'ಡಾಲಿ' ಧನಂಜಯ 'ಹೆಡ್ ಬುಷ್' ಅಡ್ಡಕ್ಕೆ ಕಾಲಿಟ್ಟ ರವಿಚಂದ್ರನ್‌! ಇಲ್ಲಿ 'ಕ್ರೇಜಿ ಸ್ಟಾರ್' ಪಾತ್ರವೇನು?

'ಡಾಲಿ' ಧನಂಜಯ ನಟಿಸಿ, ನಿರ್ಮಿಸುತ್ತಿರುವ 'ಹೆಡ್‌ ಬುಷ್‌' ಸಿನಿಮಾದಲ್ಲಿ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ನಂತರ ಕ್ರೇಜಿ ಸ್ಟಾರ್‌ ರವಿಚಂದ್ರನ್ 'ಹೆಡ್‌ ಬುಷ್‌' ತಂಡ ಸೇರಿಕೊಂಡಿದ್ದಾರೆ.

'ಡಾಲಿ' ಧನಂಜಯ 'ಹೆಡ್ ಬುಷ್' ಅಡ್ಡಕ್ಕೆ ಕಾಲಿಟ್ಟ ರವಿಚಂದ್ರನ್‌! ಇಲ್ಲಿ 'ಕ್ರೇಜಿ ಸ್ಟಾರ್' ಪಾತ್ರವೇನು?
Linkup
'ಕ್ರೇಜಿ ಸ್ಟಾರ್‌' ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ 'ದೃಶ್ಯ 2' ಸಿನಿಮಾದ ಚಿತ್ರೀಕರಣ ಮುಗಿಸಿದ ಅವರು ಈಗ ಡಾಲಿ ನಾಯಕರಾಗಿರುವ 'ಹೆಡ್‌ ಬುಷ್‌' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಶೂನ್ಯ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿರುವ 'ಹೆಡ್‌ ಬುಷ್‌' ಸಿನಿಮಾದಲ್ಲಿ ಈಗಾಗಲೇ ಲೂಸ್‌ ಮಾದ ಯೋಗಿ, ರಘು ಮುಖರ್ಜಿ, ಪಾಯಲ್‌ ರಜಪೂತ್‌, ಶ್ರುತಿ ಹರಿಹರನ್‌ ನಟಿಸುತ್ತಿದ್ದಾರೆ. ಇವರ ಜತೆ ರವಿಚಂದ್ರನ್‌ ಸಹ ಸೇರಿಕೊಂಡಿರುವುದರಿಂದ ಇದೊಂದು ಬಹು ತಾರಾಗಣದ ಸಿನಿಮಾ ಆಗುತ್ತಿದೆ. 'ಹೆಡ್‌ಬುಷ್‌' ಬೆಂಗಳೂರಿನ ಭೂಗತ ಲೋಕವನ್ನು ಆಳಿದ ಜಯರಾಜ್‌ನ ಬಯೋಪಿಕ್‌ ಆಗಿದೆ. ಈ ಸಿನಿಮಾದಲ್ಲಿ ರವಿಚಂದ್ರನ್‌ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಅದಕ್ಕುತ್ತರ ಇಲ್ಲಿದೆ. ಮೂಲಗಳ ಪ್ರಕಾರ, ರವಿಚಂದ್ರನ್ ಇಲ್ಲಿ ಪ್ರೋಫೆಸರ್ ಪಾತ್ರ ಮಾಡಲಿದ್ದಾರಂತೆ. ಚಿತ್ರದ ಕಥೆಗೂ ಈ ಪಾತ್ರಕ್ಕೂ ಏನು ಸಂಬಂಧ ಅನ್ನೋದನ್ನು ತೆರೆಮೇಲೆ ನೋಡಬೇಕು. ಸದ್ಯ ನೆಲಮಂಗಲ ಬಳಿಯ ಮೋಹನ್‌ ಬಿ. ಕೆರೆ ಸ್ಟುಡಿಯೋದಲ್ಲಿಸೆಟ್‌ ಹಾಕಿದ್ದು, ಅಲ್ಲಿ ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರವಿಚಂದ್ರನ್‌ ಅವರು ಯಾವಾಗ ಚಿತ್ರೀಕರಣಕ್ಕೆ ಬರುತ್ತಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ನೀಡಿಲ್ಲ. ಬೆಂಗಳೂರಿನ ಮೊದಲ ಅಂಡರ್‌ವರ್ಲ್ಡ್‌ ಡಾನ್ ಆಗಿದ್ದ ಎಂ.ಪಿ. ಜಯರಾಜ್ ಬಯೋಪಿಕ್ ಆಗಿರುವ ಈ ಸಿನಿಮಾದ ಮೇಲೆ ಈಗಾಗಲೇ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ. ಇದಕ್ಕೆ ಸ್ಕ್ರಿಪ್ಟ್ ಬರೆಯುತ್ತಿರುವುದು ಅಗ್ನಿ ಶ್ರೀಧರ್ ಅನ್ನೋದು ವಿಶೇಷ. 'ಹೆಡ್‌ ಬುಷ್‌' ಸಿನಿಮಾವು ಪಾತ್ರವರ್ಗದಿಂದಲೇ ಸಾಕಷ್ಟು ಗಮನಸೆಳೆಯುತ್ತಿರುವುದು ವಿಶೇಷ. ಇನ್ನು, ಈಚೆಗಷ್ಟೇ ಹೆಡ್ ಬುಷ್ ತಂಡ ಸೇರಿಕೊಂಡಿದ್ದ ಶ್ರುತಿ ಹರಿಹರನ್, 'ಕೆಲವು ದಿನಗಳ ಹಿಂದೆ ಧನಂಜಯ ಕರೆ ಮಾಡಿ ಜಯರಾಜ್‌ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ ಕಥೆ ಕೇಳಿ ನೋಡಿ ಎಂದಿದ್ದರು. ಆಮೇಲೆ ಅಗ್ನಿ ಶ್ರೀಧರ್‌ ಅವರು ಕಥೆ ವಿವರಿಸಿದರು. ಅಗ್ನಿ ಶ್ರೀಧರ್‌ ಅವರ 'ಆ ದಿನಗಳು', 'ಎದೆಗಾರಿಕೆ' ಸಿನಿಮಾಗಳನ್ನು ನೋಡಿ ನಾನು ಅವರ ಫ್ಯಾನ್‌ ಆಗಿದ್ದೆ. ಈಗ ಅವರೇ ನನಗೆ ಕಥೆ ವಿವರಿಸಿದಾಗ ಖುಷಿಯಾಯಿತು. ಅವರ ಕಥೆಯಲ್ಲಿ ನನಗೊಂದು ಪಾತ್ರವಿರುವುದು ನನ್ನ ಸಂತೋಷವನ್ನು ಹೆಚ್ಚಿಸಿತು' ಎಂದಿದ್ದರು. ಇನ್ನು, ರವಿಚಂದ್ರನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. 'ಕನ್ನಡಿಗ', 'ರವಿ ಬೋಪಣ್ಣ' ಶೂಟಿಂಗ್ ಮುಗಿಸಿಕೊಂಡು ರಿಲೀಸ್‌ಗೆ ರೆಡಿ ಆಗಿವೆ. 'ಕನ್ನಡಿಗ' ಚಿತ್ರದಲ್ಲಿ ಕನ್ನಡದ ಲಿಪಿಕಾರ ಗುಣಭದ್ರ ಹಾಗೂ ಸಾಮಂತಭದ್ರ ಎಂಬ ಯೋಧನ ಪಾತ್ರಗಳಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಕಳೆದ ಮೇ 30ರಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಮೂರು ಹೊಸ ಸಿನಿಮಾಗಳ ಮಾಹಿತಿ ಇದ್ದ ಟೀಸರ್ ರಿಲೀಸ್ ಮಾಡಿದ್ದರು ರವಿಚಂದ್ರನ್. ಒಂದು ಸಿನಿಮಾಕ್ಕೆ 'ಗಾಡ್' ಎಂದು ಹೆಸರಿಡಲಾಗಿದ್ದು, ಮತ್ತೊಂದು '60'. ವಿಶೇಷವೆಂದರೆ, ಅದರಲ್ಲಿ ನಟಿ ಪಾವನಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಕೊನೆಯದು 'ಬ್ಯಾಡ್‌ ಬಾಯ್ಸ್'. ಇದರಲ್ಲಿ ರವಿಚಂದ್ರನ್ ಅವರೊಂದಿಗೆ ಅವರ ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂರೂ ಸಿನಿಮಾಗಳ ಕೆಲಸಗಳ ಅಪ್‌ಡೇಟ್ ಇನ್ನಷ್ಟೇ ಸಿಗಬೇಕಿದೆ.