ಅಮರೀಂದರ್‌ ಸಿಂಗ್‌ ವಿರೋಧದ ನಡುವೆಯೇ ಸಿಧುಗೆ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ

ಸಂಸದರು ಮತ್ತು ಶಾಸಕರ ಅಸಮಾಧಾನದ ನಡುವೆಯೂ ಶಾಸಕ ನವಜೋತ್‌ ಸಿಂಗ್‌ ಸಿಧು ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಿದೆ.

ಅಮರೀಂದರ್‌ ಸಿಂಗ್‌ ವಿರೋಧದ ನಡುವೆಯೇ ಸಿಧುಗೆ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ
Linkup
ಚಂಡೀಗಢ: ಸಂಸದರು ಮತ್ತು ಶಾಸಕರ ಅಸಮಾಧಾನದ ನಡುವೆಯೂ ಶಾಸಕ ಅವರನ್ನು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಕ್ಯಾ. ಅಮರೀಂದರ್‌ ಸಿಂಗ್‌ ಮತ್ತು ಸಿಧು ನಡುವಿನ ಸಂಘರ್ಷ ಕೊನೆಗಾಣಿಸುವ ಪ್ರಯತ್ನವನ್ನು ಹೈಕಮಾಂಡ್‌ ಮಾಡಿದೆ. ಸಿಧು ನೇಮಕ ಕುರಿತು ಭಾನುವಾರ ರಾತ್ರಿ ಎಐಸಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಸಿಧು ಜತೆಗೆ ನಾಲ್ವರು ಕಾರ್ಯಾಧ್ಯಕ್ಷರನ್ನೂ ನೇಮಕ ಮಾಡಲಾಗಿದೆ. ಸಂಗತ್‌ ಸಿಂಗ್‌ ಜಿಲ್ಜಿಯಾನ್‌, ಸುಖ್ವಿಂದರ್‌ ಸಿಂಗ್‌ ದನ್ನಿ, ಪವನ್‌ ಗೋಯಲ್‌ ಮತ್ತು ಕುಜಿತ್‌ ಸಿಂಗ್‌ ನಗ್ರಾ ನೂತನ ಕಾರ್ಯಾಧ್ಯಕ್ಷರು. ಇವರಲ್ಲಿ ದಲಿತ ಸಿಖ್‌ ಆಗಿರುವ ಸುಖ್ವಿಂದರ್‌ ಅವರು ರಾಹುಲ್‌ ಗಾಂಧಿಯವರ ಆಯ್ಕೆಯಾಗಿದ್ದಾರೆ. ಸಂಗತ್‌ ಸಿಂಗ್‌ ಹಿಂದುಳಿದ ವರ್ಗಕ್ಕೆ ಸೇರಿದ್ದರೆ, ನಗ್ರಾ ಅವರು ಜಾಟ್‌ ಸಿಖ್‌ ಸಮುದಾಯಕ್ಕೆ ಸೇರಿದವರು. ಗೋಯಲ್‌ ಅವರು ಹಿಂದೂ. ಭೇಟಿಗೆ ಸಿಗದ ಅವಕಾಶಪಂಜಾಬ್‌ನ ಕಾಂಗ್ರೆಸ್‌ ಸಂಸದರು ರಾಜ್ಯಸಭೆ ಸದಸ್ಯ ಪ್ರತಾಪ್‌ ಸಿಂಗ್‌ ಬಾಜ್ವಾ ಅವರ ಹೊಸದಿಲ್ಲಿ ನಿವಾಸದಲ್ಲಿ ಭಾನುವಾರ ಸಭೆ ನಡೆಸಿ, ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಸಿಧು ಅವರನ್ನು ನೇಮಕ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂಬಂಧ ಸೋನಿಯಾ ಗಾಂಧಿ ಅವರನ್ನೇ ಖುದ್ದಾಗಿ ಭೇಟಿಯಾಗಿ ಮನವಿ ಮಾಡಲೂ ಸಂಸದರು ತೀರ್ಮಾನಿಸಿದ್ದರು. ಸಂಸದರ ಭೇಟಿಗೆ ಸೋನಿಯಾ ಅವಕಾಶವನ್ನೇ ನೀಡಲಿಲ್ಲ. ಇನ್ನೊಂದೆಡೆ, ಶಾಸಕ ಸುಖ್‌ಪಾಲ್‌ ಖೈರಾ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಶಾಸಕರು ಪಕ್ಷದ ವರಿಷ್ಠರಿಗೆ ಪತ್ರ ಬರೆದು ಸಿಧು ವಿರುದ್ಧ ಆಕ್ರೋಶ ಹೊರಹಾಕಿದ್ದಲ್ಲದೇ, ಸಿಎಂ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಕ್ಷಮೆ ಕೋರಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ. ಖರ್ಗೆ, ರಾವತ್‌ ಸೂತ್ರ ಮುಖ್ಯಮಂತ್ರಿ ಅಮರೀಂದರ್‌ ಮತ್ತು ಮಾಜಿ ಸಚಿವ ಸಿಧು ನಡುವಿನ ಎರಡು ವರ್ಷಗಳ 'ಜಗಳ' ಕೊನೆಗಾಣಿಸುವುದು ಹೈಕಮಾಂಡ್‌ಗೆ ಸವಾಲಿನ ಕೆಲಸವಾಗಿತ್ತು. ಖುದ್ದು ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರೇ ಅಮರೀಂದರ್‌, ಸಿಧು ಇಬ್ಬರ ಜತೆಯೂ ಮಾತುಕತೆ ನಡೆಸಿದ್ದೂ ಫಲ ನೀಡಿರಲಿಲ್ಲ. ಅಂತಿಮವಾಗಿ ಪಂಜಾಬ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಧಾನ ಸೂತ್ರ ರೂಪಿಸುವ ಹೊಣೆಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಹಿಸಿದ್ದರು. ಸಾಕಷ್ಟು ಚರ್ಚೆ, ಸಮಾಲೋಚನೆ ಬಳಿಕ 'ಮುಖ್ಯಮಂತ್ರಿಯಾಗಿ ಕ್ಯಾ.ಅಮರೀಂದರ್‌ ಸಿಂಗ್‌ ಮುಂದುವರಿಕೆ, ಪಿಸಿಸಿ ಅಧ್ಯಕ್ಷರಾಗಿ ನವಜೋತ್‌ ಸಿಂಗ್‌ ಸಿಧುಗೆ ಮಣೆ' ಎಂಬ ಸೂತ್ರ ರೂಪಿಸಲಾಯಿತು. ಒಲ್ಲದ ಮನಸ್ಸಿನಿಂದಲೇ ಅಮರೀಂದರ್‌ ಅವರು ಪಿಸಿಸಿ ಅಧ್ಯಕ್ಷರಾಗಿ ಸಿಧು ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದರು.