ಬಿಗ್ ಬಾಸ್ ಖ್ಯಾತಿಯ ನಟಿ ಅಕ್ಷತಾ ಪಾಂಡವಪುರ ಮುಡಿಗೇರಿದ ಅಂತಾರಾಷ್ಟ್ರೀಯ ಪ್ರಶಸ್ತಿ!

ಕನ್ನಡ ಸಿನಿಮಾ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ‘ವೇರ್ ಈಸ್ ಪಿಂಕಿ’ ಚಿತ್ರದ ನಟನೆಗಾಗಿ ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

ಬಿಗ್ ಬಾಸ್ ಖ್ಯಾತಿಯ ನಟಿ ಅಕ್ಷತಾ ಪಾಂಡವಪುರ ಮುಡಿಗೇರಿದ ಅಂತಾರಾಷ್ಟ್ರೀಯ ಪ್ರಶಸ್ತಿ!
Linkup
ಕನ್ನಡ ರಿಯಾಲಿಟಿ ಶೋ ಮೂಲಕ ಕನ್ನಡ ಜನತೆಗೆ ಇನ್ನಷ್ಟು ಹತ್ತಿರ ಆಗಿರುವ ನಟಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ‘ವೇರ್ ಈಸ್ ಪಿಂಕಿ’ ಚಿತ್ರದ ನಟನೆಗಾಗಿ ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಅಕ್ಷತಾ ಪಡೆದುಕೊಂಡಿದ್ದಾರೆ. ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ‘ವೇರ್ ಈಸ್ ಪಿಂಕಿ’ (ಪಿಂಕಿ ಎಲ್ಲಿ) ಸಿನಿಮಾಕ್ಕೆ ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಎರಡು ಪ್ರಶಸ್ತಿ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾತನಾಡಿರುವ ಅಕ್ಷತಾ ಪಾಂಡವಪುರ ಅವರು "ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಆಗಿದ್ದು, ಇದರ ಸಂಪೂರ್ಣ ಕ್ರೆಡಿಟ್ ಅವಕಾಶ ಕೊಟ್ಟ ನಿರ್ದೇಶಕರಿಗೆ" ಎಂದು ಹೇಳಿದ್ದಾರೆ. ‘ವೇರ್ ಈಸ್ ಪಿಂಕಿ’ ಚಿತ್ರವನ್ನು ಪೃಥ್ವಿ ಕೋಣನೂರು ನಿರ್ದೇಶನ ಮಾಡಿದ್ದರು. ನಟಿ ಅಕ್ಷತಾ ಪಾಂಡವಪುರ ಮತ್ತು ನಟ ದೀಪಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನೈಜ ಘಟನೆಯನ್ನು ಆಧರಿಸಿ ಮಾಡಿರುವ ಸಿನಿಮಾ ಇದು. 8 ತಿಂಗಳ ಮಗುವೊಂದು ಕಳೆದು ಹೋದಾಗ ಆ ಮಗುವಿನ ಸುತ್ತ ಬರುವ ಪಾತ್ರಗಳ ತಲ್ಲಣವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದಕ್ಕೂ ಮುಂಚೆ ‘ಪಿಂಕಿ ಎಲ್ಲಿ’ ಸಿನಿಮಾ ಭಾರತದ ಕೋಲ್ಕತಾ, ಮುಂಬೈ (ಮಾಮಿ), ಕೇರಳ, ಜೈಪುರ್, ಪನೋರಮ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿತ್ತು. "ಆಪ್ತರು , ನಮ್ಮ ಉಸಿರು ಬಳಗದ ಸದಸ್ಯರು ಆದ 'ಅಕ್ಷತಾ ಪಾಂಡವಪುರ' ಅವರಿಗೆ ನ್ಯೂಯಾರ್ಕ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಲ್ಲಿ 'ಪಿಂಕಿ ಎಲ್ಲಿ' ಸಿನಿಮಾದ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ಪ್ರಶಸ್ತಿ ದೊರೆತಿರುವುದು ಖುಷಿ ಮತ್ತು ಹೆಮ್ಮೆಯ ವಿಷಯ. ಇಂತಹಾ ಇನ್ನಷ್ಟು ಸಾಧನೆಯ ಗರಿಗಳು ಅವರ ಮುಡಿಗೇರಲಿ , ಭವಿಷ್ಯ ಉಜ್ವಲವಾಗಲಿ ಎಂದು ಹೃತ್ಪೂರ್ವಕ ಹಾರೈಕೆ" ಎಂದು ಗೀತರಚನೆಕಾರ ಕವಿರಾಜ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುವ ಮೂಲಕ ಅಕ್ಷತಾಗೆ ಶುಭಾಶಯ ತಿಳಿಸಿದ್ದಾರೆ.