೇರಿ ಟಿಎಂಸಿ, ಡಿಎಂಕೆ, ಬಿಎಸ್‌ಪಿ ಸೇರಿ 33 ಪಕ್ಷಗಳ 40 ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು,'' ಎಂದು ಸಭೆ ಬಳಿಕ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು.
ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ನಿರ್ಧಾರ ಶತಾಯಗತಾಯ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಪ್ರತಿಪಕ್ಷಗಳು ನಿರ್ಧರಿಸಿದ್ದು, ಸಂಸತ್ತಿನ ಉಭಯ ಸದನಗಳಲ್ಲಿ ರೈತರ ಸಮಸ್ಯೆಗಳ ಕುರಿತು ನಿಲುವಳಿ ಮಂಡಿಸಲು ಮುಂದಾಗಿವೆ. ಸರ್ವಪಕ್ಷ ಸಭೆ ಬಳಿಕ ಪ್ರತಿಪಕ್ಷಗಳು ಪ್ರತ್ಯೇಕವಾಗಿ ಸಭೆ ನಡೆಸಿದ ಬಳಿಕ ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಕ್ಷ (ಆರ್‌ಎಸ್‌ಪಿ) ನಾಯಕ ಎನ್.ಕೆ.ಪ್ರೇಮಚಂದ್ರನ್ ಮಾಹಿತಿ ನೀಡಿದ್ದು, ''ಸಂಸತ್ತಿನ ಉಭಯ ಸದನಗಳಲ್ಲಿ ರೈತರ ಸಮಸ್ಯೆಗಳ ಕುರಿತು ನಿಲುವಳಿ ಸೂಚನೆ ಮಂಡಿಸಲಾಗುವುದು,'' ಎಂದು ತಿಳಿಸಿದ್ದಾರೆ.
''ಕೃಷಿ ಕಾಯಿದೆಗಳ ವಿರುದ್ಧ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆ ವಿಷಯಗಳೂ ಇವೆ. ಇವೆಲ್ಲವುಗಳ ಕುರಿತು ಸಂಸತ್ತಿನಲ್ಲಿ ಪ್ರತಿಪಕ್ಷಗಳು ಧ್ವನಿಯೆತ್ತಲಿವೆ,'' ಎಂದು ಹೇಳಿದ್ದಾರೆ.