ಭಾರತದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಬೆದರಿಕೆ ತಂತ್ರಗಳ ಬಗ್ಗೆ ಕಳವಳವಿದೆ: ಟ್ವಿಟ್ಟರ್

ಭಾರತದ ಹೊಸ ಐಟಿ ಕಾನೂನುಗಳನ್ನು ಪಾಲಿಸಲು ಬದ್ಧವಾಗಿದ್ದೇವೆ ಎಂದು ತಿಳಿಸಿರುವ ಟ್ವಿಟ್ಟರ್, ಭಾರತದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಬೆದರಿಕೆ ಹಾಗೂ ಪೊಲೀಸರು ಅನುಸರಿಸುವ ಬೆದರಿಕೆ ತಂತ್ರಗಳ ಬಗ್ಗೆ ಆತಂಕ ಹೊಂದಿರುವುದಾಗಿ ಹೇಳಿದೆ.

ಭಾರತದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಬೆದರಿಕೆ ತಂತ್ರಗಳ ಬಗ್ಗೆ ಕಳವಳವಿದೆ: ಟ್ವಿಟ್ಟರ್
Linkup
ನವದೆಹಲಿ: ಭಾರತದ ಹೊಸ ಡಿಜಿಟಲ್ ನಿಯಮಗಳ ಬಗ್ಗೆ ಕೊನೆಗೂ ಮೌನ ಮುರಿದಿದೆ. 'ನಾವು ಸ್ಥಳೀಯ ಕಾನೂನುಗಳನ್ನು ಪಾಲಿಸಲು ಬದ್ಧರಾಗಿದ್ದೇವೆ. ಆದರೆ ಭಾರತದಲ್ಲಿನ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಇರುವ ಬೆದರಿಕೆ ಬಗ್ಗೆ ಹಾಗೂ ಪೊಲೀಸರು ಬಳಸುತ್ತಿರುವ ಬೆದರಿಕೆ ತಂತ್ರಗಳ ಬಗ್ಗೆ ಕಳವಳ ಹೊಂದಿದ್ದೇವೆ' ಎಂದು ಟ್ವಿಟ್ಟರ್ ಹೇಳಿದೆ. ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಸ್ಥಳೀಯ ಮಟ್ಟದ ಅಹವಾಲು ಸ್ಪಂದನೆ ವ್ಯವಸ್ಥೆಯನ್ನು ಅಳವಡಿಸಬೇಕು ಮತ್ತು ಕಾನೂನು ಆದೇಶಕ್ಕೆ ಅನುಗುಣವಾಗಿ 36 ಗಂಟೆಗಳ ಒಳಗಾಗಿ ಅಂಶವನ್ನು ಕಿತ್ತುಹಾಕಬೇಕಾಗುತ್ತದೆ ಎಂದು ಸರ್ಕಾರದ ಸೂಚಿಸಿದೆ. ಯಾವುದೇ ಹಾನಿಕಾರಕ ಸಂದೇಶಗಳ ಮೂಲ ಸೃಷ್ಟಿಕರ್ತರ ಜಾಡು ಪತ್ತೆಹಚ್ಚಿ ವಿವರ ಸಲ್ಲಿಸುವಂತೆಯೂ ಅದು ಹೇಳಿದೆ. ಇದು ಖಾಸಗಿತನದ ಹಕ್ಕು ಹಾಗೂ ಸಂವಿಧಾನಾತ್ಮಕ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ವಾಟ್ಸಾಪ್, ಕೋರ್ಟ್ ಮೆಟ್ಟಿಲೇರಿದೆ. 'ಟ್ವಿಟ್ಟರ್, ಭಾರತದ ಜನತೆಗೆ ಸಂಪೂರ್ಣ ಬದ್ಧವಾಗಿದೆ. ಜನರ ಮಾತುಕತೆಗಳಿಗೆ ನಮ್ಮ ಸೇವೆ ಬಹಳ ಮುಖ್ಯ ಎನ್ನುವುದು ಸಾಬೀತಾಗಿದೆ ಮತ್ತು ಇದು ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ಬೆಂಬಲದ ಮೂಲವಾಗಿದೆ. ನಮ್ಮ ಸೇವೆಗಳು ಲಭ್ಯವಾಗಿರುವಂತೆ ನೋಡಿಕೊಳ್ಳಲು ಭಾರತದಲ್ಲಿ ಅನ್ವಯವಾಗುವ ಕಾನೂನುಗಳಿಗೆ ನಾವು ಬದ್ಧರಾಗಿರುತ್ತೇವೆ. ಆದರೆ, ಜಗತ್ತಿನಾದ್ಯಂತ ಮಾಡುವಂತೆಯೇ ನಾವು ಪಾರದರ್ಶಕತೆಯ ತತ್ವ, ಸೇವೆಯಲ್ಲಿನ ಪ್ರತಿ ಧ್ವನಿಯನ್ನೂ ಸಬಲೀಕರಣಗೊಳಿಸುವ ಹಾಗೂ ಕಾನೂನಿನ ಅಡಿಯಲ್ಲಿ ಮತ್ತು ಖಾಸಗಿತನವನ್ನು ಕಾಪಾಡುವುದಕ್ಕೆ ನಾವು ಕಟಿಬದ್ಧರಾಗಿದ್ದೇವೆ' ಎಂದು ಟ್ವಿಟ್ಟರ್ ವಕ್ತಾರರು ಹೇಳಿದ್ದಾರೆ. 'ಪ್ರಸ್ತುತ ನಾವು, ಇತ್ತೀಚಿನ ಬೆಳವಣಿಗೆಗಳ ವಿಚಾರದಲ್ಲಿ ಭಾರತದಲ್ಲಿನ ನಮ್ಮ ಸಹೋದ್ಯೋಗಿಗಳಿಗೆ ಸಂಬಂಧಿಸಿದಂತೆ ಮತ್ತು ನಾವು ಸೇವೆ ಸಲ್ಲಿಸುವ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ದೊಡ್ಡ ಬೆದರಿಕೆ ಬಗ್ಗೆ ಕಳವಳ ಹೊಂದಿದ್ದೇವೆ. ಭಾರತ ಹಾಗೂ ಜಗತ್ತಿನಾದ್ಯಂತ ಅನೇಕ ನಾಗರಿಕ ಸಮಾಜದ ಜತೆಗೆ, ನಮ್ಮ ಜಾಗತಿಕ ಸೇವೆಗಳ ನಿಯಮಗಳ ಜಾರಿ ಕುರಿತು ಹಾಗೂ ಹೊಸ ಐಟಿ ನಿಯಮಗಳ ಮೂಲ ಅಂಶಗಳ ವಿಚಾರವಾಗಿ ಪೊಲೀಸರು ಬಳಸುತ್ತಿರುವ ಬೆದರಿಕೆ ತಂತ್ರಗಳ ಬಗ್ಗೆ ಆತಂಕವಿದೆ. ನಿರ್ಬಂಧರಹಿತ, ಮುಕ್ತ ಸಾರ್ವಜನಿಕ ಮಾತುಕತೆಗಾಗಿ ಈ ನಿಯಮಗಳಲ್ಲಿನ ಕೆಲವು ಅಂಶಗಳಲ್ಲಿ ಬದಲಾವಣೆಗಳಿಗಾಗಿ ಪ್ರತಿಪಾದಿಸಲು ನಾವು ಉದ್ದೇಶಿಸಿದ್ದೇವೆ. ಭಾರತ ಸರ್ಕಾರದೊಂದಿಗಿನ ನಮ್ಮ ರಚನಾತ್ಮಕ ಮಾತುಕತೆಯನ್ನು ಮುಂದುವರಿಸಲಿದ್ದೇವೆ. ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸುವುದು ಚುನಾಯಿತ ಅಧಿಕಾರಿಗಳು, ಕೈಗಾರಿಕೆ ಮತ್ತು ನಾಗರಿಕ ಸಮಾಜದ ಸಾಮೂಹಿಕ ಹೊಣೆಗಾರಿಕೆಯಾಗಿದೆ' ಎಂದು ಅದು ಹೇಳಿಕೆ ನೀಡಿದೆ. ಸಿಇಒ ಹೇಳಿಕೆ ಗೂಗಲ್ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿದೆ ಮತ್ತು ವೇಗವಾಗಿ ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದ ಪರಿಶೀಲನೆ ಹಾಗೂ ನಿಯಂತ್ರಣ ಚೌಕಟ್ಟುಗಳನ್ನು ರೂಪಿಸುತ್ತಿರುವ ಸರ್ಕಾರದ ಜತೆ ರಚನಾತ್ಮಕವಾಗಿ ತೊಡಗಿಕೊಳ್ಳುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. 'ಇದು ಇನ್ನೂ ಆರಂಭಿಕ ದಿನಗಳು. ನಮ್ಮ ಸ್ಥಳೀಯ ತಂಡಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಂಡಿವೆ. ನಾವು ಕೆಲಸ ಮಾಡುವ ಪ್ರತಿ ದೇಶದ ಸ್ಥಳೀಯ ಕಾನೂನುಗಳನ್ನು ಗೌರವಿಸುತ್ತೇವೆ. ನಾವು ಸ್ಪಷ್ಟವಾದ ಪಾರದರ್ಶಕ ವರದಿಗಳನ್ನು ಹೊಂದಿದ್ದೇವೆ. ಸರ್ಕಾರದ ಮನವಿಗಳನ್ನು ಪಾಲಿಸುವಾಗ ಅವುಗಳನ್ನು ನಮ್ಮ ಪಾರದರ್ಶಕತೆ ವರದಿಯಲ್ಲಿ ಮುಖ್ಯವಾಗಿ ಉಲ್ಲೇಖಿಸುತ್ತೇವೆ' ಎಂದು ಅವರು ಹೇಳಿದ್ದಾರೆ.