
ನಟ ಅವರು ನಟ ಸಾಯಿ ಧರಂ ತೇಜ ಅಭಿನಯದ 'ರಿಪಬ್ಲಿಕ್' ಸಿನಿಮಾ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಆಂಧ್ರ ಪ್ರದೇಶದ ಸರ್ಕಾರದ ವಿರುದ್ಧ ತಿರುಗಿಬಿದ್ದರು. ಆನಂತರ ತೆಲುಗು ಫಿಲ್ಮ್ ಛೇಂಬರ್ಸ್ ಕೂಡ ಈ ಕುರಿತು ಮಾತನಾಡಿ, "ಒಬ್ಬರ ಅಭಿಪ್ರಾಯ ಇಡೀ ಚಿತ್ರರಂಗದ ಅಭಿಪ್ರಾಯವಲ್ಲ" ಎಂದು ಹೇಳುವುದರ ಮೂಲಕ ಪವನ್ ಕಲ್ಯಾಣ್ ಹೇಳಿಕೆಗೆ ತಮ್ಮ ಒಮ್ಮತವಿಲ್ಲ ಎಂದು ಅಧಿಕೃತಪಡಿಸಿತು. ಈಗ 'ಮೆಗಾಸ್ಟಾರ್' ಅವರು ಪವನ್ ಕಲ್ಯಾಣ್ ಮಾತು ಕೇಳಿ ಬೇಸರ ಮಾಡಿಕೊಂಡಿದ್ದಾರಂತೆ.
ಆಂಧ್ರ ಪ್ರದೇಶದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಅನೇಕ ನಿರ್ಮಾಪಕರು ಭೇಟಿ ಮಾಡುತ್ತಿದ್ದಾರೆ. ಈ ಮೂಲಕ ತಾವು ಪವನ್ ಕಲ್ಯಾಣ್ ಮಾತನ್ನು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಂಧ್ರ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಪವನ್ ಕಲ್ಯಾಣ್ ಅವರು ಯೋಚನೆ ಮಾಡಿದಂತೆ , ನಟ ಚಿರಂಜೀವಿ ಸೇರಿ ಪೂರ್ಣ ಚಿತ್ರರಂಗ ಯೋಚಿಸುವುದಿಲ್ಲ. ಪವನ್ ಮಾತನ್ನು ಕೇಳಿ ಚಿರಂಜೀವಿ ಬೇಸರ ಮಾಡಿಕೊಂಡಿದ್ದಾರೆ, ಆ ರೀತಿ ಪವನ್ ಮಾತನಾಡಬಾರದಿತ್ತು ಎಂದು ಚಿರಂಜೀವಿ ಅಭಿಪ್ರಾಯ ಪಟ್ಟಿದ್ದಾರಂತೆ. ಗಾಡ್ ಫಾದರ್ ಸಿನಿಮಾಕ್ಕೋಸ್ಕರ ಅವರು ಊಟಿಯಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಆದಷ್ಟು ಬೇಗ ಭೇಟಿಯಾಗೋಣ ಎಂದು ಕೂಡ ಚಿರಂಜೀವಿ ಹೇಳಿದ್ದಾರಂತೆ" ಎಂದು ಹೇಳಿದ್ದಾರೆ.
ಕೆಲ ನಿರ್ಮಾಪಕರು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ, ಸರ್ಕಾರದ ಟಿಕೆಟ್ ಪಾಲಿಸಿ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರಂತೆ. ಈ ಕುರಿತು ಮಾತನಾಡಿರುವ ಪವನ್ "ಸರ್ಕಾರ ಹೊರಡಿಸಿರುವ ಆನ್‌ಲೈನ್ ಟಿಕೆಟ್ ಪಾಲಿಸಿ ವಿಚಾರದಲ್ಲಿ ನಮ್ಮ ಹತ್ತಿರ ಏನೂ ಮಾಡಲಾಗುತ್ತಿಲ್ಲ. ಆನ್‌ಲೈನ್ ಟಿಕೆಟ್ ಪದ್ಧತಿಯನ್ನು ಅವರು ಒಪ್ಪುತ್ತಿಲ್ಲ. ನಾನು ಮಾತನಾಡಿದ ಹಾಗೆ ನಿರ್ಮಾಪಕರೆಲ್ಲ ಸಾರ್ವಜನಿಕವಾಗಿ ಮಾತನಾಡಲು ರೆಡಿಯಿಲ್ಲ. ಸರ್ಕಾರದ ಜೊತೆ ಚೆನ್ನಾಗಿರಬೇಕು ಎಂಬ ಅವರ ಕಾಳಜಿಯನ್ನು ನಾನು ಅರ್ಥ ಮಾಡಿಕೊಳ್ತೀನಿ" ಎಂದು ಹೇಳಿದ್ದರು.
ನಿರ್ಮಾಪಕ ದಿಲ್ ರಾಜು ಮಾತನಾಡಿ, "ಕೊರೊನಾದಿಂದ ಚಿತ್ರರಂಗ ಸಾಕಷ್ಟು ಕಷ್ಟಪಡ್ತಿದೆ. ಆಂಧ್ರ ಪ್ರದೇಶದ ಸರ್ಕಾರದ ಜೊತೆ ನಮ್ಮ ಸಮಸ್ಯೆಯನ್ನು ನಾವು ಮಾತನಾಡಿದ್ದೇವೆ. ಸರ್ಕಾರ ನಮಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಚಿತ್ರರಂಗವನ್ನು ರಾಜಕೀಯದಲ್ಲಿ ಎಳೆಯಬೇಡಿ" ಎಂದು ಹೇಳಿದ್ದಾರೆ.
ಆಂಧ್ರ ಸರ್ಕಾರವು ರೈಲ್ವೆ ಆನ್‌ಲೈನ್ ಟಿಕೆಟ್ ಮಾದರಿಯಲ್ಲಿ ಸಿನಿಮಾ ಟಿಕೆಟ್‌ಗಾಗಿ ಒಂದು ಪೋರ್ಟಲ್ ಸೃಷ್ಟಿ ಮಾಡಿ, ಆ ಮೂಲಕ ಸಿನಿಮಾ ಟಿಕೆಟ್ ಮಾರುವುದಂತೆ. ಈ ವಿಚಾರವಾಗಿ ಚಿತ್ರರಂಗದಲ್ಲಿ ಎರಡು ಅಭಿಪ್ರಾಯ ಸೃಷ್ಟಿಯಾಗಿದೆ. ಆ ಮೂಲಕ ತೆಲುಗು ಚಿತ್ರರಂಗ ಇಬ್ಭಾಗವಾದಂತಿದೆ. ನಟರಾದ ನಾನಿ, ಕಾರ್ತಿಕೇಯ, ಸಂಪೂರ್ಣೇಶ್ ಬಾಬು, ನಿರ್ದೇಶಕ ದೇವ ಕಟ್ಟ ಅವರು ಪವನ್ ಅವರನ್ನು ಬೆಂಬಲಿಸಲಿದ್ದಾರೆ. ತೆಲುಗು ಫಿಲ್ಮ್ ಛೇಂಬರ್ಸ್ ಮಾತ್ರ ತಾವು ಪವನ್ ಕಲ್ಯಾಣ್ ಮಾತನ್ನು ಒಪ್ಪುತ್ತಿಲ್ಲ ಎಂದು ಈಗಾಗಲೇ ಅಧಿಕೃತವಾಗಿ ಹೇಳಿಕೆ ನೀಡಿದೆ.