ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೇರಿ ಹಲವು ಸಂಘಟನೆಗಳು ಸೋಮವಾರ ಭಾರತ್ ಬಂದ್‌ಗೆ ಕರೆ ನೀಡಿದ್ದು, ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ.
ಬೆಳಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಶಾಂತಿಯುತವಾಗಿಯೇ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ. ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಬಂದ್‌ನಿಂದ ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವ್ಯಾಪಾರಿಗಳು, ಸಣ್ಣ ಕಾರ್ಖಾನೆಗಳು ಬೆಂಬಲ ಸೂಚಿಸದ ಕಾರಣ ಎಲ್ಲ ರಾಜ್ಯಗಳಲ್ಲಿ ವ್ಯಾಪಾರ-ವಹಿವಾಟು ಎಂದಿನಂತೆಯೇ ಇರುವ ನಿರೀಕ್ಷೆ ಇದೆ. ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ರೈತರ ಬಂದ್ ಕರೆಗೆ ಬೆಂಬಲ ಸೂಚಿಸಿರುವುದರಿಂದ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.
''ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳು, ಮಾರುಕಟ್ಟೆ, ಅಂಗಡಿ-ಮುಂಗಟ್ಟು, ಕಾರ್ಖಾನೆ, ಶಾಲಾ-ಕಾಲೇಜುಗಳನ್ನು ಮುಚ್ಚಿಸಲಾಗುತ್ತದೆ. ಹಾಗೆಯೇ ಸರಕಾರಿ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೂ ಅವಕಾಶ ನೀಡುವುದಿಲ್ಲ,'' ಎಂದು ಎಸ್‌ಕೆಎಂ ತಿಳಿಸಿದೆ. ದಿನಬಳಕೆ ವಸ್ತುಗಳ ಪೂರೈಕೆಯಾಗಲಿದ್ದು, ಆಸ್ಪತ್ರೆ, ಔಷಧ ಅಂಗಡಿಗಳು ತೆರೆದಿರಲಿವೆ.
ಬೆಂಬಲ ಬೆಲೆ, ಮಾರುಕಟ್ಟೆ ವಿಸ್ತರಣೆ ಸೇರಿ ಹಲವು ಮಹತ್ವದ ಸುಧಾರಣೆಗಳುಳ್ಳ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರವು ಜಾರಿಗೊಳಿಸಿದೆ. ಸೆಪ್ಟೆಂಬರ್ 27ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೂರೂ ವಿಧೇಯಕಗಳಿಗೆ ಅಂಗೀಕಾರ ನೀಡಿದ ಕಾರಣ, ಇದೇ ದಿನವೇ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಕಳೆದ 10 ತಿಂಗಳಿಂದ ದಿಲ್ಲಿಗಡಿ ಸೇರಿ ಹಲವೆಡೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಯಾವ ಪಕ್ಷಗಳಿಂದ ಬೆಂಬಲ: ರೈತ ಸಂಘಟನೆಗಳು ನೀಡಿರುವ ಕರೆಗೆ ಬಹುತೇಕ ಪ್ರತಿಪಕ್ಷಗಳು ಒಪ್ಪಿಗೆ ಸೂಚಿಸಿದ್ದು, ಬಿಜೆಪಿಯೇತರ ಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ಸಂಪೂರ್ಣವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್, ಆಪ್, ವೈಎಸ್‌ಆರ್‌ಸಿ, ಡಿಎಂಕೆ, ತೆಲುಗು ದೇಶಂ, ಬಿಎಸ್‌ಪಿ, ಸಿಪಿಐ, ಸಿಪಿಐ(ಎಂ), ಆರ್‌ಜೆಡಿ ಸೇರಿ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ. ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯ ಸರಕಾರಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿವೆ. ಸೆ.26ರ ಮಧ್ಯರಾತ್ರಿಯಿಂದ ಸೆ.27ರ ಮಧ್ಯಾಹ್ನದವರೆಗೆ ರಾಜ್ಯ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸುವುದಾಗಿ ಆಂಧ್ರಪ್ರದೇಶ ಸರಕಾರ ಘೋಷಿಸಿದೆ. ರಾಜಕೀಯ ಪಕ್ಷಗಳ ಜತೆಗೆ 40ಕ್ಕೂ ಹೆಚ್ಚು ರೈತ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ.
ಬೆಂಬಲಿಸಲು ಕಾಂಗ್ರೆಸ್ ಸೂಚನೆ: ರೈತ ಸಂಘಟನೆಗಳು ನೀಡಿರುವ ಕರೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಯಾ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ. ''ರೈತರ ಹಿತಾಸಕ್ತಿ ಕಾಪಾಡುವುದು ಹಾಗೂ ಅವರ ಹಕ್ಕುಗಳ ಪರ ಹೋರಾಡುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ನಾವು ಭಾರತ್ ಬಂದ್‌ಗೆ ಬೆಂಬಲ ಸೂಚಿಸಿದ್ದು, ಪ್ರತಿ ರಾಜ್ಯದಲ್ಲೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ,'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ದಿಲ್ಲಿ ಪ್ರವೇಶಕ್ಕಿಲ್ಲ ಅನುಮತಿ
ಗಣರಾಜ್ಯೋತ್ಸವ ದಿನದಂದು ಪ್ರತಿಭಟನೆ ಹೆಸರಿನಲ್ಲಿ ದಿಲ್ಲಿಯಲ್ಲಿ ಹಿಂಸಾಚಾರ ನಡೆಸಿದ ಹಿನ್ನೆಲೆಯಲ್ಲಿ ದಿಲ್ಲಿ ಗಡಿಯ ಮೂರು ಕಡೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ದಿಲ್ಲಿ ಪ್ರವೇಶಿಸಲು ಅನುಮತಿ ಇಲ್ಲಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ''ದಿಲ್ಲಿಯಲ್ಲಿ ಭಾರತ್ ಬಂದ್‌ಗೆ ಕರೆ ನೀಡಿಲ್ಲವಾದರೂ ಬಿಗಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಚಲನವಲನ, ಆಯಾ ಕ್ಷಣದ ಬೆಳವಣಿಗೆಗಳು, ಹಿಂಸಾಚಾರ ತಡೆಯಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ,'' ಎಂದು ಹಿರಿಯ ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.