ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲಿಯೇ ಸಂತಾಪ ಸೂಚಿಸಿದ ಅಮೆರಿಕ ರಾಯಭಾರಿ ಕಚೇರಿ

ನಟ ಸಂಚಾರಿ ವಿಜಯ್ ಅವರು 38ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಸೇರಿದಂತೆ ಕನ್ನಡ ಜನತೆ ಕಂಬನಿ ಮಿಡಿದಿದೆ. ಅಂತೆಯೇ ಅಮೆರಿಕ ರಾಯಭಾರಿ ಕಚೇರಿ ಕೂಡ ಕನ್ನಡದಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ.

ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲಿಯೇ ಸಂತಾಪ ಸೂಚಿಸಿದ ಅಮೆರಿಕ ರಾಯಭಾರಿ ಕಚೇರಿ
Linkup
ನಟ ಅವರ ನಿಧನಕ್ಕೆ ಸಾಕಷ್ಟು ಜನ ಗಣ್ಯರು, ಸೆಲೆಬ್ರಿಟಿಗಳು, ಸಾಮಾನ್ಯ ಜನರು ಸಂತಾಪ ಸೂಚಿಸಿದ್ದಾರೆ. 'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಅವರಿಗೆ ಅಮೆರಿಕ ರಾಯಭಾರಿ ಕಚೇರಿ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. "ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ ದೂತಾವಾಸದಲ್ಲಿ ಪ್ರೈಡ್ ತಿಂಗಳ ಆಚರಣೆಯ ಅಂಗವಾಗಿ LGBTQi+ ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ “ನಾನು ಅವನಲ್ಲ…ಅವಳು” ಪ್ರದರ್ಶನ-ಸಂವಾದದಲ್ಲಿ ಭಾಗಿಯಾಗಿದ್ದ ಸಂಚಾರಿ ವಿಜಯ್‌. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು US Consulate Chennai ಟ್ವೀಟ್ ಮಾಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ವೇಳೆ ಸತೀಶ್ ನೀನಾಸಂ, ರಂಗಾಯಣ ರಘು, ಶಿವರಾಜ್ ಕೆ ಆರ್‌ ಪೇಟೆ, ಶಿವರಾಜ್‌ಕುಮಾರ್, ಡಾಲಿ ಧನಂಜಯ ಮುಂತಾದವರು ವಿಜಯ್‌ರನ್ನು ಕೊನೆಯದಾಗಿ ಪಾರ್ಥಿವ ಶರೀರದ ದರ್ಶನ ಮಾಡಿದ್ದಾರೆ. ಕಳೆದ ಜೂನ್ 12ರಂದು ಶನಿವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಅವರ ತಲೆ ಹಾಗೂ ತೊಡೆಗೆ ಭಾರೀ ಗಾಯವಾಗಿತ್ತು. ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ವಿಜಯ್‌ಗೆ ಚಿಕಿತ್ಸೆ ನೀಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಹುಟ್ಟೂರು ಪಂಚನಹಳ್ಳಿಯಲ್ಲಿ ಸ್ನೇಹಿತರೊಬ್ಬರ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀ ನೇತೃತ್ವದಲ್ಲಿ ಸಂಚಾರಿ ವಿಜಯ್ ಅಂತ್ಯಕ್ರಿಯೆ ನಡೆದಿದೆ.