
ಹೊಸದಿಲ್ಲಿ: ಕಳೆದ ಕೆಲವು ವಾರಗಳಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಅತೃಪ್ತಿ ವ್ಯಕ್ತಪಡಿಸಿದೆ. ಮಾಲಿನ್ಯ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದ್ದರೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
'ಯಾವ ಕೆಲಸವೂ ನಡೆದಿಲ್ಲ ಎಂದು ನಮಗೆ ಅನಿಸುತ್ತಿದೆ. ಮಾಲಿನ್ಯ ಹೆಚ್ಚುತ್ತಲೇ ಇದೆ. ಸಮಯ ಮಾತ್ರ ವ್ಯರ್ಥವಾಗುತ್ತಿದೆ. ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯದ ಬಗ್ಗೆ ಸತತ ನಾಲ್ಕು ವಾರಗಳಿಂದ ವಾದಗಳನ್ನು ಆಲಿಸುತ್ತಲೇ ಇದ್ದೇವೆ' ಎಂದು ಮುಖ್ಯ ನ್ಯಾಯಮೂರ್ತಿ ಕಿಡಿಕಾರಿದರು.
ರಾಜಧಾನಿಯ ಗಾಳಿಯ ಗುಣಮಟ್ಟವನ್ನು ಕೆಡಿಸುವಲ್ಲಿ ಕಾರಣಗಳಲ್ಲಿ ಪ್ರಮುಖವಾಗಿರುವ ಕೈಗಾರಿಕಾ ಮತ್ತು ವಾಹನ ಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ, ದಿಲ್ಲಿ ಹಾಗೂ ನೆರೆಹೊರೆಯ ರಾಜ್ಯಗಳಿಗೆ 24 ಗಂಟೆಗಳ ಗಡುವು ನೀಡಿರುವ ಸುಪ್ರೀಂಕೋರ್ಟ್, ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿರುವ ಕೋರ್ಟ್, ಮಾಲಿನ್ಯದ ಮೂಲಗಳನ್ನು ಕೂಡ ಸಮರ್ಪಕ ರೀತಿಯಲ್ಲಿ ಗುರುತಿಸಲು ಸಾಧ್ಯವಾಗದೆ ಇರುವುದು ನಿರಾಶಾದಾಯಕ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಶಾಲೆಗಳನ್ನು ಮರು ಆರಂಭಿಸಿರುವ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, 'ಮೂರು ಮತ್ತು ನಾಲ್ಕು ವರ್ಷದ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಆದರೆ ವಯಸ್ಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸರ್ಕಾರದ ಆಡಳಿತ ನಿರ್ವಹಿಸಲು ನಾವು ಯಾರನ್ನಾದರೂ ನೇಮಕ ಮಾಡುತ್ತೇವೆ' ಎಂದು ತೀಕ್ಷ್ಣವಾಗಿ ಹೇಳಿದೆ.
ದಿಲ್ಲಿ ಸರ್ಕಾರದ ಪರ ಹಾಜರಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ, 'ಶಾಲೆಗಳಲ್ಲಿ ಕಲಿಕಾ ನಷ್ಟದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆನ್ಲೈನ್ ತರಗತಿ ಆಯ್ಕೆಯನ್ನು ನೀಡುವ ಷರತ್ತಿನೊಂದಿಗೆ ಶಾಲೆಗಳನ್ನು ತೆರೆದಿದ್ದೇವೆ' ಎಂದು ಪ್ರತಿಕ್ರಿಯಿಸಿದರು.
ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ'ನೀವು ಅದನ್ನು ಆಯ್ಕೆಯಾಗಿ ನೀಡಿದ್ದಾಗಿ ಹೇಳುತ್ತಿದ್ದೀರಿ. ಆದರೆ ಮನೆಯಲ್ಲಿ ಕೂರಲು ಯಾರು ಬಯಸುತ್ತಾರೆ? ನಮಗೂ ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಸಾಂಕ್ರಾಮಿಕ ಆರಂಭದಿಂದಲೂ ಅವರು ಎದುರಿಸುತ್ತಿರುವ ಸಮಸ್ಯೆಗಳು ನಮಗೆ ಅರಿವಿದೆ. ನೀವು ಕ್ರಮ ತೆಗೆದುಕೊಳ್ಳದೆ ಇದ್ದರೆ, ನಾವು ನಾಳೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಿಮಗೆ 24 ಗಂಟೆ ಸಮಯ ನೀಡುತ್ತೇವೆ' ಎಂದು ಸಿಜೆಐ ಖಾರವಾಗಿ ಹೇಳಿದರು.
ಶಾಲೆಗಳು ಮತ್ತು ಕಚೇರಿಗಳ ಕುರಿತು ದಿಲ್ಲಿ ಸರ್ಕಾರ ಏನು ಮಾಡುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಸಿಂಘ್ವಿ ಅವರಿಗೆ ಕೋರ್ಟ್ ಸೂಚಿಸಿದೆ.
ಆಯೋಗ ಹಲ್ಲಿಲ್ಲದ ಹುಲಿಕೈಗಾರಿಕಾ ಪ್ರದೇಶಗಳ ವಿರುದ್ಧ ಕ್ರಮಗಳು ಮತ್ತು ದಿಲ್ಲಿಯಲ್ಲಿ ವಾಹನಗಳ ನೋಂದಣಿ ಕುರಿತು ಕೋರ್ಟ್ ಕಠಿಣ ಪ್ರಶ್ನೆಗಳನ್ನು ಕೇಳಿತು. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಾಯು ಮಾಲಿನ್ಯದ ಕುರಿತಾದ ಗಾಳಿ ಗುಣಮಟ್ಟ ನಿರ್ವಹಣೆ ಆಯೋಗ (CAQM) ಸಮಿತಿಗೆ ಯಾವುದೇ ನಿಯಮ ಜಾರಿಗೊಳಿಸುವ ಅಧಿಕಾರವಿಲ್ಲ ಮತ್ತು ಯಾವುದೇ ಶಿಕ್ಷೆ ವಿಧಿಸುವ ಅಧಿಕಾರವೂ ಇಲ್ಲ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ ಉಲ್ಲೇಖಿಸಿದರು.
ನೀವು ಸಕ್ರಿಯರಾಗಿ ಕೆಲಸ ಮಾಡಬೇಕು'ನಿರ್ದಿಷ್ಟ (AQI) ಕುರಿತು ಸಮಸ್ಯೆ ಉಂಟಾದಾಗ ವಿಚಾರಣೆ ಆರಂಭವಾಗಿತ್ತು. ನೀವು ಹೇಳಿಕೊಳ್ಳುತ್ತಿರುವಂತೆ ಅನೇಕ ಪ್ರಯತ್ನಗಳು ನಡೆದಿದ್ದರೆ, ಮಾಲಿನ್ಯ ಏಕೆ ಹೆಚ್ಚಾಗುತ್ತಲೇ ಇದೆ? ಸಾಮಾನ್ಯ ಮನುಷ್ಯನೂ ಕೇಳುವ ಸರಳ ಪ್ರಶ್ನೆ ಇದು. ವಕೀಲರಿಂದ ಸಾಕಷ್ಟು ವಾದಗಳು, ಸರ್ಕಾರದಿಂದ ಸಾಕಷ್ಟು ಪ್ರತಿಪಾದನೆಗಳು ನಡೆದಿವೆ. ಆದರೆ ಏಕೆ ಮಾಲಿನ್ಯ ಹೆಚ್ಚುತ್ತಿದೆ?' ಎಂದು ಸಿಜೆಐ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದರು.
'ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ನೀವು ಸಕ್ರಿಯವಾಗಿ ಹಾಗೂ ಸೃಜನಶೀಲರಾಗಿ ಕೆಲಸ ಮಾಡಬೇಕು. ಏನು ಮಾಡಬೇಕು ಎಂದು ನಾವು ಆಡಳಿತ ವರ್ಗಕ್ಕೆ ಪ್ರತಿಬಾರಿ ಹೇಳಿಕೊಡಬೇಕೇ? 20-30 ಸದಸ್ಯರ ಸಮಿತಿ ರಚಿಸುವ ಫಲವೇನು? ನಿಮ್ಮ ಆಡಳಿತದ ಒಳಗೆ ಸೃಜನಶೀಲತೆಯನ್ನು ತುರುಕಲು ಅಥವಾ ಹೇರಲು ನಮಗೆ ಸಾಧ್ಯವಿಲ್ಲ. ಅವರು ತಾವಾಗಿಯೇ ಕ್ರಮಗಳ ಬಗ್ಗೆ ಆಲೋಚಿಸಬೇಕು' ಎಂದು ಹೇಳಿದರು.