ಕೊರೊನಾ ಲಸಿಕೆ ಡೋಸ್‌ಗಳ ಮಿಶ್ರಣ ಸದ್ಯಕ್ಕಿಲ್ಲ - ಕೇಂದ್ರ ಸ್ಪಷ್ಟನೆ

ಕೋವಿಶೀಲ್ಡ್‌ನ ಎರಡು ಡೋಸ್‌ಗಳು ಮುಂದುವರಿಯಲಿವೆ ಮತ್ತು ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಲಸಿಕೆಗಳ ಡೋಸ್‌ ಮಿಶ್ರಣ ಮಾಡುವುದಿಲ್ಲ ಎಂದು ಸರಕಾರದ ಕೊರೊನಾ ಸಲಹೆಗಾರ ಡಾ.ವಿ.ಕೆ. ಪೌಲ್‌ ಹೇಳಿದ್ದಾರೆ.

ಕೊರೊನಾ ಲಸಿಕೆ ಡೋಸ್‌ಗಳ ಮಿಶ್ರಣ ಸದ್ಯಕ್ಕಿಲ್ಲ - ಕೇಂದ್ರ ಸ್ಪಷ್ಟನೆ
Linkup
ಹೊಸದಿಲ್ಲಿ: ವೈಜ್ಞಾನಿಕವಾಗಿ ಸಾಬೀತಾಗುವವರೆಗೆ, ಒಂದೇ ಡೋಸ್‌ ಲಸಿಕೆ ನೀಡುವುದು ಹಾಗೂ ಲಸಿಕೆಗಳ ಡೋಸ್‌ಗಳನ್ನು ಮಿಶ್ರಣ ಮಾಡುವ ಉದ್ದೇಶ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಸ್ಪಷ್ಟನೆ ನೀಡಿದೆ. “ಕೋವಿಶೀಲ್ಡ್‌ನ ಎರಡು ಡೋಸ್‌ ಮುಂದುವರಿಯಲಿದೆ ಮತ್ತು ಇದರ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು ಲಸಿಕೆಗಳ ಡೋಸ್‌ ಮಿಶ್ರಣ ವಿಚಾರದಲ್ಲಿ ವೈಜ್ಞಾನಿಕವಾಗಿ ಇದು ಸಾಬೀತಾಗುವವರೆಗೆ, ಈ ರೀತಿ ಮಿಶ್ರಣ ಮಾಡುವ ಪ್ರಶ್ನೆಯೇ ಇಲ್ಲ,” ಎಂದು ಸರಕಾರದ ಕೊರೊನಾ ಸಲಹೆಗಾರ ಡಾ.ವಿ.ಕೆ. ಪೌಲ್‌ ಹೇಳಿದ್ದಾರೆ. ದೇಶದಲ್ಲಿ ಲಸಿಕೆ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಒಂದೇ ಡೋಸ್‌ ಲಸಿಕೆ ನೀಡಲು ಸರಕಾರ ಮುಂದಾಗಲಿದೆ. ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಬೆನ್ನಿಗೆ ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇನ್ನು ಸರಕಾರ ಲಸಿಕೆಗಳ ಡೋಸ್‌ಗಳನ್ನು ಮಿಕ್ಸ್‌ ಮಾಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಅಧ್ಯಯನ ನಡೆಸಲಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಸಾಬೀತಾಗದೆ ಲಸಿಕೆಗಳನ್ನು ಮಿಶ್ರಣ ಮಾಡುವುದಿಲ್ಲ ಎಂದು ಸರಕಾರ ಭರವಸೆ ನೀಡಿದೆ.