ಪಿಪಿಪಿ ಪುರುಷೋತ್ತಮ 'ಅಶ್ವಿನಿ ವೈಷ್ಣವ್‌'ಗೆ ಮೋದಿ ಸಂಪುಟದಲ್ಲಿ ದೊಡ್ಡ ಹೊಣೆ

ನರೇಂದ್ರ ಮೋದಿ ಸಂಪುಟಕ್ಕೆ ಸೇರಿದವರಲ್ಲಿ 'ಅಶ್ವಿನಿ ವೈಷ್ಣವ್‌' ಕೂಡ ಒಬ್ಬರು. ಐಎಎಸ್‌ ಅಧಿಕಾರಿ, ಕಾರ್ಪೊರೇಟ್‌ ಉದ್ಯೋಗಿಯಾಗಿದ್ದ ಇವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಇದೀಗ ಮಹತ್ವದ ಖಾತೆ ಪಡೆದು ಅನೇಕರ ಹುಬ್ಬೇರುವಂತೆ ಮಾಡಿದ್ದಾರೆ.

ಪಿಪಿಪಿ ಪುರುಷೋತ್ತಮ 'ಅಶ್ವಿನಿ ವೈಷ್ಣವ್‌'ಗೆ ಮೋದಿ ಸಂಪುಟದಲ್ಲಿ ದೊಡ್ಡ ಹೊಣೆ
Linkup
ಹೊಸದಿಲ್ಲಿ: ನರೇಂದ್ರ ಮೋದಿ ಬುಧವಾರ ಸಂಪುಟ ಮರುರಚನೆ ಮಾಡಿದಾಗ ಸಚಿವರ ಪಟ್ಟಿಲ್ಲಿ ಸೇರ್ಪಡೆಯಾದ ಅಚ್ಚರಿಯ ಹೆಸರು 'ಅಶ್ವಿನಿ ವೈಷ್ಣವ್‌'. ಐಎಎಸ್‌ ಅಧಿಕಾರಿ, ಕಾರ್ಪೊರೇಟ್‌ ಉದ್ಯೋಗಿಯಾಗಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ವೈಷ್ಣವ್‌ ಹೆಸರು ಇದುವರೆಗೆ ಅಪರಿಚಿತವಾಗಿತ್ತು. ಬುಧವಾರ ಕೇಂದ್ರ ಸಂಪುಟ ಸೇರುವ ಮೂಲಕ ದಿಢೀರ್‌ ಮುನ್ನೆಲೆಗೆ ಬಂದಿದ್ದಾರೆ. ರೈಲ್ವೆ, ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನದಂತಹ ಮಹತ್ವದ ಖಾತೆಗಳನ್ನು ಗಿಟ್ಟಿಸುವುದರೊಂದಿಗೆ ಅನೇಕರ ಹುಬ್ಬೇರುವಂತೆ ಮಾಡಿದ್ದಾರೆ. ಬಿಜೆಪಿ ಸಿದ್ಧಾಂತದ ಬಗ್ಗೆ ಒಲವು ಹೊಂದಿದ್ದ 50 ವರ್ಷದ ವೈಷ್ಣವ್‌, ಸ್ವಯಂ ನಿವೃತ್ತಿ ಪಡೆದು ಸಕ್ರಿಯ ರಾಜಕಾರಣ ಪ್ರವೇಶಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮೇಧಾವಿ ಎನಿಸಿರುವ ಅವರಿಗೆ ಅರ್ಹತೆಗೆ ತಕ್ಕ ಅಧಿಕಾರ ಒಲಿದು ಬಂದಿದೆ. ರಾಜಕೀಯ ಅಧಿಕಾರ ಅವರ ಪಾಲಿಗೆ ಇದು ಹೊಸತು. ಈಗ ನೇರವಾಗಿ ದೊಡ್ಡ ಜವಾಬ್ದಾರಿಗೆ ಹೆಗಲು ನೀಡಿದ್ದಾರೆ. ಅವರ ಸವಾಲಿನ ಹೊಸ ಯಾತ್ರೆ ಈಗ ಶುರುವಾಗಿದೆ. ಬಹುಮುಖ ಪ್ರತಿಭೆ: ಬಿಇಯಲ್ಲಿ ಬಂಗಾರದ ಪದಕ, ಕಾನ್ಪುರ ಐಐಟಿಯಿಂದ ಎಂ.ಟೆಕ್‌ ಪದವಿ, ಪೆನ್ಸಿಲ್ವೇನಿಯಾದ ವಾರ್ಟನ್‌ ಸ್ಕೂಲ್‌ನಿಂದ ಎಂಬಿಎ ಡಿಗ್ರಿ ಪಡೆದಿರುವ ಈ ಪ್ರತಿಭಾವಂತ ಸಚಿವ, ಮೂಲ ಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ () ಮಾದರಿ ಅನುಷ್ಠಾನಗೊಳಿಸುವಲ್ಲಿ ವಿಶೇಷ ಕೌಶಲ ಸಂಪಾದಿಸಿದ್ದಾರೆ. 'ಪಿಪಿಪಿ ಪುರುಷೋತ್ತಮ' ಎಂದೇ ಅವರನ್ನು ಗುರುತಿಸಲಾಗುತ್ತದೆ. ಅಮೆರಿಕದಲ್ಲಿ ಕಲಿತು, ಅಲ್ಲಿಯೇ ಕೆಲ ಕಾಲ ಕೆಲಸ ಮಾಡಿ ಭಾರತಕ್ಕೆ ವಾಪಸಾದ ವೈಷ್ಣವ್‌, ಇಲ್ಲಿಯೂ ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದರು. ಸಿಮೆನ್ಸ್‌ ಮತ್ತು ಜನರಲ್‌ ಎಲೆಕ್ಟ್ರಿಕ್‌ನಂತಹ ಕಂಪನಿಗಳು ಅವರ ಪ್ರತಿಭೆ ಫಲ ಪಡೆದಿವೆ. 2012ರಲ್ಲಿ ಕಾರ್ಪೊರೇಟ್‌ ದುಡುಮೆ ತೊರೆದ ವೈಷ್ಣವ್‌, ಗುಜರಾತಿನಲ್ಲಿ ಆಟೋಮೋಟಿವ್‌ ಬಿಡಿಭಾಗಗಳನ್ನು ಉತ್ಪಾದಿಸುವ ತಮ್ಮದೇ ಕಂಪನಿ ಆರಂಭಿಸಿ ಯಶಸ್ಸು ಕಂಡರು. ಒಡಿಶಾ ಕೇಡರ್‌ನ 1994ರ ಸಾಲಿನ ಐಎಎಸ್‌ ಅಧಿಕಾರಿಯಾಗಿದ್ದ ವೈಷ್ಣವ್‌, ಒಡಿಶಾ ಚಂಡಮಾರುತ ಸಂತ್ರಸ್ತರ ರಕ್ಷಣೆಗೆ ಅವರು ಕೈಗೊಂಡ ಕ್ರಮಗಳು ಇವತ್ತಿಗೂ ಮಾದರಿ ಎನಿಸಿವೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ವೈಷ್ಣವ್‌, ಹತ್ತಾರು ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿ, ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರ ಮೂಲದ ಈ ಪ್ರತಿಭಾವಂತ 2019ರ ಜೂನ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಒಡಿಶಾದಿಂದ ಮೇಲ್ಮನೆ ಪ್ರವೇಶಿಸಿದ್ದಾರೆ. ಅವರ ಆಯ್ಕೆಯನ್ನು ಬಿಜೆಡಿ ಕೂಡ ಬೆಂಬಲಿಸಿತ್ತು. ಪೋನ್‌ ಕರೆಯಲ್ಲೇ ರಾಜೀನಾಮೆಗೆ ಸೂಚನೆ ಕೇಂದ್ರ ಸಂಪುಟ ಪುನರ್‌ ರಚನೆಗೆ ಕೆಲವು ತಾಸುಗಳ ಮೊದಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾಡಿದ ಹನ್ನೊಂದು ಫೋನ್‌ ಕರೆಗಳು ಹನ್ನೊಂದು ಸಚಿವರ ನಿರ್ಗಮನಕ್ಕೆ ಕಾರಣವಾಗಿವೆ. ರವಿಶಂಕರ್‌ ಪ್ರಸಾದ್‌, ಪ್ರಕಾಶ್‌ ಜಾವಡೇಕರ್‌, ರಮೇಶ್‌ ಪೋಖ್ರಿಯಾಲ್‌, ಡಿ.ವಿ.ಸದಾನಂದ ಗೌಡ, ಡಾ.ಹರ್ಷವರ್ಧನ್‌ ಸೇರಿ 11 ಸಚಿವರು ಬುಧವಾರ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸಿದ್ದರು. ಎರಡನೇ ಅವಧಿಯಲ್ಲಿನ ಎರಡು ವರ್ಷಗಳ ಸಚಿವರ ಸಾಧನೆ ವಿಶ್ಲೇಷಿಸಿದ ಪ್ರಧಾನಿ ಮೋದಿ, ಯಾರನ್ನು ಕೈಬಿಡಬೇಕು ಎನ್ನುವ ನಿರ್ಧಾರ ತೆಗೆದುಕೊಂಡಿದ್ದರು. ಸಂಪುಟ ವಿಸ್ತರಣೆ ದಿನ ನಡ್ಡಾ ಅವರ ಮೂಲಕ ಹನ್ನೊಂದು ಸಚಿವರಿಗೆ ಕರೆ ಮಾಡಿಸಿ, ರಾಜೀನಾಮೆ ನೀಡಲು ಸಿದ್ಧರಾಗಿರುವಂತೆ ಸೂಚನೆ ನೀಡಿದರು. ಯಾವುದೇ ತಕರಾರು ಇಲ್ಲದೆ ಸಂಜೆ ಹೊತ್ತಿಗೆ ಒಬ್ಬೊಬ್ಬರಾಗಿ ರಾಜೀನಾಮೆ ನೀಡಿ ನಿರ್ಗಮಿಸಿದರು. ಸಂಪುಟ ದರ್ಜೆಯ ವರು ಸಚಿವರು, ಒಬ್ಬರು ಸಹಾಯಕ (ಸ್ವತಂತ್ರ ನಿರ್ವಹಣೆ) ಹಾಗೂ ಐವರು ಸಹಾಯಕ ಸಚಿವರು ಬುಧವಾರ ರಾಜೀನಾಮೆ ನೀಡಿದ್ದಾರೆ.