ಸ್ಯಾಂಡಲ್‌ವುಡ್‌ನ 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ಮುಂದಾದ ನಟ ಉಪೇಂದ್ರ!

ಕೊರೊನಾದಿಂದಾಗಿ ಕನ್ನಡ ಚಿತ್ರರಂಗ ತತ್ತರಿಸಿ ಹೋಗಿದೆ. ಚಿತ್ರರಂಗದವರು ಕಳೆದ ವರ್ಷ ಅನುಭವಿಸಿದ್ದ ಕಷ್ಟಗಳನ್ನು ಮರೆತು, ಚೇತರಿಸಿಕೊಳ್ಳುವ ಸಮಯಕ್ಕೆ 2ನೇ ಅಲೆ ರಣಕೇಕೆ ಹಾಕಿದೆ. ಇದೀಗ ಕಷ್ಟದಲ್ಲಿರುವ ಚಿತ್ರರಂಗದ ಕೆಲವು ಕುಟುಂಬಗಳಿಗೆ ನಟ ಉಪೇಂದ್ರ ನೆರವು ನೀಡಲು ಮುಂದಾಗಿದ್ದಾರೆ.

ಸ್ಯಾಂಡಲ್‌ವುಡ್‌ನ 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ಮುಂದಾದ ನಟ ಉಪೇಂದ್ರ!
Linkup
ರಾಜ್ಯಾದ್ಯಂತ ಪುನಃ ಕೊರೊನಾ ತನ್ನ ರಣಕೇಕೆ ಮುಂದುವರಿಸಿದೆ. ಮೊದಲ ಅಲೆಗೆ ತತ್ತರಿಸಿ ಹೋಗಿದ್ದ , ಕೆಲ ತಿಂಗಳ ಹಿಂದೆಯಷ್ಟೇ ಚೇತರಿಸಿಕೊಳ್ಳುತ್ತಿತ್ತು. ಅಷ್ಟರೊಳಗೆ ಈಗ ಪುನಃ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಚಿತ್ರರಂಗವನ್ನೇ ನಂಬಿಕೊಂಡಿದ್ದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದೀಗ ಅಂತಹ ಕುಟುಂಬಗಳಿಗೆ ನೆರವಿನ ಹಸ್ತ ಚಾಚಲು ರಿಯಲ್ ಸ್ಟಾರ್ ಮುಂದಾಗಿದ್ದಾರೆ. ಕನ್ನಡ ಚಿತ್ರರಂಗದ ಕಾರ್ಮಿಕರ ಒಕ್ಕೂಟದ ಸುಮಾರು 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ಅವರು ಮುಂದಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 3 ಸಾವಿರ ಕುಟುಂಬಕ್ಕೆ ದಿನಸಿ ಕಿಟ್ 'ಕನ್ನಡ ಚಲನಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಜನಪರ ಕಾಳಜಿಯನ್ನು ಮೆಚ್ಚಿ ಅನೇಕರು ಧನ ಸಹಾಯ ಮಾಡಲು ಮುಂದಾಗಿದ್ದಾರೆ. ಆ ಹಣವನ್ನು ಅಗತ್ಯವಿರುವವರಿಗೆ ನೀಡುವುದಕ್ಕೆ ಉಪೇಂದ್ರ ಮುಂದಾಗಿದ್ದಾರೆ. ಆ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 'ಡಾ. ಗಿರೀಶ್‌ 25 ಸಾವಿರ ರೂ. ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಆ ಹಣದಿಂದ ಗುಡಿಸಲು ನಿವಾಸಿಗಳಿಗೆ ದಿನಸಿ ಕಿಟ್ ವಿತರಿಸಲು ಅಪೇಕ್ಷೆ ಪಟ್ಟಿದ್ದಾರೆ. ಇದನ್ನು ವಿತರಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ' ಎಂದು ಉಪ್ಪಿ ತಿಳಿಸಿದ್ದಾರೆ. 'ದಾವಣಗೆರೆ ಮಾಜಿ ಶಾಸಕರು ಯಜಮಾನ್ ಮೋತಿ ವೀರಣ್ಣ ಅವರ ಪುತ್ರ ಯಜಮಾನ್ ಮೋತಿ ರಾಜೇಂದ್ರ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಆ ಹಣವನ್ನು ನಮ್ಮ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ನೀಡಲು ಸೂಚಿಸಿದ್ದಾರೆ ಹಾಗೂ ಎಸ್. ಕೆ. ಸ್ಟೀಲ್ಸ್ ಕಂಪನಿಯ ವತಿಯಿಂದ 5 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಈ ಹಣವನ್ನು ಪ್ರತ್ಯೇಕವಾಗಿ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಕಿರುತೆರೆ ಕಲಾವಿದರು, ಕಾರ್ಮಿಕರಿಗೆ ನೀಡಲು ಇಚ್ಛಿಸುತ್ತೇನೆ. ಸದ್ಯದಲ್ಲೇ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುತ್ತೇನೆ' ಎಂದು ಉಪೇಂದ್ರ ತಿಳಿಸಿದ್ದಾರೆ.