ಅಡುಗೆ ಎಣ್ಣೆ ದರ 180 ರೂ.ಗೆ ಹೆಚ್ಚಳ, 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ

ಖಾದ್ಯ ತೈಲ ದರ ಕಳೆದ 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದ್ದು, ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಸಿತ ಮತ್ತು ಸರಕಾರ ಆಮದು ಸುಂಕ ಏರಿಕೆ ಮಾಡಿದ್ದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಅಡುಗೆ ಎಣ್ಣೆ ದರ 180 ರೂ.ಗೆ ಹೆಚ್ಚಳ, 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ
Linkup
ಮುಂಬಯಿ: ಖಾದ್ಯ ತೈಲ ದರ ಕಳೆದ 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. 80 ರೂ.ಗಳಿಂದ 180 ರೂ. ತನಕ ದರ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಸಿತ, ಆಮದು ಸುಂಕಗಳ ಪರಿಣಾಮ ದರ ಏರಿಕೆಯಾಗಿದೆ. ಸೂರ್ಯಕಾಂತಿ, ಸೋಯಾಬೀನ್‌, ಸಾಸಿವೆ ಎಣ್ಣೆ ದರ ಕಳೆದ 2020ರಿಂದ ಭಾರಿ ಏರಿಕೆ ದಾಖಲಿಸಿವೆ. ಪ್ರತಿ ಲೀಟರ್‌ಗೆ 80 ರೂ.ಗಳಿಂದ 180 ರೂ.ಗೆ ಜಿಗಿದಿದೆ. ಜನ ಸಾಮಾನ್ಯರಿಗೆ ಹಾಗೂ ಮಧ್ಯಮ ವರ್ಗದ ಜನತೆಗೆ ದುಬಾರಿಯಾಗಿ ಪರಿಣಮಿಸಿದೆ. ಕಳೆದ 11 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ದರಗಳು ಜಿಗಿದಿರುವುದರಿಂದ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಭಾರತವು ಶೇ.65ರಷ್ಟು ಖಾದ್ಯ ತೈಲವನ್ನು ಆಮದು ಮಾಡುತ್ತದೆ. ಜಾಗತಿಕ ಮಟ್ಟದಲ್ಲಿ ಉತ್ಪಾದನೆಯ ಕೊರತೆ ಹಾಗೂ ಸರಕಾರದ ಆಮದು ಸುಂಕ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಖಾದ್ಯ ತೈಲ ದರಗಳು ಏರಿಕೆಯಾಗಿವೆ. ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಜನತೆಯ ಆದಾಯದ ಮಟ್ಟದಲ್ಲಿಯೂ ಕುಸಿತ ಸಂಭವಿಸಿದೆ. ಆದ್ದರಿಂದ ಅಡುಗೆ ಎಣ್ಣೆ ತುಟ್ಟಿಯಾಗಿರುವುದು ಮತ್ತೊಂದು ಹೊರೆಯಾಗಿದೆ. ಇ-ಕಾಮರ್ಸ್‌ ತಾಣಗಳಲ್ಲೂ ಅಡುಗೆ ಎಣ್ಣೆಗಳ ದರ 180 ರೂ. ಆಸುಪಾಸಿನಲ್ಲಿದೆ. '' ಭಾರತವು ಮಲೇಷ್ಯಾ, ಇಂಡೊನೇಷ್ಯಾ, ಅರ್ಜೆಂಟೀನಾ, ಬ್ರೆಜಿಲ್‌, ಉಕ್ರೇನ್‌ನಿಂದ ವಾರ್ಷಿಕ 1.35 ಕೋಟಿ ಟನ್‌ ಖಾದ್ಯ ತೈಲವನ್ನು ಆಮದು ಮಾಡುತ್ತದೆ. ಒಟ್ಟು ಬಳಕೆಯು 2.2 ಕೋಟಿ ಟನ್‌ನಷ್ಟಿದೆ. ಉತ್ಪಾದನೆ ಕೊರತೆಯಿಂದ ದರಗಳು ಇಮ್ಮಡಿಯಾಗಿವೆ. ಜತೆಗೆ ಭಾರತ ಕೂಡ ಖಾದ್ಯ ತೈಲಗಳ ಆಮದು ಮೇಲೆ ಶೇ.35ರಷ್ಟು ಸುಂಕ ವಿಧಿಸುತ್ತದೆ" ಎಂದು ಭಾರತೀಯ ಖಾದ್ಯ ತೈಲ ಉತ್ಪಾದಕರ ಸಂಘಟನೆಯ ಅಧ್ಯಕ್ಷ ಸುಧಾಕರ್‌ ದೇಸಾಯಿ ಹೇಳಿದ್ದಾರೆ. ಅಡುಗೆ ಎಣ್ಣೆ ದುಬಾರಿಯಾದ್ದರಿಂದ ಹೋಟೆಲ್‌ ಉದ್ದಿಮೆಗೂ ಸಮಸ್ಯೆಯಾಗಿದೆ. ಸರಕಾರ ಏನು ಮಾಡಬಹುದು?
  • ಸರಕಾರ ಆಮದು ಸುಂಕವನ್ನು ತಗ್ಗಿಸುವ ಮೂಲಕ ಖಾದ್ಯ ತೈಲ ದರ ಇಳಿಕೆಗೆ ಸಹಕರಿಸಬಹುದು.
  • ಸ್ಥಳೀಯ ಮಿಲ್‌ಗಳ ಮೂಲಕ ಖಾದ್ಯ ತೈಲವನ್ನು ಖರೀದಿಸಿ ರೇಷನ್‌ ಅಂಗಡಿಗಳ ಮೂಲಕ ವಿತರಿಸಬಹುದು.
  • ದೀರ್ಘಕಾಲೀನ ಪರಿಹಾರಕ್ಕಾಗಿ ದೇಶದಲ್ಲಿಯೇ ಖಾದ್ಯ ತೈಲ ಬೆಳೆಗಳಿಗೆ ಉತ್ತೇಜನ ನೀಡಬಹುದು. ಇದರಿಂದ ಆಮದು ತಗ್ಗಿಸಬಹುದು. ರೈತರಿಗೂ ಆದಾಯ ವೃದ್ಧಿಸಲಿದೆ.