ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಭಿನ್ನಮತೀಯರಿಂದ ಸಭೆ! ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ?

ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಎರಡು ಭಾಗವಾಗಿದೆ. ಭಿನ್ನಮತೀಯ ನಾಯಕರು ದಿಲ್ಲಿಯಲ್ಲಿ ಸಭೆ ಸೇರಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ದಿಲ್ಲಿಯ ಗುಲಾಂ ನಬೀ ಆಜಾದ್‌ ನಿವಾಸದಲ್ಲಿ ಕಪಿಲ್‌ ಸಿಬಲ್‌ ಮತ್ತು ಮನೀಶ್‌ ತಿವಾರಿ ಚರ್ಚೆ ನಡೆಸಿದ್ದಾರೆ.

ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಭಿನ್ನಮತೀಯರಿಂದ ಸಭೆ! ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ?
Linkup
ಹೊಸದಿಲ್ಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ನ ಭಿನ್ನಮತೀಯ ನಾಯಕರು ಹಿರಿಯ ನಾಯಕ ಗುಲಾಂ ನಬೀ ಆಜಾದ್‌ ಅವರ ನಿವಾಸದಲ್ಲಿ ಶುಕ್ರವಾರ ಸಂಜೆ ಮಹತ್ವದ ಚರ್ಚೆ ನಡೆಸಿದ್ದಾರೆ. ಇದರ ನಡುವೆಯೇ ಗಾಂಧಿ ಪರಿವಾರ ಇಲ್ಲದೇ ಕಾಂಗ್ರೆಸ್‌ ಉಳಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಗಾಂಧಿ ಕುಟುಂಬದ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ. ಸೋಲಿನ ಹತಾಷೆಯಲ್ಲಿರುವ ಕಾಂಗ್ರೆಸ್‌ ಈಗ ಎರಡು ಮನೆಯಾಗಿದೆ. ಒಂದು ಬಣ ಗಾಂಧಿ ಪರಿವಾರದ ನಾಯಕತ್ವವನ್ನು ವಿರೋಧಿಸುತ್ತಿದ್ದರೆ, ಮತ್ತೊಂದು ಗಾಂಧಿ ಕುಟುಂಬವನ್ನು ಬೆಂಬಲಿಸುತ್ತಿದೆ. ಇದರ ನಡುವೆಯೇ ಮಾಜಿ ಕೇಂದ್ರ ಸಚಿವರಾದ ಮತ್ತು ಮನೀಶ್‌ ತಿವಾರಿ ದಿಲ್ಲಿಯ ಗುಲಾಂ ನಬೀ ಆಜಾದ್‌ ನಿವಾಸದಲ್ಲಿ ಸಭೆ ಸೇರಿದ್ದರು. ಈ ವೇಳೆ ನಾಯಕತ್ವ ಬದಲಾವಣೆ ಸೇರಿ, ಸೋಲಿನ ಕಾರಣಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪಂಚರಾಜ್ಯಗಳಲ್ಲಿ ಕಳಪೆ ಸಾಧನೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದೆ. ಅದರಲ್ಲೂ ಎರಡು ವರ್ಷಗಳ ಹಿಂದೆ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆ ಬಯಸಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿ-23 ನಾಯಕರು ನಾಯಕತ್ವ ಬದಲಾವಣೆಗೆ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆ ಗುಲಾಂ ನಬೀ ಆಜಾದ್‌, , ಕಪಿಲ್‌ ಸಿಬಲ್‌ ಸೇರಿ ಅನೇಕ ನಾಯಕರು ಸಭೆ ಸೇರಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಕ್ಷದ ಪ್ರಥಮ ಕುಟುಂಬ ಪಕ್ಕಕ್ಕೆ ಸರಿದು ಹೊಸ ನಾಯಕತ್ವಕ್ಕೆ ಅವಕಾಶ ನೀಡುವ ಸಮಯ ಇದಾಗಿದೆ. ಜೊತೆಗೆ ಪಕ್ಷದ ನಾಯಕರಲ್ಲಿ ಸಮನ್ವಯತೆ ಕಾಪಾಡುವುದು, ಪಕ್ಷದ ಕಾರ್ಯಗಳಿಗೆ 24x7 ಸಮಯವನ್ನು ಮೀಸಲಿಡಬೇಕು. ಇಲ್ಲದಿದ್ದರೆ ದೇಶದಲ್ಲಿ ಕಾಂಗ್ರೆಸ್‌ ಪುನರುಜ್ಜೀವನಗೊಳ್ಳುವುದು ಕಷ್ಟಸಾಧ್ಯ ಎಂದಿದ್ದಾರೆ. ಸೋಲಿನ ಬೆನ್ನಲ್ಲೇ ಪಕ್ಷದ ನಾಯಕತ್ವವನ್ನು ಸಚಿನ್‌ ಪೈಲಟ್‌, ಮನೀಷ್‌ ತಿವಾರಿ ಹಾಗೂ ಶಶಿ ತರೂರ್‌ರಂತಹ ನಾಯಕರಿಗೆ ವಹಿಸಬೇಕು ಎಂಬ ಕೂಗು ಬಲವಾಗಿ ಕೇಳುತ್ತಿದೆ. ಇದರ ನಡುವೆಯೇ ಗಾಂಧಿ ಮನೆತನವನ್ನು ಬೆಂಬಲಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಗಾಂಧಿ ಪರಿವಾರ ಇಲ್ಲದೇ ಕಾಂಗ್ರೆಸ್‌ ಪಕ್ಷ ಉಳಿಯುವುದಿಲ್ಲ ಎಂದಿದ್ದಾರೆ. ಅಧಿಕಾರದ ಆಸೆ ಇರುವವರು ಪಕ್ಷ ಬಿಟ್ಟು ಹೋಗಬಹುದು. ಅಧಿಕಾರದ ಆಸೆ ಇಲ್ಲದ ನಾವುಗಳು ಗಾಂಧಿ ಪರಿವಾರದ ಜೊತೆಗೆ ಇದ್ದು ಪಕ್ಷವನ್ನು ಕಟ್ಟುತ್ತೇವೆ, ಬೆಳೆಸುತ್ತೇವೆ ಎಂದು ಗಾಂಧಿ ಪರಿವಾರದ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಗುರುವಾರ ಪ್ರಕಟವಾದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಪ್ರದರ್ಶನ ತೋರಿತ್ತು. ತಾನು ಅಧಿಕಾರದಲ್ಲಿದ್ದ ಪಂಜಾಬ್‌ನಲ್ಲಿ ಆಪ್‌ ಎದುರು ಮಣ್ಣುಮುಕ್ಕಿದ್ದರೆ, ಚೇತರಿಕೆ ಕಾಣಬೇಕಿದ್ದ ಉತ್ತರಾಖಂಡ್‌, ಗೋವಾ, ಮಣಿಪುರ ಚುನಾವಣೆಗಳಲ್ಲಿ ಮತ್ತಷ್ಟು ದುರ್ಬಲವಾಗಿದೆ. ಇನ್ನು, ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಅಬ್ಬರದ ಪ್ರಚಾರದ ನಡುವೆಯೂ ಕೇವಲ ಎರಡು ಸ್ಥಾನಗಳಿಗೆ ಮಾತ್ರ ಕಾಂಗ್ರೆಸ್‌ ತೃಪ್ತಿಪಟ್ಟಿದೆ.