B.1.617 ಕೊರೊನಾ ವೈರಸ್ ತಳಿಯ ಹೆಸರು 'ಭಾರತೀಯ ರೂಪಾಂತರ' ಅಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಭಾರತದಲ್ಲಿ ವ್ಯಾಪಕವಾಗಿ ಪತ್ತೆಯಾಗುತ್ತಿರುವ ಕೊರೊನಾ ವೈರಸ್ ರೂಪಾಂತರ B.1.617 ತಳಿಗೆ 'ಭಾರತೀಯ ರೂಪಾಂತರ' ಎಂದು ಕರೆಯುವುದಕ್ಕೆ ಯಾವುದೇ ಸೂಕ್ತ ಆಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

B.1.617 ಕೊರೊನಾ ವೈರಸ್ ತಳಿಯ ಹೆಸರು 'ಭಾರತೀಯ ರೂಪಾಂತರ' ಅಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
Linkup
ಹೊಸದಿಲ್ಲಿ: ದೇಶದಲ್ಲಿ ಹೆಚ್ಚಾಗಿ ಹರಡಿರುವ B.1.617 ರೂಪಾಂತರವನ್ನು 'ಭಾರತದ ' ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದೆ. ಡಬ್ಲ್ಯೂಎಚ್‌ಒದ ವರದಿಯಲ್ಲಿ 'ಭಾರತೀಯ' ಎಂಬ ಪದವನ್ನು ಬಳಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. 'ಕೆಲವು ಮಾಧ್ಯಮಗಳು B.1.167 ಅನ್ನು ಜಾಗತಿಕ ಆತಂಕದ ರೂಪಾಂತರ ಎಂದು ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿರುವ ಸುದ್ದಿಯನ್ನು ಪ್ರಕಟಿಸಿವೆ. ಅವುಗಳಲ್ಲಿ ಕೆಲವು ವರದಿಗಳಲ್ಲಿ B.1.167 ಕೊರೊನಾ ವೈರಸ್ ರೂಪಾಂತರವನ್ನು 'ಭಾರತೀಯ ರೂಪಾಂತರ' ಎಂಬುದಾಗಿ ವ್ಯಾಖ್ಯಾನಿಸಿವೆ' ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ಅಸಮಾಧಾನ ವ್ಯಕ್ತಪಡಿಸಿದೆ. 'ಭಾರತೀಯ ರೂಪಾಂತರ' ಎಂಬ ಪದ ಬಳಸುವುದಕ್ಕೆ ಯಾವುದೇ ಮೂಲವಿಲ್ಲ ಮತ್ತು ಇದು ಆಧಾರರಹಿತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ವೈರಸ್ ಅಥವಾ ಅದರ ರೂಪಾಂತರವನ್ನು ಅದು ಮೊದಲು ವರದಿಯಾದ ದೇಶದ ಹೆಸರಿನೊಂದಿಗೆ ಗುರುತಿಸುವುದಿಲ್ಲ. ನಾವು ಅವುಗಳ ವೈಜ್ಞಾನಿಕ ಹೆಸರಿನೊಂದಿಗೆ ಉಲ್ಲೇಖಿಸುತ್ತೇವೆ ಮತ್ತು ಎಲ್ಲರೂ ಇದನ್ನು ಅನುಸರಿಸುವಂತೆ ಕೋರುತ್ತೇವೆ ಎಂದು ಡಬ್ಲ್ಯೂಎಚ್‌ಒ ಆಗ್ನೇಯ ಏಷ್ಯಾ ವಿಭಾಗ ಟ್ವೀಟ್ ಮಾಡಿದೆ.