ಯೋಗಿ ಸಚಿವ ಸಂಪುಟದ ಅನಿರೀಕ್ಷಿತ ವಿಸ್ತರಣೆ: ಕಾಂಗ್ರೆಸ್ ಮಾಜಿ ಮುಖಂಡ ಜಿತೇಂದ್ರ ಪ್ರಸಾದಗೆ ಸ್ಥಾನ

ಉತ್ತರ ಪ್ರದೇಶದ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಯೋಗಿ ಆದಿತ್ಯನಾಥ್ ಅವರು ಅನಿರೀಕ್ಷಿತವಾಗಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಕಾಂಗ್ರೆಸ್‌ನ ಮಾಜಿ ಮುಖಂಡ ಜಿತೇಂದ್ರ ಪ್ರಸಾದ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ಯೋಗಿ ಸಚಿವ ಸಂಪುಟದ ಅನಿರೀಕ್ಷಿತ ವಿಸ್ತರಣೆ: ಕಾಂಗ್ರೆಸ್ ಮಾಜಿ ಮುಖಂಡ ಜಿತೇಂದ್ರ ಪ್ರಸಾದಗೆ ಸ್ಥಾನ
Linkup
ಲಕ್ನೋ: ಒಂದು ಕಾಲದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದು, ಇತ್ತೀಚೆಗೆ ಸೇರ್ಪಡೆಯಾಗಿದ್ದ ಕಾಂಗ್ರೆಸ್‌ನ ಮಾಜಿ ಮುಖಂಡ ಅವರು ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಭಾನುವಾರ ಹಠಾತ್ತನೆ ಸಚಿವ ಸಂಪುಟದ ವಿಸ್ತರಣೆಯನ್ನು ಘೋಷಿಸಲಾಗಿತ್ತು. ಸಂಪುಟ ವಿಸ್ತರಣೆಯಾಗಲಿದೆ ಮತ್ತು ತಮಗೆ ಸ್ಥಾನ ಸಿಗಲಿದೆ ಎನ್ನುವುದು ಯಾವ ಸಚಿವರಿಗೂ ತಿಳಿದಿರಲಿಲ್ಲ ಎಂದು ವರದಿಯಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬ್ರಾಹ್ಮಣರ ಮತಗಳನ್ನು ಸೆಳೆಯಲು ಜಿತೇಂದ್ರ ಪ್ರಸಾದ ಅವರ ಸೇರ್ಪಡೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವಿದೆ. ಉತ್ತರ ಪ್ರದೇಶದಲ್ಲಿ ಸುಮಾರು ಶೇ 13ರಷ್ಟು ಬ್ರಾಹ್ಮಣ ಸಮುದಾಯದ ಮತಗಳಿವೆ. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ನಿಂದ ಬಿಜೆಪಿ ಕಡೆಗೆ ಈ ಸಮುದಾಯದ ಒಲವು ಬದಲಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ 53 ಸಚಿವರಿದ್ದು, ಏಳು ಹೊಸ ಸಚಿವರ ಸೇರ್ಪಡೆಗೆ ಮಾತ್ರ ಅವಕಾಶವಿತ್ತು. ಇದರಲ್ಲಿ ಜಿತೇಂದ್ರ ಪ್ರಸಾದ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ಉಳಿದ ಆರು ಮಂದಿ ರಾಜ್ಯ ಸಚಿವ ಸ್ಥಾನ ಪಡೆದಿದ್ದಾರೆ. ಪರಿಶಿಷ್ಟ ಜಾತಿಯ ಪಲ್ತುರಾಮ್, ದಿನೇಶ್ ಖಾತೀಕ್, ಕುರ್ಮಿ ಸಮುದಾಯದ ಛತರ್ಪಾಲ್ ಗಂಗ್ವಾರ್, ಪರಿಶಿಷ್ಟ ಪಂಗಡದ ಸಂಗೀತಾ ಬಲವಂತ್ ಬಿಂಡ್, ಸಂಜೀವ್ ಕುಮಾರ್ ಗೊಂಡ್ ಅವರನ್ನು ಆಯ್ಕೆ ಮಾಡಲಾಗಿದೆ. ಮತ್ತು ಆರೆಸ್ಸೆಸ್ ಕಟ್ಟಾಳು ಧರಮ್‌ವೀರ್ ಪ್ರಜಾಪತಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಭಾನುವಾರ ಸಂಜೆ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಮುಂದಿನ ವಿಧಾನಸಭೆ ಚುನಾವಣೆಗೆ ಈಗಾಗಲೇ ಬಿಜೆಪಿ ಹಾಗೂ ನಿಶಾದ್ ಪಕ್ಷಗಳು ಮೈತ್ರಿ ಘೋಷಿಸಿವೆ. ಹೀಗಾಗಿ ಸಂಜಯ್ ನಿಶಾದ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಅವರನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅವರನ್ನು ಬಿಂಬಿಸುವ ನಿರೀಕ್ಷೆಗಳಿತ್ತು. ಆದರೆ ಅದು ಹುಸಿಯಾಗಿದೆ. 'ಬಿಜೆಪಿ ಸರ್ಕಾರದ ಒಂದು ವಂಚನೆಯಷ್ಟೇ. ನಾಲ್ಕೂವರೆ ವರ್ಷಗಳಿಂದ ಸ್ಥಾನ ಸಿಗದವರನ್ನು ಪ್ರತಿನಿಧಿಸಲು ಇಂದು ನಾಟಕ ಸೃಷ್ಟಿಸಲಾಗಿದೆ. ಈ ಹೊಸ ಸಚಿವರ ಕಚೇರಿಗಳಲ್ಲಿ ಬರೆಯುವ ನಾಮಫಲಕಗಳ ಶಾಯಿ ಒಣಗುವ ವೇಳೆಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರಲಿದೆ' ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.